ವೀಡಿಯೊ….| ಮನೆ ಹೊರಗೆ ನಿಂತಿದ್ದವನ ಮೇಲೆ ಗುಂಡಿನ ದಾಳಿ : ಪೊರಕೆ ಕೋಲು ಹಿಡಿದು ಶೂಟರ್‌ ಗಳನ್ನು ಓಡಿಸಿದ ಧೈರ್ಯಶಾಲಿ ಮಹಿಳೆ

ಭಿವಾನಿ (ಹರಿಯಾಣ) : ಹರಿಯಾಣದ ಭಿವಾನಿಯಲ್ಲಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮನೆಯ ಹೊರಗೆ ನಿಂತಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯ ಸಮಯದಲ್ಲಿ, ಪೊರಕೆ ಹಿಡಿದ ಮಹಿಳೆಯೊಬ್ಬರು ದಾಳಿಕೋರರನ್ನು ಧೈರ್ಯದಿಂದ ಎದುರಿಸಿ ದಾಳಿಕೋರರು ಸ್ಥಳದಿಂದ ಓಡಿಹೋಗುವಂತೆ ಮಾಡಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ತನ್ನ ಮನೆಯ ಹೊರಗೆ ನಿಂತಿದ್ದ ಸ್ಥಳೀಯ ನಿವಾಸಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ದೃಶ್ಯಗಳು ಸೆರೆಯಾಗಿದೆ. ರವಿ ಬಾಕ್ಸರ್ ಎಂಬಾತನ ಹತ್ಯೆ ಪ್ರಕರಣದ ಆರೋಪಿಯಾಗಿರುವ ಹರಿಕಿಶನ್ ಎಂಬಾತನಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆ ಸಂಪರ್ಕವಿದೆ ಎಂದು ಶಂಕಿಸಲಾಗಿದೆ. ಹರಿಕಿಶನ್ ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಸುಮಾರು ಮೂರು ತಿಂಗಳ ಹಿಂದೆ ಭಿವಾನಿ ಪೊಲೀಸರು ಹರಿಕಿಶನ್ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ ಶಂಕೆ ಮೇಲೆ ಐವರನ್ನು ಬಂಧಿಸಿದ್ದರು.
ಭಾನುವಾರ ಬೆಳಗ್ಗೆ 7:30ರ ಸುಮಾರಿಗೆ ಭಿವಾನಿಯ ಡಾಬರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಶೂಟರ್‌ಗಳು ಒಂಬತ್ತು ಸುತ್ತು ಗುಂಡು ಹಾರಿಸಿದ ಸದ್ದು ಕೇಳಿಬರುತ್ತಿದೆ. ಹರಿಕಿಶನ್‌ಗೆ ನಾಲ್ಕು ಬುಲೆಟ್‌ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಘಾಟ್‌ಕೋಪರ್‌ ಹೋರ್ಡಿಂಗ್ ಕುಸಿತ ದುರಂತ : ಉದಯಪುರದಲ್ಲಿ ಜಾಹೀರಾತು ಫಲಕದ ಮಾಲೀಕನ ಬಂಧನ

ಗಾಯಗೊಂಡ ಆತನನ್ನು ಚಿಕಿತ್ಸೆಗಾಗಿ ರೋಹ್ಟಕ್‌ ಪಿಜಿಐಎಂಎಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ ಮತ್ತು ಶೂಟರ್‌ಗಳು ಮತ್ತು ಅವರೊಂದಿಗೆ ಬಂದ ಇಬ್ಬರು ಸವಾರರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಿಸಿಟಿವಿ ದೃಶ್ಯಾವಳಿಯು ಹರಿಕಿಶನ್ ತನ್ನ ಮನೆಗೆ ಹೋಗುವ ಗೇಟಿನ ಪಕ್ಕದಲ್ಲಿ ನಿಂತಿರುವುದರಿಂದ ಆರಂಭವಾಗುತ್ತದೆ. ಸ್ವಲ್ಪಹೊತ್ತಿನಲ್ಲೇ ಎರಡು ಬೈಕ್‌ಗಳು ಆತನ ಬಳಿ ನಿಲ್ಲುತ್ತವೆ. ಹಿಂದಿನ ಸವಾರರು ಇಳಿದುಬಂದು ಹರಿಕಿಶನ್‌ ಮೇಲೆ ಏಕಾಏಕಿ ಗುಂಡು ಹಾರಿಸುತ್ತಾರೆ. ಹರಿಕಿಶನ್ ಗೇಟುಗಳ ಹಿಂದೆ ಓಡಲು ತಿರುಗುತ್ತಾನೆ. ಆಗ ಗೇಟ್‌ಗಳ ಹೊರಗೆ ಮುಕ್ಕರಿಸಿ ಬೀಳುತ್ತಾನೆ, ತನ್ನ ಮೇಲೆ ಗುಂಡಿನ ದಾಳಿ ನಡೆಯುತ್ತಿರುವಾಗಲೇ ಎದ್ದು ಒಳಗೆ ಓಡಿ ಹೋಗಿ ಮನೆಯ ಗೇಟ್‌ ಅನ್ನು ಮುಚ್ಚುವಲ್ಲಿ ಆತ ಯಶಸ್ವಿಯಾಗುತ್ತಾನೆ.

ಆದರೂ ಶೂಟರ್‌ಗಳು ಗೇಟ್‌ಗಳ ಬಳಿಗೆ ಗುಂಡು ಹಾರಿಸುವುದನ್ನು ಮುಂದುವರೆಸಿದ್ದಾರೆ. ಗುಂಡಿನ ಶಬ್ದ ಕೇಳಿ ಎದುರು ಮನೆಯಿಂದ ಮಹಿಳೆ ಹೊರಬರುತ್ತಾಳೆ. ಶೂಟ್‌ ಮಾಡುತ್ತಿದ್ದವರು ಹರಿಕಿಶನ್‌ ಮನೆಯ ಗೇಟ್‌ ತೆರೆಯಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಆಗ ಮಹಿಳೆ ತಲೆಕೆಳಗಾಗಿ ಉದ್ದವಿರುವ ತೆಂಗಿನ ಪೊರಕೆ ಹಿಡಿದು ಗನ್‌ ಹಿಡಿದಿದ್ದ ದಾಳಿಕೋರರನ್ನು ಧೈರ್ಯವಾಗಿ ಎದುರಿಸುವುದು ಸಹ ವೀಡಿಯೊದಲ್ಲಿ ಕಂಡುಬರುತ್ತದೆ.
ಶೂಟರ್‌ಗಳು, ಮಹಿಳೆ ಧೈರ್ಯಕ್ಕೆ ಬೆಚ್ಚಿ ಬಿದ್ದು ಪರಾರಿಯಾಗುತ್ತಾರೆ, ಆದರೆ ಅವರಲ್ಲಿ ಒಬ್ಬ ಮಹಿಳೆಯ ಮೇಲೆ ಗುಂಡು ಹಾರಿಸುತ್ತ ಓಡುತ್ತಾನೆ. ಆದರೆ ಅವಳು ತಪ್ಪಿಸಿಕೊಳ್ಳುತ್ತಾಳೆ. ನಂತರ ನಾಲ್ವರು ಬೈಕ್‌ಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಆಕೆ ಆತನ ಏನಾಗಿದೆ ಎಂದು ಪರಿಶೀಲಸಲು ಮನೆ ಬಳಿ ಹೋಗುತ್ತಿರುವುದು ಕಂಡುಬರುತ್ತದೆ. ಮಹಿಳೆಯು ಹರಿಕಿಶನ್ ಕುಟುಂಬದ ಸದಸ್ಯರೋ ಅಥವಾ ನೆರೆಹೊರೆಯವರೋ ಎಂಬುದು ಸ್ಪಷ್ಟವಾಗಿಲ್ಲ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement