ಮಮತಾ ಗಾಯಗೊಂಡ ಘಟನೆ: ಪ್ರಜಾಪ್ರಭುತ್ವದ ಮೇಲಿನ ಹಲ್ಲೆ ಎಂದ ಹಲವು ನಾಯಕರು, ಬೃಹನ್‌ ನಾಟಕ ಎಂದ ಬಿಜೆಪಿ, ಎಡಪಕ್ಷಗಳು

ಚಿತ್ರಕೃಪೆ-ಇಂಟರ್ನೆಟ್‌

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಪ್ರಚಾರ ನಡೆಸುತ್ತಿರುವಾಗ ಬುಧವಾರ ಗಾಯಗೊಂಡ ನಂತರ ಅವರನ್ನು ಕೊಲ್ಕತ್ತಾಕ್ಕೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಘಟನೆಯನ್ನು ತನ್ನ ಮೇಲೆ ನಡೆದ ದಾಳಿ ಎಂದು ಹೇಳಿದ್ದರೆ ಪ್ರತ್ಯಕ್ಷ ದರ್ಶಿಗಳು ಇದು ಅಪಘಾತದಿಂದ ಸಂಭವಿಸಿದ ಘಟನೆ ಎಂದು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಅಲ್ಲದೆ ತೃಣಮೂಲ ಕಾಂಗ್ರೆಸ್‌ ವಿರೋಧಿಗಳು ಇದನ್ನು ಬೃಹನ್‌ ನಾಟಕ ಎಂದು ಹೇಳಿದ್ದಾರೆ. ಬಿಜೆಪಿ ಇದೊಂದು ಚುನಾವಣಾ ನಾಟಕ ಎಂದು ಹೇಳಿ ಕೆಲವು ವಿಡಿಯೋ ತುಣುಕುಗಳನ್ನು ಸಹ ಬಿಡುಗಡೆ ಮಾಡಿದೆ.
ಸಿಪಿಐ (ಎಂ) ನಾಯಕ ಎಂ.ಡಿ. ಸಲೀಮ್ ಇದು ಸ್ಟೇಜ್ಡ್ ಡ್ರಾಮಾ ಎಂದು ಹೇಳಿದ್ದಾರೆ. ಈ ಘಟನೆ ಈಗ ರಾಜಕೀಯ ತೀವ್ರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು ಬಿಜೆಪಿ ವಿರೋಧಿಗಳು ಮಮತಾ ಬೆಂಬಲಕ್ಕೆ ನಿಂತಿದ್ದು ಈ ಘಟನೆಯನ್ನು ಪ್ರಜಾಪ್ರಭುತ್ವದ ಮೇಲಿನ ಹಲ್ಲೆ ಎಂದು ಬಣ್ಣಿಸಿವೆ.
ಸಹಾನುಭೂತಿ ಪಡೆಯಲು ಇದು “ಯೋಜಿತ ನಾಟಕ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದರೆ ಮತ್ತೊಬ್ಬ ಕಾಂಗ್ರೆಸ್‌ ನಾಯಕ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್‌ ಇದು ಅತ್ಯಂತ ದುಃಖಕರ ವಿಷಯ. ಇದರ ಹಿಂದೆ ಇರುವವರನ್ನು ಹಿಡಿದು ಶಿಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್‌ ಮುಖಂಡ ಮನೀಶ್‌ ತಿವಾರಿ ಈ ಘಟನೆ ಖಂಡಿಸಿದ್ದು, ಹಿಂಸಾಚಾರಕ್ಕೆ ರಾಜಕೀಯದಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದಾರೆ ಅಲ್ಲದೆ ಮಮತಾ ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಹಾರೈಸಿ ಟ್ವೀಟ್‌ ಮಾಡಿದ್ದಾರೆ.
ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಮಮತಾ ಬೆಂಬಲಕ್ಕೆ ನಿಂತಿದ್ದು ಘಟನೆ ಖಂಡಿಸಿ ಟ್ವೀಟ್‌ ಮಾಡಿದ್ದಾರೆ.
ಮಮತಾ ದೀದಿ ಮೇಲಿನ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಘಟನೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಿ ಶಿಕ್ಷಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಮಮತಾ ಹಾಗೂ ಅಧಿಕಾರಿಗಳ ಮೇಲಿನ ನಾಚಿಕೆಗೇಡಿನ ದಾಳಿ ಭಾರತೀಯ ಪ್ರಜಾಪ್ರಭುತ್ವದ ಮೇಲಿನ ಆಕ್ರಮಣವಾಗಿದೆ. ಇಂತಹ ಅಪರಾಧವನ್ನು ಮಾಡಿದವರನ್ನು ತಕ್ಷಣ ಶಿಕ್ಷಿಸಬೇಕು. ಪೊಲೀಸ್ ಇಲಾಖೆ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಮಮತಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಟ್ವೀಟ್‌ ಮಾಡಿದ್ದಾರೆ.
ಬಿಹಾರದ ಪ್ರತಿಪಕ್ಷದ ನಾಯಕ ಮತ್ತು ಆರ್‌ಜೆಡಿ ಶಾಸಕ ತೇಜಸ್ವಿ ಯಾದವ್ ಟ್ವೀಟ್‌ ಮಾಡಿ, ಗೂಂಡಾಗಳಿಂದ ಮಮತಾ ಮೇಲೆ ನಡೆದ ದಾಳಿ ಹೇಡಿತನದ್ದು. ನಾನು ಇದನ್ನು ಖಂಡಿಸುತ್ತೇನೆ. ಪಿಎಸ್ – ಡಬ್ಲ್ಯೂಬಿ ಪೊಲೀಸರನ್ನು ಈಗ ಚುನಾವಣೆ ಆಯೋಗ ನಿಯಂತ್ರಿಸುತ್ತದೆ, ಇದನ್ನು ಬಿಜೆಪಿ ನಿರ್ದೇಶಿಸುತ್ತದೆ. ಪ್ರಜಾಪ್ರಭುತ್ವದ ಬಗ್ಗೆ ಯಾವುದೇ ನಂಬಿಕೆಯಿಲ್ಲದವರು ತಮ್ಮ ಹತಾಶೆ ಹೊರಹಾಕಲು ಯಾವುದೇ ಮಟ್ಟಕ್ಕೆ ಇಳಿಯಬಹುದು ಎಂದು ರಾಷ್ಟ್ರಕ್ಕೆ ತಿಳಿದಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಜನಾಂಗೀಯ ಕಾಮೆಂಟ್‌ ವಿವಾದದ ಬೆನ್ನಲ್ಲೇ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್‌ ಪಿತ್ರೋಡಾ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement