ಇದು ವಿಶ್ವದ ಅತ್ಯಂತ ದುಬಾರಿ ಟಾಯ್ಲೆಟ್‌ ; ಇದರ ಹರಾಜಿನ ಆರಂಭಿಕ ಬೆಲೆ ₹ 88 ಕೋಟಿಗೂ ಅಧಿಕ…! ಇದರ ವಿಶೇಷವೇನು..?

ವಿಶ್ವದ ಅತ್ಯಂತ ದುಬಾರಿ ಶೌಚಾಲಯ(toilet)ವೆಂದೇ ಹೆಸರಾಗಿರುವ ‘ಅಮೆರಿಕ’ ಇದೀಗ ಹರಾಜಿಗೆ ಸಿದ್ಧವಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ ಇದರ ಆರಂಭಿಕ ಬಿಡ್‌ (ಬಿಡ್ಡಿಂಗ್) $10 ಮಿಲಿಯನ್‌ (  88 ಕೋಟಿ ರೂಪಾಯಿಗಳಿಗೂ ಹೆಚ್ಚು) ಇರಲಿದೆ. ಇದು ದೇಶದ ಹೆಸರಲ್ಲ, ಬದಲಾಗಿ ಈ ಶೌಚಾಲಯದ ಹೆಸರು ಎಂಬುದು ವಿಶೇಷ.
ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ (Maurizio Cattelan) ಅವರು ಕೆತ್ತಿರುವ ಈ ಚಿನ್ನದ ಟಾಯ್ಲೆಟ್‌ನ ಶೀರ್ಷಿಕೆ ಅಥವಾ ಹೆಸರು “ಅಮೆರಿಕ” (America) ಎಂಬುದಾಗಿದೆ ಅಷ್ಟೆ.
ಇದು ಸಂಪೂರ್ಣವಾಗಿ ಗಟ್ಟಿ ಚಿನ್ನದಿಂದ (Solid Gold) ಮಾಡಲ್ಪಟ್ಟಿದೆ. ಇದರ ತೂಕ ಬರೋಬ್ಬರಿ 101.2 ಕಿಲೋಗ್ರಾಂ (223 ಪೌಂಡ್‌ಗಳು).
ಇದರ ಪ್ರಸ್ತುತ ಚಿನ್ನದ ಮೌಲ್ಯವೇ ಸುಮಾರು $10 ಮಿಲಿಯನ್ ( 88 ಕೋಟಿ ರೂಪಾಯಿಗಳಿಗೂ ಹೆಚ್ಚು) ಇದ್ದು, ಇದೇ ಮೊತ್ತವನ್ನು ಹರಾಜಿನ ಆರಂಭಿಕ ಬೆಲೆಯಾಗಿ ನಿಗದಿಪಡಿಸಲಾಗಿದೆ. ಈ ಕಲಾಕೃತಿಯನ್ನು ಸೋಥೆಬಿಸ್‌ (Sotheby’s) ಸಂಸ್ಥೆಯು ನವೆಂಬರ್ 8 ರಿಂದ ನ್ಯೂಯಾರ್ಕ್‌ನಲ್ಲಿ ಹರಾಜು ಹಾಕಲಿದೆ.

ಹರಾಜು ಸಂಸ್ಥೆಯಾದ ಸೋಥೆಬಿಸ್, ಇದನ್ನು “ಕಲಾತ್ಮಕ ತಯಾರಿಕೆ ಎಂದು ಬಣ್ಣಿಸಿದೆ. ಈ ಗಟ್ಟಿ ಚಿನ್ನದ ಶೌಚಾಲಯವು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಟಾಯ್ಲೆಟ್ ಆಗಿದೆ. 2019 ರಲ್ಲಿ ಇಂಗ್ಲೆಂಡ್‌ನ ಬ್ಲೆನ್‌ಹೈಮ್ ಅರಮನೆಯಿಂದ (Blenheim Palace) ಕಳುವಾದ ಶೌಚಾಲಯದಂತೆಯೇ ಇದು ಹೋಲುತ್ತದೆ.
ಇದಕ್ಕೆ ‘ಅಮೆರಿಕ’ ಹೆಸರು ಏಕೆ?
ಕಲಾವಿದ ಮೌರಿಜಿಯೊ ಕ್ಯಾಟೆಲನ್ ಅವರು ಈ ಚಿನ್ನದ ಶೌಚಾಲಯಕ್ಕೆ ವಿಪರೀತ ಸಂಪತ್ತನ್ನು ವ್ಯಂಗ್ಯ ಮಾಡುವ ಉದ್ದೇಶದಿಂದ ಹಾಸ್ಯಮಯವಾಗಿ ‘ಅಮೆರಿಕ’ ಎಂದು ಹೆಸರಿಸಿದ್ದಾರೆ. ಕ್ಯಾಟೆಲನ್ ಒಮ್ಮೆ, “ನೀವು $200 ಊಟ ಮಾಡಿದರೂ ಸರಿ, ಅಥವಾ $2 ಊಟ ತಿಂದರೂ ಸರಿ, ಶೌಚಾಲಯದ ವಿಷಯದಲ್ಲಿ ಫಲಿತಾಂಶ ಒಂದೇ ಆಗಿರುತ್ತದೆ” ಎಂದು ಹೇಳುವ ಮೂಲಕ ತಮ್ಮ ಆಶಯವನ್ನು ವಿವರಿಸಿದ್ದರು.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಹಿಂದಿನ ಕಥೆ ಮತ್ತು ಕಳ್ಳತನ
ಕ್ಯಾಟೆಲನ್ 2016 ರಲ್ಲಿ ಈ ‘ಅಮೆರಿಕ’ದ ಎರಡು ಆವೃತ್ತಿಗಳನ್ನು ರಚಿಸಿದರು. ಈಗ ಹರಾಜಾಗುತ್ತಿರುವ ಟಾಯ್ಲೆಟ್‌ 2017 ರಿಂದ ಹೆಸರಿಸದ ಒಬ್ಬ ಸಂಗ್ರಾಹಕರ ಒಡೆತನದಲ್ಲಿದೆ. ಮತ್ತೊಂದು ಆವೃತ್ತಿಯನ್ನು 2016 ರಲ್ಲಿ ನ್ಯೂಯಾರ್ಕ್‌ನ ಗುಗೆನ್‌ಹೈಮ್ ಮ್ಯೂಸಿಯಂ (Guggenheim Museum) ನಲ್ಲಿ ಪ್ರದರ್ಶಿಸಲಾಗಿತ್ತು ಮತ್ತು 1,00,000 ಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿತ್ತು.
ನಂತರ, ಗುಗೆನ್‌ಹೈಮ್ ಮ್ಯೂಸಿಯಂ ಈ ಕಲಾಕೃತಿಯನ್ನು ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಉಡುಗೊರೆಯಾಗಿ ನೀಡಲು ಮುಂದಾಗಿತ್ತು. (ಅವರು ವ್ಯಾನ್ ಗಾಗ್ ಅವರ ಚಿತ್ರಕಲೆಯನ್ನು ಎರವಲು ಕೇಳಿದ ನಂತರ). ಆದರೆ, ಟ್ರಂಪ್‌ಗೆ ನೀಡಲಾದ ಆ ಆವೃತ್ತಿಯನ್ನು 2019 ರಲ್ಲಿ ಇಂಗ್ಲೆಂಡ್‌ನ ಬ್ಲೆನ್‌ಹೈಮ್ ಅರಮನೆಯಲ್ಲಿ ಪ್ರದರ್ಶನಕ್ಕೆ ಇರಿಸಿದಾಗ, ಅದನ್ನು ಕಳ್ಳತನದ ಮೂಲಕ ಅಪಹರಿಸಲಾಗಿತ್ತು. ಕಳ್ಳತನ ಮಾಡಿದ ಇಬ್ಬರು ಕಳ್ಳರಿಗೆ ಈ ವರ್ಷದ ಆರಂಭದಲ್ಲಿ ಶಿಕ್ಷೆ ವಿಧಿಸಲಾಗಿದೆಯಾದರೂ, ಚಿನ್ನದ ಶೌಚಾಲಯವು ಮಾತ್ರ ಇನ್ನೂ ಪತ್ತೆಯಾಗಿಲ್ಲ. ತನಿಖಾಧಿಕಾರಿಗಳು ಇದನ್ನು ಕರಗಿಸಿ ಮಾರಾಟವಾಗಿದೆ ಎಂದು ನಂಬಿದ್ದಾರೆ.

ಎಷ್ಟು ಬೆಲೆಗೆ ಮಾರಾಟವಾಗಬಹುದು?
ಸೋಥೆಬಿಸ್‌ನ ಸಮಕಾಲೀನ ಕಲೆಯ ಮುಖ್ಯಸ್ಥರಾದ ಡೇವಿಡ್ ಗ್ಯಾಲ್ಬೆರಿನ್ ಅವರ ಪ್ರಕಾರ, ‘ಅಮೆರಿಕ’ ಟಾಯ್ಕೆಟ್‌ ಎಷ್ಟು ಬೆಲೆಗೆ ಮಾರಾಟವಾಗಬಹುದು ಎಂದು ಊಹಿಸುವುದು ಕಷ್ಟ. ಆದರೆ, ಈ ಕಲಾಕೃತಿಗೆ ಬಳಸಿದ ವಸ್ತುಗಳ (ಚಿನ್ನ) ಕಾರಣದಿಂದಾಗಿ ಆಂತರಿಕ ಮೌಲ್ಯವು ಹೆಚ್ಚಾಗಿದೆ. ಆದ್ದರಿಂದ, ಇದು ಕನಿಷ್ಠ ತನ್ನ ಚಿನ್ನದ ಬೆಲೆಯಷ್ಟಾದರೂ, ಅಂದರೆ $10 ಮಿಲಿಯನ್ ಆರಂಭಿಕ ಬೆಲೆಗಾದರೂ ಮಾರಾಟವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಪ್ರವಾಸಿಗರಿಗೆ ಬಳಕೆಗೆ ಅವಕಾಶವಿದೆಯೇ?
ಈ ಹಿಂದೆ ಗುಗೆನ್‌ಹೈಮ್ ಮತ್ತು ಬ್ಲೆನ್‌ಹೈಮ್ ಅರಮನೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದಾಗ, ಈ ಶೌಚಾಲಯವು ಪ್ಲಂಬಿಂಗ್ ವ್ಯವಸ್ಥೆಗೆ ಸಂಪರ್ಕಗೊಂಡಿತ್ತು. ಹೀಗಾಗಿ ಸಂದರ್ಶಕರು 3 ನಿಮಿಷಗಳ ಕಾಲ ಇದನ್ನು ಬಳಸಲು ಅವಕಾಶವಿತ್ತು.
ಆದರೆ, ಇದೀಗ ಹರಾಜಾಗುತ್ತಿರುವ ಈ ಕಲಾಕೃತಿಗೆ ಪ್ಲಂಬಿಂಗ್ ಸಂಪರ್ಕ ಇರುವುದಿಲ್ಲ. ಹಾಗಾಗಿ, ಇದನ್ನು ಸಂದರ್ಶಕರು ಬಳಸಲು ಅವಕಾಶವಿಲ್ಲ. ಆದಾಗ್ಯೂ, ‘ಅಮೆರಿಕ’ ಶೌಚಾಲಯವು ನವೆಂಬರ್ 8 ರಿಂದ ಹರಾಜು ಮುಗಿಯುವವರೆಗೆ ಸೋಥೆಬಿಸ್‌ನ ಹೊಸ ಪ್ರಧಾನ ಕಚೇರಿಯಾದ ನ್ಯೂಯಾರ್ಕ್‌ನ ಬ್ರೂಯರ್ ಕಟ್ಟಡದಲ್ಲಿ ಪ್ರದರ್ಶನಕ್ಕಿರುತ್ತದೆ. ಸಂದರ್ಶಕರು ಇದನ್ನು ಹತ್ತಿರದಿಂದ ವೀಕ್ಷಿಸಲು ಸಾಧ್ಯವಾಗುತ್ತದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement