ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ, ‘ಜೈಮಾಲಾ’ ಕಾರ್ಯಕ್ರಮದ ವೇಳೆ ವಧುವಿನ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಪರಾರಿಯಾದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯು ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೌಸಾ ನಗರ ಪಂಚಾಯತ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವರನ ಕಡೆಯವರು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಿಂದ ಮೆರವಣಿಗೆಯೊಂದಿಗೆ ಬಂದಿದ್ದರು. ಮದುವೆಯ ವಿಧಿವಿಧಾನಗಳು ನಡೆಯುತ್ತಿದ್ದಾಗ, ವೇದಿಕೆಗೆ ನುಗ್ಗಿದ ಆರೋಪಿಮದುಮಗಳ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಗುಂಡು ವಧುವಿನ ಹೊಟ್ಟೆಯ ಭಾಗಕ್ಕೆ ತಗುಲಿದೆ. ಆಕೆ ಮಂಟಪದಲ್ಲೇ ಕುಸಿದುಬಿದ್ದಿದ್ದಾಳೆ. ಘಟನೆಯಿಂದಾಗಿ ಮದುವೆಯ ಸ್ಥಳದಲ್ಲಿ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.ಗಾಯಾಳು ವಧುವನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ತಲೆಮರೆಸಿಕೊಂಡಿರುವ ಆರೋಪಿ:
ಗುಂಡು ಹಾರಿಸಿದ ತಕ್ಷಣ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಬಕ್ಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭಂ ಆರ್ಯ ಅವರು ಸ್ವತಃ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯನ್ನು ಬಂಧಿಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಸ್ಥಳೀಯರು ಪ್ರೇಮ ಪ್ರಕರಣದ ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಆತನ ಪೋಷಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.ಆರೋಪಿ ಈ ಹಿಂದೆ ಮದ್ಯದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ ಎಂದು ಹೆಚ್ಚುವರಿ ಠಾಣಾಧಿಕಾರಿ ಚಂದನಕುಮಾರ ತಿಳಿಸಿದ್ದಾರೆ. ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಿಂದ ಬಂದಿದ್ದ ಮದುವೆಯ ಮೆರವಣಿಗೆ ಸ್ವಲ್ಪ ಸಮಯದ ನಂತರ ಮರಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ