ರೈತರಿಗೆ ಈ ವರ್ಷ ಶೂನ್ಯ ಬಡ್ಡಿ ದರದಲ್ಲಿ ೧೯,೩೭೦ ಕೋಟಿ ರೂ. ಅಲ್ಪಾವಧಿ ಬೆಳೆ ಸಾಲದ ಗುರಿ: ಸಿಎಂ ಬಿಎಸ್‌ವೈ

ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ೩೦.೨೬ ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ೧೯,೩೭೦ ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು ೦.೬ ಲಕ್ಷ ರೈತರಿಗೆ ಶೇ. ೩ರ ಬಡ್ಡಿ ದರದಲ್ಲಿ ೧೪೬೦ ಕೋಟಿ ರೂ. ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದ ಸಹಕಾರ ಇಲಾಖೆ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ರೈತರಿಗೆ ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮದು ರೈತಪರ ಸರ್ಕಾರ. ಕೋವಿಡ್‌ನ ಸಂಕಷ್ಟದಲ್ಲಿ ರೈತರಿಗೆ ಎಲ್ಲರೀತಿಯಲ್ಲೂ ನೆರವು ನೀಡಲಾಗಿದೆ. ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸರ್ಕಾರದ ಆದ್ಯತಾ ಕ್ಷೇತ್ರಗಳಾಗಿವೆ ಎಂದರು.
ಮೇ ಅಂತ್ಯಕ್ಕೆ ೩.೨೯ ಲಕ್ಷ ರೈತರಿಗೆ ೨೫೫೦.೭೨ ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ಮತ್ತು ೦.೦೫ ಲಕ್ಷ ರೈತರಿಗೆ ೧೨೧.೧೬ ಕೋಟಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಣೆ ಮಾಡಲಾಗಿದೆ. ಈ ಸಾಲಿನಲ್ಲಿ ೪೦ ಲಕ್ಷ ಸ್ತ್ರೀಶಕ್ತಿ ಗುಂಪುಗಳಿಗೆ ೧೪೦೦ ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ ಮೇ ಅಂತ್ಯಕ್ಕೆ ೬೭೦೦ ಗುಂಪುಗಳಿಗೆ ೨೩೩.೩೩ ಕೋಟಿ ರೂ. ಸಾಲ ವಿತರಿಸಲಾಗಿದೆ.ಕೋವಿಡ್‌ನ ಸಂಕಷ್ಟದ ಹಿನ್ನೆಲೆಯಲ್ಲಿ ರೈತರು ಮತ್ತು ಸ್ತ್ರೀಶಕ್ತಿ ಗುಂಪುಗಳ ಬೆಳೆ ಸಾಲ ಮರುಪಾವತಿ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ ವರ್ಷ ಅಲ್ಪಾವಧಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಣೆಯಲ್ಲಿ ನಿಗದಿತ ಗುರಿಗಿಂತ ಅಂದರೆ ಶೇ. ೧೧೪ ರಷ್ಟು ಸಾಧನೆ ಮಾಡಲಾಗಿದೆ. ಇದರಲ್ಲಿ ೦.೫೭ ಲಕ್ಷ ರೈತರಿಗೆ ೧೦೫.೬೪ ಕೋಟಿ ಸಾಲವನ್ನು ಹೈನುಗಾರಿಕಾ ಚಟುವಟಿಕೆಗಳಿಗೆ ನೀಡಲಾಗಿದೆ ಎಂಬುದು ವಿಶೇಷ ಎಂದರು.
ಕೋವಿಡ್‌ನ ಈ ಸಂಕಷ್ಟ ಸಂದರ್ಭದಲ್ಲಿ ಸಹಕಾರ ಇಲಾಖೆ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ೫೮ ಕೋಟಿ ರೂ.ಗಳಿಗೂ ಹೆಚ್ಚು ಹಣ ನೀಡಿರುವುದನ್ನು ಶ್ಲಾಘಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಸಹಕಾರ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾದ ಹೂ ಬೆಳೆಗಾರರು, ಹಣ್ಣು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ೧೦ ಸಾವಿರ ರೂ. ಪರಿಹಾರ ನೀಡಿದ್ದೇವೆ. ಕೋವಿಡ್ ಸಂತ್ರಸ್ತರಿಗೆ ೨ ಸಾವಿರ ಕೋಟಿ ೯ಗೂ ಹೆಚ್ಚು ಪರಿಹಾರ ಪ್ಯಾಕೇಜ್ ಪ್ರಕಟಿಸಲಾಗಿದೆ. ಹಾಗೆಯೇ ಕೋವಿಡ್‌ನಿಂದ ಮೃತಪಟ್ಟವರಿಗೆ ಇಡೀ ದೇಶದಲ್ಲೇ ಮೊದಲು ಎನ್ನುವಂತೆ ಬಿಪಿಎಲ್‌ ಕುಟುಂಬದಲ್ಲಿ ೧ ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದರು.
ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಸಹಕಾರ ಮಹಾಮಂಡಳ ಅಧ್ಯಕ್ಷ ರಾಜೇಂದ್ರಕುಮಾರ್ ಮತ್ತಿತರರು ಇದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement