ಮುಂಬೈ: ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ ತೆಂಡೂಲ್ಕರ್ ಅವರು ಇಂದು (ಮಾರ್ಚ್ 5) ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾದರು. ವಧು ಸಾನಿಯಾ ಚಂದೋಕ್ ಅವರೊಂದಿಗೆ ನಡೆದ ಈ ವಿವಾಹ ಮಹೋತ್ಸವವು ಕ್ರೀಡೆ, ಉದ್ಯಮ ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ತಾರಾ ಮೆರುಗು ಪಡೆಯಿತು.
ದಕ್ಷಿಣ ಮುಂಬೈನ ಖಾಸಗಿ ಸಭಾಂಗಣದಲ್ಲಿ ನಡೆದ ಈ ಸಮಾರಂಭವು ಕ್ರಿಕೆಟ್ ಲೋಕದ ದಿಗ್ಗಜರ ಮಿಲನಕ್ಕೆ ಸಾಕ್ಷಿಯಾಯಿತು. ಕಳೆದ ವರ್ಷ ಆಗಸ್ಟ್ 25 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ವಿವಾಹ ಪೂರ್ವ ಕಾರ್ಯಕ್ರಮಗಳು ಕಳೆದ ಕೆಲವು ವಾರಗಳಿಂದ ಸದ್ದು ಮಾಡುತ್ತಿದ್ದವು.
ಭಾರತ ತಂಡದ ಮುಖ್ಯ ಕೋಚ್ ಗೌತಮ ಗಂಭೀರ ಅವರು ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ತಮ್ಮ ಪತ್ನಿ ಸಾಕ್ಷಿ ಅವರೊಂದಿಗೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.
ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಅನಿಲ ಕುಂಬ್ಳೆ , ರವಿಶಾಸ್ತ್ರಿ, ಯುವರಾಜ್ ಸಿಂಗ್-ಹೇಜಲ್ ಕೀಚ್ ದಂಪತಿ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವೀರೇಂದ್ರ ಸೆಹ್ವಾಗ್. ಹರ್ಭಜನ್ ಸಿಂಗ್, ಜಹೀರ್ ಖಾನ್, ಸುರೇಶ ರೈನಾ, ಪಾರ್ಥಿವ್ ಪಟೇಲ್, ಆಕಾಶ ಚೋಪ್ರಾ ಮತ್ತು ಪೃಥ್ವಿ ಶಾ ಸಹ ಆಗಮಿಸಿದ್ದರು. ಐಸಿಸಿ (ICC) ಅಧ್ಯಕ್ಷ ಜೈ ಶಾ ಮತ್ತು ಟೀಮ್ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ ಅಗರ್ಕರ್ ಕೂಡ ಪಾಲ್ಗೊಂಡಿದ್ದರು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲ, ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ ಪ್ರಸಾದ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು


ನಿಮ್ಮ ಕಾಮೆಂಟ್ ಬರೆಯಿರಿ