ಚಿನ್ನದ ಮಳಿಗೆ ದರೋಡೆ ಪ್ರಕರಣವೊಂದರಲ್ಲಿ ಮುಸುಕುಧಾರಿ ದರೋಡೆಕೋರರ ಗುಂಪೊಂದು ಸೋಮವಾರ ಬಿಹಾರದ ಅರ್ರಾಹ್‌ನಲ್ಲಿರುವ ತನಿಷ್ಕ್ ಶೋರೂಮ್‌ಗೆ ನುಗ್ಗಿ ಗ್ರಾಹಕರು ಮತ್ತು ಸಿಬ್ಬಂದಿಗೆ ಗನ್ ತೋರಿಸಿ ಸುಮಾರು ₹ 25 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಅಘೋಷಿತ ನಗದು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ 10:30ಕ್ಕೆ ಶೋರೂಂ ತೆರೆದ ಸ್ವಲ್ಪ ಸಮಯದಲ್ಲೇ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, 5-6 ಮಂದಿ ದರೋಡೆಕೋರರ ಗುಂಪು ಅಂಗಡಿಯೊಳಗೆ ನುಗ್ಗಿ ಭದ್ರತಾ ಸಿಬ್ಬಂದಿ, ಉದ್ಯೋಗಿಗಳು ಹಾಗೂ ಗ್ರಾಹಕರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಶಸ್ತ್ರಸಜ್ಜಿತ ವ್ಯಕ್ತಿಗಳು ದರೋಡೆ ನಡೆಸುವಾಗ ಗ್ರಾಹಕರು ಮತ್ತು ಸಿಬ್ಬಂದಿಗೆ ಕೈ ಮೇಲೆತ್ತಿ ಶರನಾಗತಿ ಸ್ಥಿತಿಯಲ್ಲಿ ನಿಲ್ಲುವಂತೆ ಎತ್ತುವಂತೆ ಆದೇಶಿಸುವುದನ್ನು ತೋರಿಸುತ್ತದೆ ಮತ್ತು ಅವರು ತಪ್ಪಿಸಿಕೊಳ್ಳುವ ಮೊದಲು ಕದ್ದ ವಸ್ತುಗಳನ್ನು ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ಅರಾಹ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಿ ಚೌಕ್‌ನಲ್ಲಿರುವ ತನಿಷ್ಕ್ ಶಾಖೆಯಲ್ಲಿ ಈ ದರೋಡೆ ನಡೆದಿದೆ. ಶೋರೂಂ ಮ್ಯಾನೇಜರ್ ಕುಮಾರ ಮೃತ್ಯುಂಜಯ ಪ್ರಕಾರ, ದರೋಡೆಕೋರರು ನಗದು, ಸರಗಳು, ನೆಕ್ಲೇಸ್ಗಳು ಮತ್ತು ಬಳೆಗಳು ಮತ್ತು ಕೆಲವು ವಜ್ರದ ತುಂಡುಗಳು ಸೇರಿದಂತೆ ಗಣನೀಯ ಪ್ರಮಾಣದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಹೋಳಿ ಹಬ್ಬಕ್ಕೂ ಮುನ್ನ ಸೋಮವಾರ ಬೆಳಗ್ಗೆ 10 ಗಂಟೆಗೆ ಶೋರೂಂ ತೆರೆಯಲಾಗಿತ್ತು ಎಂದು ಭದ್ರತಾ ಸಿಬ್ಬಂದಿ ಮನೋಜಕುಮಾರ ಹೇಳಿದ್ದಾರೆ.
ಆರು ಮಂದಿ ಕ್ರಿಮಿನಲ್‌ಗಳು ಕಾರಿನಲ್ಲಿ ಬಂದು ರಸ್ತೆಗೆ ಅಡ್ಡ ನಿಲ್ಲಿಸಿದ್ದರು. ಶೋರೂಮ್‌ನ ನಿಯಮದ ಪ್ರಕಾರ ಏಕಕಾಲದಲ್ಲಿ ನಾಲ್ಕಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ, ಇಬ್ಬಿಬ್ಬರಿಗೆ ಪ್ರವೇಶ ನೀಡಿದ್ದೆವು. ಆರನೇ ವ್ಯಕ್ತಿ ಬಂದಾಗ ನನ್ನ ತಲೆಗೆ ಪಿಸ್ತೂಲ್ ಹಿಡಿದು ನನ್ನಲ್ಲಿದ್ದ ಆಯುಧ ಕಿತ್ತುಕೊಂಡು ನನ್ನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ತುಂಬಲು ಆರಂಭಿಸಿದರು ಎಂದು ಹೇಳಿದ್ದಾರೆ. ಎಲ್ಲರಿಗೂ ಗನ್ ತೋರಿಸಿದಾಗ ಸಿಬ್ಬಂದಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಕೌಂಟರ್‌ಗಳ ಹಿಂದೆ ಅಡಗಿಕೊಂಡರು ಎಂದು ಅಂಗಡಿಯ ಉದ್ಯೋಗಿ ರೋಹಿತಕುಮಾರ ಮಿಶ್ರಾ ತಿಳಿಸಿದ್ದಾರೆ.
ಘಟನೆಯ ನಂತರ, ಭೋಜಪುರದ ಪೊಲೀಸ್ ಅಧೀಕ್ಷಕರು ಸಂಪೂರ್ಣ ವಾಹನ ತಪಾಸಣೆ ನಡೆಸುವಂತೆ ಎಲ್ಲಾ ಠಾಣೆಯ ಮುಖ್ಯಸ್ಥರಿಗೆ ಸೂಚನೆ ನೀಡಿದರು. ದುಷ್ಕರ್ಮಿಗಳನ್ನು ಗುರುತಿಸಲು ಅನುಕೂಲವಾಗಲು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಛಾಯಾಚಿತ್ರಗಳನ್ನು ಜಿಲ್ಲೆಯ ವಾಟ್ಸಾಪ್ ಗುಂಪಿನ ಮೂಲಕ ಪ್ರಸಾರ ಮಾಡಲಾಯಿತು. ಈ ಮಾಹಿತಿಯ ಮೇರೆಗೆ ಠಾಣೆಯ ಮುಖ್ಯಸ್ಥರು ತಮ್ಮ ತಂಡದೊಂದಿಗೆ ಬಾಬುರಾ ಚೋಟಿ ಸೇತುವೆಯಲ್ಲಿ ವಾಹನಗಳನ್ನು ತಪಾಸಣೆ ಮಾಡಲು ಪ್ರಾರಂಭಿಸಿದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಮೂರು ಮೋಟಾರ್‌ಸೈಕಲ್‌ಗಳಲ್ಲಿ ಆರು ಮಂದಿ ಅನುಮಾನಾಸ್ಪದ ವ್ಯಕ್ತಿಗಳು ಡೋರಿಗಂಜ್ ಕಡೆಗೆ ವೇಗವಾಗಿ ಬರುತ್ತಿರುವುದು ಕಂಡುಬಂದಿದೆ.
ದರೋಡೆಕೋರರಿಗೆ ವಾಹನ ನಿಲ್ಲಿಸಲು ಸೂಚಿಸಿದಾಗ, ಅವರು ವೇಗವನ್ನು ಹೆಚ್ಚಿಸಿ ಪಲಾಯನ ಮಾಡಲು ಪ್ರಯತ್ನಿಸಿದರು. ಪೊಲೀಸರು ಬೆನ್ನಟ್ಟಿದ ನಂತರ ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದರು, ಆತ್ಮರಕ್ಷಣೆಗಾಗಿ ಅಧಿಕಾರಿಗಳು ಗುಂಡು ಹಾರಿಸಿದ ನಂತರ ಗುಂಡಿನ ಚಕಮಕಿಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಾಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆಕೋರರಿಂದ ಎರಡು ಪಿಸ್ತೂಲ್‌ಗಳು, 10 ಕಾಟ್ರಿಡ್ಜ್‌ಗಳು, ತನಿಷ್ಕ್ ಶೋರೂಮ್‌ನಿಂದ ಕಳವು ಮಾಡಿದ ಆಭರಣಗಳು ಮತ್ತು ಪಲ್ಸರ್ ಮೋಟಾರ್‌ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಿವಾಲ್ವರ್‌ನಿಂದ ತಲೆಗೆ ಹೊಡೆದಿದ್ದರಿಂದ ತನಿಷ್ಕದ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ