ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ನಡೆದ ಅಚ್ಚರಿಯ ಘಟನೆಯೊಂದರಲ್ಲಿ, ಬಡ ರೈತನೊಬ್ಬನ ಪತ್ನಿಯ ಬ್ಯಾಂಕ್ ಖಾತೆಗೆ ರಾತ್ರೋರಾತ್ರಿ ಬರೋಬ್ಬರಿ 10 ಕೋಟಿ ರೂಪಾಯಿ ಜಮೆಯಾಗಿದೆ! ಇಷ್ಟೊಂದು ದೊಡ್ಡ ಮೊತ್ತವನ್ನು ಕಂಡರೂ ಆಸೆಪಡದೆ ಆಕೆ ತೋರಿದ ಪ್ರಾಮಾಣಿಕತೆ ಈಗ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
ಮೈನ್‌ಪುರಿ ಜಿಲ್ಲೆಯ ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ಕೃಷಿ ಕಾಯಕದ ಮೂಲಕ ಜೀವನ ನಡೆಸುತ್ತಿರುವ ಈ ಕುಟುಂಬಕ್ಕೆ ನವರಾತ್ರಿಯ ಅಷ್ಟಮಿಯ ದಿನವೊಂದು ದೊಡ್ಡ ಆಘಾತ ಕಾದಿತ್ತು. ಹಬ್ಬದ ಖರ್ಚಿಗಾಗಿ ಹಣ ವಿತ್‌ಡ್ರಾ ಮಾಡಲು ಪಾರಸಭಾನ್ ಬಹೇಲಿಯಾ ಅವರ ಪತ್ನಿ ರೀಟಾ ಬ್ಯಾಂಕ್‌ಗೆ ತೆರಳಿದ್ದರು. ಆದರೆ ಬ್ಯಾಂಕ್ ರಜೆ ಇದ್ದ ಕಾರಣ ಸಮೀಪದ ಎಟಿಎಂಗೆ ಹೋಗಿ ಬ್ಯಾಲೆನ್ಸ್ ಚೆಕ್ ಮಾಡಿದ್ದಾರೆ.
ಎಟಿಎಂ ಸ್ಕ್ರೀನ್ ಮೇಲೆ ಮೂಡಿದ ಮೊತ್ತವನ್ನು ಕಂಡು ರೀತಾ ಅವರ ಕಣ್ಣುಗಳೇ ಮಂಜಾದವು. ಅವರ ಖಾತೆಯಲ್ಲಿ ಬರೋಬ್ಬರಿ ₹9,99,49,588 (ಒಂಬತ್ತು ಕೋಟಿ ತೊಂಬತ್ತೊಂಬತ್ತು ಲಕ್ಷದ ನಲವತ್ತೊಂಬತ್ತು ಸಾವಿರದ ಐನೂರ ಎಂಭತ್ತೆಂಟು ರೂಪಾಯಿ) ಹಣವಿತ್ತು!
ಮೊದಲು ತಾನು ನೋಡಿದ್ದು ತಪ್ಪಿರಬಹುದು ಎಂದು ಭಾವಿಸಿದ ರೀಟಾ, ಮತ್ತೊಂದು ಎಟಿಎಂಗೆ ಹೋಗಿ ಪುನಃ ಬ್ಯಾಲೆನ್ಸ್ ಚೆಕ್ ಮಾಡಿದರು. ಅಲ್ಲೂ ಕೂಡ ಅದೇ ಮೊತ್ತ ತೋರಿಸಿದಾಗ, ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರನ್ನು ನಿಬ್ಬೆರಗಾಗಿಸಿದೆ.
ಇದು ‘ಪ್ರಾಮಾಣಿಕತೆ’ಗೆ ಸಾಕ್ಷಿ!
ಹತ್ತಿರ ಹತ್ತು ಕೋಟಿ ರೂಪಾಯಿ ಖಾತೆಯಲ್ಲಿದ್ದರೂ, ರೀಟಾ ಅವರು ಅದರಲ್ಲಿ ಒಂದು ರೂಪಾಯಿಯನ್ನೂ ಮುಟ್ಟಲಿಲ್ಲ. ಅಷ್ಟೇ ಅಲ್ಲದೆ, ಈ ವಿಷಯದ ಬಗ್ಗೆ ಸ್ಪಷ್ಟನೆ ಸಿಗುವವರೆಗೂ ಹಣಕ್ಕೆ ಕೈ ಹಾಕದಂತೆ ತಮ್ಮ ಕುಟುಂಬ ಸದಸ್ಯರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬಡತನದಲ್ಲೂ ಅವರು ತೋರಿದ ಈ ನೈತಿಕ ಪ್ರಜ್ಞೆ ಕಂಡು ನೆರೆಹೊರೆಯವರು ಮತ್ತು ಗ್ರಾಮಸ್ಥರು ಆಕೆಯನ್ನು ಶ್ಲಾಘಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಹೇಳುವುದೇನು?
ಈ ಬಗ್ಗೆ ಮಾಹಿತಿ ನೀಡಲು ರೀಟಾ ಮತ್ತು ಕುಟುಂಬದವರು ಬ್ಯಾಂಕ್‌ಗೆ ತೆರಳಿದಾಗ ರಜೆಯ ಕಾರಣ ಬ್ಯಾಂಕ್ ಮುಚ್ಚಿತ್ತು. ನಂತರ ಕರೀಮ್‌ಗಂಜ್ ಶಾಖೆಯ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ರಿಷಿಕಾಂತ್ ಪಾಂಡೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಇದು ತಾಂತ್ರಿಕ ದೋಷ ಅಥವಾ ವಹಿವಾಟಿನ ಲೋಪದಿಂದ ಸಂಭವಿಸಿರುವ ಸಾಧ್ಯತೆಯಿದೆ. ಬ್ಯಾಂಕ್ ಪುನಃ ತೆರೆದ ನಂತರ ಸಮಗ್ರ ತನಿಖೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು,” ಎಂದು ಭರವಸೆ ನೀಡಿದ್ದಾರೆ.
ರೀಟಾ ಅವರ ಕುಟುಂಬವು ಹಣವನ್ನು ದುರುಪಯೋಗಪಡಿಸಿಕೊಳ್ಳಲು ಎಲ್ಲಾ ಅವಕಾಶಗಳನ್ನು ಹೊಂದಿದ್ದ ಸಮಯದಲ್ಲಿಯೂ ಅವರು ತೋರಿದ ಪ್ರಾಮಾಣಿಕತೆ ಈಗ ಪ್ರದೇಶದಾದ್ಯಂತ ಚರ್ಚೆಯ ವಿಷಯವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ