ಮೊದಲು ‘ವರ್ಕ್ ಫ್ರಮ್ ಹೋಮ್’ ಆದೇಶ ಮಾಡಿ ನಂತ್ರ ಮುಂಜಾನೆ 4ಕ್ಕೆ 8000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ

ನವದೆಹಲಿ: ಟೆಕ್ ದೈತ್ಯ ‘ಮೆಟಾ ಪ್ಲಾಟ್‌ಫಾರ್ಮ್ಸ್’ (Meta Platforms) ತನ್ನ ಒಟ್ಟು ಸಿಬ್ಬಂದಿಯ ಶೇಕಡಾ 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಐಟಿ ವಲಯದಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಈ ಪ್ರಕ್ರಿಯೆಯನ್ನು ಕಂಪನಿಯು ಅತ್ಯಂತ ರಹಸ್ಯವಾಗಿ ಮತ್ತು ವ್ಯವಸ್ಥಿತವಾಗಿ ಜಾರಿಗೆ ತಂದಿರುವುದು ಉದ್ಯೋಗಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ.
ಈ ಉದ್ಯೋಗ ಕಡಿತದ ಪ್ರಕ್ರಿಯೆಯು ಒಂದು ಸರಳ ಸೂಚನೆಯೊಂದಿಗೆ ಆರಂಭವಾಯಿತು. ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ವಿವಿಧ ದೇಶಗಳ ಉದ್ಯೋಗಿಗಳಿಗೆ “ಇಂದು ಮನೆಯಿಂದಲೇ ಕೆಲಸ ಮಾಡಿ (WFH)” ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿತ್ತು. ಕಚೇರಿಯಲ್ಲಿ ಯಾವುದೇ ಗದ್ದಲ, ಚರ್ಚೆಗಳು ಅಥವಾ ಆತಂಕದ ವಾತಾವರಣ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು.
ಇದರ ಬೆನ್ನಲ್ಲೇ ವಜಾಗೊಳಿಸುವ ಇಮೇಲ್‌ಗಳು ಉದ್ಯೋಗಿಗಳಿಗೆ ಬರಲಾರಂಭಿಸಿದವು. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮೆಟಾದ ಸಿಂಗಾಪುರ ಹಬ್‌ನಲ್ಲಿ ಸ್ಥಳೀಯ ಸಮಯ ಮುಂಜಾನೆ 4 ಗಂಟೆಗೆ (ಭಾರತೀಯ ಕಾಲಮಾನ 1:30 am) ಮೊದಲ ಇಮೇಲ್ ತಲುಪಿದೆ. ಆಯಾ ದೇಶಗಳ ಸಮಯ ವಲಯಕ್ಕೆ (Time Zones) ಅನುಗುಣವಾಗಿ ಹಂತ ಹಂತವಾಗಿ ಉದ್ಯೋಗಿಗಳಿಗೆ ವಜಾಗೊಳಿಸುವಪಿಂಕ್ ಸ್ಲಿಪ್ ನೀಡಲಾಗುತ್ತಿದೆ.
ಕೃತಕ ಬುದ್ಧಿಮತ್ತೆ (AI)ಯೇ ಉದ್ಯೋಗ ಕಡಿತಕ್ಕೆ ಕಾರಣ
ಈ ಪ್ರಕ್ರಿಯೆಗೆ ಮುನ್ನ ಮೆಟಾ ಕಂಪನಿಯಲ್ಲಿ ಸುಮಾರು 78,000 ಉದ್ಯೋಗಿಗಳಿದ್ದರು. ಸದ್ಯ ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದರೆ, ಇನ್ನುಳಿದ ಸಾವಿರಾರು ಜನರನ್ನು ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗುತ್ತಿದೆ. ಮೆಟಾದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (Chief People Officer) ಜಾನೆಲ್ ಗೇಲ್ ಬಿಡುಗಡೆ ಮಾಡಿರುವ ಆಂತರಿಕ ಜ್ಞಾಪನಾ ಪತ್ರದ (Memo) ಪ್ರಕಾರ  7,000 ಉದ್ಯೋಗಿಗಳನ್ನು ಹೊಸ ‘ಕೃತಕ ಬುದ್ಧಿಮತ್ತೆ’ (AI-Native) ತಂಡಗಳಿಗೆ ಮರುಸಂಘಟಿಸಲಾಗುತ್ತಿದೆ. 6,000 ಮುಕ್ತ ಉದ್ಯೋಗಾವಕಾಶಗಳನ್ನು (Open Roles) ಸಂಪೂರ್ಣವಾಗಿ ಮುಚ್ಚಲಾಗಿದೆ. “ಸಣ್ಣ ಮತ್ತು ಸ್ವತಂತ್ರವಾಗಿ ವೇಗವಾಗಿ ಕೆಲಸ ಮಾಡಬಲ್ಲ ತಂಡಗಳ ಮೂಲಕವೇ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಿರುವ ಹಂತಕ್ಕೆ ನಾವು ತಲುಪಿದ್ದೇವೆ,” ಎಂದು ಜಾನೆಲ್ ಗೇಲ್ ತಿಳಿಸಿದ್ದಾರೆ.
ಕಂಪನಿಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರು AI ತಂತ್ರಜ್ಞಾನವನ್ನು ಪ್ರಮುಖ ಆದ್ಯತೆಯನ್ನಾಗಿ ಮಾಡಿಕೊಂಡಿದ್ದು, ಈ ವರ್ಷ AI ಅಭಿವೃದ್ಧಿಗಾಗಿಯೇ ಮೆಟಾ $125-$145 ಬಿಲಿಯನ್ ಡಾಲರ್ ವೆಚ್ಚ ಮಾಡಲು ಯೋಜಿಸಿದೆ. ಇದರಿಂದಾಗಿ ಎಂಜಿನಿಯರಿಂಗ್ ಮತ್ತು ಪ್ರೊಡಕ್ಟ್ ತಂಡಗಳ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಈ ವರ್ಷದ ಅಂತ್ಯದ ವೇಳೆಗೆ ಇನ್ನಷ್ಟು ಕಡಿತ ಉಂಟಾಗುವ ಸಾಧ್ಯತೆ ಇದೆ.
ಕಳೆದ ತಿಂಗಳೇ ಈ ಉದ್ಯೋಗ ಕಡಿತದ ವಿವರಗಳು ಸೋರಿಕೆಯಾಗಿದ್ದಾಗ ಮೆಟಾ ಇದನ್ನು ಖಚಿತಪಡಿಸಿತ್ತು. ಅಂದಿನಿಂದಲೇ ಉದ್ಯೋಗಿಗಳಲ್ಲಿ ನೈತಿಕ ಸ್ಥೈರ್ಯ ಕುಂದಿತ್ತು.
ಇದೇ ವೇಳೆ, AI ವ್ಯವಸ್ಥೆಗಳಿಗೆ ತರಬೇತಿ ನೀಡಲು ಉದ್ಯೋಗಿಗಳ ಮೌಸ್ ಮೂವ್‌ಮೆಂಟ್ ಮತ್ತು ಕೀಸ್ಟ್ರೋಕ್‌ಗಳನ್ನು (Keystrokes) ಪತ್ತೆಹಚ್ಚುವ ಹೊಸ ಆಂತರಿಕ ಸಾಧನವನ್ನು ಮೆಟಾ ಬಳಸುತ್ತಿದೆ ಎಂಬ ಮಾಹಿತಿ ಹೊರಬಿದ್ದಾಗ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಇದನ್ನು ವಿರೋಧಿಸಿ 1,000 ಕ್ಕೂ ಹೆಚ್ಚು ಉದ್ಯೋಗಿಗಳು ಅರ್ಜಿಗೆ ಸಹಿ ಹಾಕಿದ್ದರು. ಈ ಎಲ್ಲಾ ಪ್ರತಿಭಟನೆ ಮತ್ತು ಗದ್ದಲಗಳನ್ನು ತಡೆಯಲೆಂದೇ ಕಂಪನಿಯು ‘ವರ್ಕ್‌ ಫ್ರಾಂ ಹೋಮ್‌’ ಆದೇಶ ನೀಡಿ ನಂತರ ವಜಾ ಪ್ರಕ್ರಿಯೆ ನಡೆಸಿದೆ ಎಂಬುದು ಉದ್ಯೋಗಿಗಳ ಆಕ್ರೋಶವಾಗಿದೆ.
ಇಡೀ ಟೆಕ್ ವಲಯದಲ್ಲೇ ನಡುಕ
ಉದ್ಯೋಗ ಕಡಿತದ ಈ ಕರಾಳ ನೆರಳು ಕೇವಲ ಮೆಟಾ ಕಂಪನಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಐಟಿ ವಲಯದಲ್ಲೂ ಇದು ಮುಂದುವರಿದಿದೆ:
ಸಿಸ್ಕೋ ಸಿಸ್ಟಮ್ಸ್ ಕಳೆದ ವಾರ 4,000 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಮೈಕ್ರೋಸಾಫ್ಟ್, ಅಮೆಜಾನ್, ಡಿಸ್ನಿ ಮತ್ತು ಎಎಸ್‌ಎಂಎಲ್‌ (ASML) ಈಗಾಗಲೇ ಉದ್ಯೋಗ ಕಡಿತ ಅಥವಾ ಸ್ವಯಂಪ್ರೇರಿತ ನಿವೃತ್ತಿ ಘೋಷಿಸಿವೆ.
ಒರಾಕಲ್ (Oracle ಕಳೆದ ಏಪ್ರಿಲ್‌ನಲ್ಲಿ ಜಾಗತಿಕವಾಗಿ ಮುಂಜಾನೆ ಇಮೇಲ್ ಕಳುಹಿಸುವ ಮೂಲಕ ಅಂದಾಜು 20,000 ದಿಂದ 30,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement