ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಶಿರಸಿ: ಓಂಕಾರ ಕಾಲೋನಿಯ ಬಾವಿಗಳಲ್ಲಿ ಎಣ್ಣೆ ಮಿಶ್ರಿತ ನೀರು…!

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಂಕಾರ ಕಾಲೋನಿಯಲ್ಲಿ ಬಾವಿಗಳ ನೀರಿನಲ್ಲಿ ಎಣ್ಣೆಯ ಅಂಶ ಪತ್ತೆಯಾಗಿದ್ದು, ಆರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಓಂಕಾರ ಕಾಲೋನಿಯ ಮೊದಲ ಕ್ರಾಸ್‌ನಲ್ಲಿರುವ ಆರಕ್ಕೂ ಹೆಚ್ಚು ಮನೆಗಳ ಬಾವಿಗಳಲ್ಲಿ ಎಣ್ಣೆ ಮಿಶ್ರಿತ ನೀರು ಕಂಡುಬಂದಿದೆ. ಬಾವಿಯ ನೀರಿನ ಮೇಲ್ಭಾಗದಲ್ಲಿ ಎಣ್ಣೆಯಂತಹ ವಸ್ತು ತೇಲುತ್ತಿದ್ದು, ದಪ್ಪ ಪದರದ ರೂಪದಲ್ಲಿ ಹರಡಿಕೊಂಡಿದೆ. ಅಲ್ಲದೆ, ನೀರು ತೀವ್ರ ದುರ್ವಾಸನೆಯಿಂದ ಕೂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದಾಗಿ ಬಾವಿಯ ನೀರನ್ನು ಕುಡಿಯುವುದಿರಲಿ, ದಿನನಿತ್ಯದ ಇತರ ಗೃಹಬಳಕೆಗೂ ಬಳಸಲು ನಿವಾಸಿಗಳು ಹಿಂದೇಟು ಹಾಕುವಂತಾಗಿದೆ. ಕಳೆದ ಒಂದು ವಾರದಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಬಾವಿಗಳ ನೀರು ಕಲುಷಿತಗೊಳ್ಳಲು ಸಮೀಪದಲ್ಲಿರುವ ಎಸಳೆ ಗ್ರಿಡ್‌ನ ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಬಳಸುವ ಆಯಿಲ್ ಸೋರಿಕೆಯೇ ಕಾರಣವಾಗಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದು ಅಂತರ್ಜಲದ ಮೂಲಕ ಬಾವಿಗಳ ನೀರನ್ನು ಸೇರಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ಈವರೆಗೆ ಇದು ದೃಢಪಟ್ಟಿಲ್ಲ.
ದೊಡ್ನಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ಶೆಟ್ಟಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನೂ ಸ್ಥಳಕ್ಕೆ ಕರೆಸಿ ಎಸಳೆ ಗ್ರಿಡ್‌ನ ಸ್ಥಿತಿಗತಿಗಳನ್ನು ಪರಿಶೀಲಿಸಲಾಗಿದೆ.
ಪರಿಶೀಲನೆ ನಡೆಸಿದ ಹೆಸ್ಕಾಂ ಅಧಿಕಾರಿಗಳು, ಗ್ರಿಡ್‌ನಿಂದ ಯಾವುದೇ ಆಯಿಲ್ ಸೋರಿಕೆಯಾಗುತ್ತಿರುವುದು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಬಾವಿಗಳ ನೀರಿನಲ್ಲಿ ಎಣ್ಣೆಯ ಅಂಶ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಇನ್ನೊಂದೆಡೆ, ಕಲುಷಿತಗೊಂಡಿರುವ ಬಾವಿಗಳ ನೀರಿನ ಮಾದರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಂಗ್ರಹಿಸಿ ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದೆ. ಈ ಪರೀಕ್ಷೆಯಲ್ಲಿ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ತಿಳಿದುಬಂದಿದೆ. ನೀರಿನಲ್ಲಿ ಎಣ್ಣೆಯ ಅಂಶ ಹೇಗೆ ಸೇರಿಕೊಂಡಿದೆ ಮತ್ತು ಕಲುಷಿತಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಗ್ರಹಿಸಿದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ನೀರು ಕಲುಷಿತಗೊಳ್ಳಲು ನಿಖರ ಕಾರಣ ತಿಳಿಯಬೇಕಿದೆ.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪತ್ನಿಯ ಎದುರೇ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement