
ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅತಿವೇಗವಾಗಿ ಬಂದ ಟ್ರಕ್ ಒಂದು ಟೋಲ್ ಪ್ಲಾಜಾದಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯಲ್ಲಿ ಟೋಲ್ ಸಿಬ್ಬಂದಿ ಹಾಗೂ ಕಾರಿನಲ್ಲಿದ್ದ ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶನಿವಾರ ಮಧ್ಯಾಹ್ನ ಸುಮಾರು 2:00 ಗಂಟೆಗೆ ಕಾನ್ಪುರ ಹೆದ್ದಾರಿಯ ಸೆಮ್ರಿ ಟೋಲ್ ಪ್ಲಾಜಾದಲ್ಲಿ ಈ ಅಪಘಾತ ಸಂಭವಿಸಿದೆ. ಈ ದೃಶ್ಯಗಳು ಟೋಲ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಟೋಲ್ ಬೂತ್ನಲ್ಲಿ ಫಾಸ್ಟ್ಯಾಗ್ (FASTag) ಸ್ಕ್ಯಾನರ್ ಸರಿಯಾಗಿ ಕೆಲಸ ಮಾಡದ ಕಾರಣ ಎರಡು ಕಾರುಗಳು ಸಾಲಿನಲ್ಲಿ ನಿಂತಿದ್ದವು. 56 ವರ್ಷದ ಟೋಲ್ ಸಿಬ್ಬಂದಿ ರಮಾಕಾಂತ ರಿಛಾರಿಯಾ ಅವರು ಮ್ಯಾನುಯಲ್ ಆಗಿ ಟ್ಯಾಗ್ ಸ್ಕ್ಯಾನ್ ಮಾಡಲು ಕಾರಿನ ಮುಂದೆ ಬಂದಿದ್ದರು. ಈ ವೇಳೆ ಹಿಂದಿನಿಂದ ಅತಿವೇಗವಾಗಿ ಬಂದ ಟ್ರಕ್ ಕಾರುಗಳಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಸಿಬ್ಬಂದಿ ರಮಾಕಾಂತ ಗಾಳಿಯಲ್ಲಿ ಹಾರಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ.
ನಿಯಂತ್ರಣ ತಪ್ಪಿದ ಟ್ರಕ್, ಕಾರುಗಳು ಮತ್ತು ಸಿಬ್ಬಂದಿಯನ್ನು ಸುಮಾರು 50 ಮೀಟರ್ಗೂ ಹೆಚ್ಚು ದೂರ ಎಳೆದೊಯ್ದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳನ್ನು ತಕ್ಷಣವೇ ಮೋತ್ (Moth) ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ