ನವದೆಹಲಿ: 2008 ರಲ್ಲಿ ಹರಿಯಾಣದ ಗುರುಗ್ರಾಮದ ಶಿಕೋಹಪುರ ಗ್ರಾಮದಲ್ಲಿ ನಡೆದ 3.53 ಎಕರೆ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ED) ಗುರುವಾರ (ಜುಲೈ 17) ಆರೋಪಪಟ್ಟಿ ಸಲ್ಲಿಸಿದೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ರಾಬರ್ಟ್ ವಾದ್ರಾ ವಿರುದ್ಧ ಯಾವುದೇ ತನಿಖಾ ಸಂಸ್ಥೆ ಪ್ರಾಸಿಕ್ಯೂಷನ್ ದೂರು ದಾಖಲಿಸಿರುವುದು ಇದೇ ಮೊದಲು. ಏಪ್ರಿಲ್‌ನಲ್ಲಿ ಸತತ ಮೂರು ದಿನಗಳ ಕಾಲ ಇ.ಡಿ. ಅವರನ್ನು ವಿಚಾರಣೆ ನಡೆಸಿತ್ತು.
ರಾಬರ್ಟ್ ವಾದ್ರಾ ಅವರಲ್ಲದೆ, ಜುಲೈ 17 ರಂದು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಲ್ಲಿಸಲಾದ ಪ್ರಾಸಿಕ್ಯೂಷನ್ ದೂರಿನಲ್ಲಿ ಸತ್ಯಾನಂದ ಯಾಜೀ, ಕೇವಲ್ ಸಿಂಗ್ ವಿರ್ಕ್, ಮೆಸರ್ಸ್ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಓಂಕಾರೇಶ್ವರ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 11 ವ್ಯಕ್ತಿಗಳು/ಸಂಸ್ಥೆಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ನ್ಯಾಯಾಲಯವು ಇನ್ನೂ ಅದನ್ನು ಪರಿಗಣಿಸಿಲ್ಲ.
ಇ.ಡಿ.ಮೂಲಗಳ ಪ್ರಕಾರ, 2008 ರಲ್ಲಿ ಗುರುಗ್ರಾಮ ಪೊಲೀಸರು ದಾಖಲಿಸಿದ ಎಫ್‌ಐಆರ್ (FIR)ನಲ್ಲಿ ಈ ಪ್ರಕರಣ ದಾಖಲಾಗಿದ್ದು, ಗುರುಗ್ರಾಮದ ಸೆಕ್ಟರ್ 83 ರ ಶಿಕೋಹಪುರ ಗ್ರಾಮದಲ್ಲಿರುವ 3.53 ಎಕರೆ ಭೂಮಿಯನ್ನು ವಾದ್ರಾ ತಮ್ಮ ಮೆಸರ್ಸ್ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಮೂಲಕ ಮೆಸರ್ಸ್ ಓಂಕಾರೇಶ್ವರ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್‌ನಿಂದ ₹7.5 ಕೋಟಿಗೆ ವಂಚನೆಯಿಂದ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ. “ಸುಳ್ಳು” ಘೋಷಣೆಯ ಮೂಲಕ ಖರೀದಿ ಮಾಡಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
₹37.64 ಕೋಟಿ ಮೌಲ್ಯದ ಆಸ್ತಿ ಜಪ್ತಿ…
ಭುಪಿಂದರ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಹರಿಯಾಣದಲ್ಲಿ ತಮ್ಮ ವೈಯಕ್ತಿಕ ಪ್ರಭಾವದ ಮೂಲಕ ರಾಬರ್ಟ್ ವಾದ್ರಾ ಅವರು ಈ ಭೂಮಿಯ ಮೇಲೆ ವಾಣಿಜ್ಯ ಪರವಾನಗಿಯನ್ನು ಸಹ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಲ್ಕು ವರ್ಷಗಳ ನಂತರ, ಸೆಪ್ಟೆಂಬರ್ 2012 ರಲ್ಲಿ, ಕಂಪನಿಯು ಭೂಮಿಯನ್ನು ರಿಯಾಲ್ಟಿ ಪ್ರಮುಖ ಡಿಎಲ್‌ಎಫ್ (DLF)ಗೆ ₹58 ಕೋಟಿಗೆ ಮಾರಾಟ ಮಾಡಿತು ಎಂದು ಹೇಳಲಾಗಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ನಿವೃತ್ತರಾದ ಮತ್ತು ಹರಿಯಾಣದ ಭೂ ಕ್ರೋಢೀಕರಣ ಮತ್ತು ಭೂ ದಾಖಲೆಗಳ ಮಹಾನಿರ್ದೇಶಕ-ಕಮ್-ಇನ್ಸ್‌ಪೆಕ್ಟರ್-ಜನರಲ್ ನೋಂದಣಿಯಾಗಿ ನೇಮಕಗೊಂಡಿದ್ದ ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ಅವರು 2012 ರಲ್ಲಿ ಒಪ್ಪಂದವನ್ನು ರದ್ದುಗೊಳಿಸಿದಾಗ ಈ ವಿಷಯ ಬೆಳಕಿಗೆ ಬಂದಿತು. ಅವರು ಈ ವ್ಯವಹಾರವನ್ನು ರಾಜ್ಯ ಕ್ರೋಢೀಕರಣ ಕಾಯ್ದೆ ಮತ್ತು ಕೆಲವು ಸಂಬಂಧಿತ ಕಾರ್ಯವಿಧಾನಗಳ ಉಲ್ಲಂಘನೆ ಎಂದು ವರ್ಗೀಕರಿಸಿದ್ದರು.
ಜುಲೈ 16ರಂದು ಭೂಮಿಯ ಮೇಲೆ ತಾತ್ಕಾಲಿಕ ಜಪ್ತಿ ಆದೇಶವನ್ನು ಹೊರಡಿಸಲಾಗಿದ್ದು, ಇದರಲ್ಲಿ ರಾಬರ್ಟ್ ವಾದ್ರಾ ಮತ್ತು ಅವರ ಘಟಕಗಳು ಅಂದರೆ ಮೆಸರ್ಸ್ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸಂಬಂಧಿಸಿದ ₹37.64 ಕೋಟಿ ಮೌಲ್ಯದ 43 ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣವನ್ನು ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧದ “ರಾಜಕೀಯ ದ್ವೇಷ” ಎಂದು ಕರೆದಿರುವ ವಾದ್ರಾ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.
ಇ.ಡಿ. ವಾದ್ರಾ ಅವರನ್ನು ಇತರ ಎರಡು ಪ್ರಕರಣಗಳಲ್ಲಿ ತನಿಖೆ ನಡೆಸುತ್ತಿದೆ, ಇದರಲ್ಲಿ ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ ಭಂಡಾರಿ ವಿರುದ್ಧ ಮತ್ತು ರಾಜಸ್ಥಾನದ ಬಿಕಾನೇರ್‌ನಲ್ಲಿ ಭೂ ವ್ಯವಹಾರವೂ ಸೇರಿದೆ.


ನಿಮ್ಮ ಕಾಮೆಂಟ್ ಬರೆಯಿರಿ