ಭಾವನಗರ : ಗುಜರಾತಿನ ಭಾವನಗರ ಜಿಲ್ಲೆಯ ಪಾಲಿತಾಣ ತಾಲ್ಲೂಕಿನ ಗರಾಜಿಯಾ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಸಿಂಹದ ದಾಳಿಯಲ್ಲಿ ಜಾನುವಾರು ಸಾಕಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಂಹವು ಸುಮಾರು ರೈತನನ್ನು ಸುಮಾರು ಅರ್ಧ ಗಂಟೆ ಕಾಲ ಕಚ್ಚಿ ಹಿಡಿದಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಭಾನುವಾರ ಬೆಳಿಗ್ಗೆ ಸುಮಾರು 8:30ರ ಸುಮಾರಿಗೆ ಪಾಲಿತಾಣ ತಾಲ್ಲೂಕಿನ ಗರಾಜಿಯಾ ಗ್ರಾಮದಲ್ಲಿ ನಡೆದಿದ್ದು, ಸಿಂಹವು ವ್ಯಕ್ತಿಯನ್ನು ನೆಲಕ್ಕುರುಳಿಸಿ ತನ್ನ ಪಂಜಾದಿಂದ ಹಿಡಿದುಕೊಂಡಿದ್ದು, ಗ್ರಾಮಸ್ಥರು ಅದನ್ನು ಓಡಿಸಲು ಹರಸಾಹಸ ಪಡುವ ದೃಶ್ಯಗಳು ಅದರಲ್ಲಿ ಸೆರೆಯಾಗಿವೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಗಾಯಗೊಂಡ ವ್ಯಕ್ತಿಯನ್ನು ಕಾಲುಭಾಯಿ ಬೋಗಾಭಾಯಿ ಪರಮಾರ್ ಎಂದು ಗುರುತಿಸಲಾಗಿದೆ. ಅವರು ತಮ್ಮ ಮನೆಯ ಸಮೀಪದಲ್ಲಿದ್ದ ಹಸುಗಳಿಗೆ ಮೇವು ಹಾಕಲು ತೆರಳಿದ್ದ ವೇಳೆ ಏಕಾಏಕಿ ಸಿಂಹವು ಅವರ ಮೇಲೆ ದಾಳಿ ನಡೆಸಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಸಿಂಹವು ವ್ಯಕ್ತಿಯನ್ನು ನೆಲಕ್ಕೆ ಉರುಳಿಸಿ, ಒಂದು ಕಾಲನ್ನು ತನ್ನ ಮುಂಗಾಲುಗಳಿಂದ ಬಿಗಿಯಾಗಿ ಹಿಡಿದಿರುವುದು ಹಾಗೂ ಆತನ ಕೈಯನ್ನು ತನ್ನ ದವಡೆಯಲ್ಲಿ ಕಚ್ಚಿಕೊಂಡಿರುವುದು ಕಾಣಿಸುತ್ತದೆ. ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದರೂ ಗಾಯಾಳು ಸಿಂಹದ ಹಿಡಿತದಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಗೋಚರಿಸುತ್ತದೆ. ಇದೇ ವೇಳೆ ಗ್ರಾಮಸ್ಥರು ಸಿಂಹವನ್ನು ಹೆದರಿಸಿ ಓಡಿಸಲು ಸುತ್ತುವರಿದು ಜೋರಾಗಿ ಕೂಗುತ್ತಾ ಪ್ರಯತ್ನಿಸಿದರೂ, ಸಿಂಹವು ತನ್ನ ಹಿಡಿತವನ್ನು ಬಿಡದೆ ವ್ಯಕ್ತಿಯನ್ನು ತಪ್ಪಿಸಿಕೊಳ್ಳಲು ಅವಕಾಶ ನೀಡಿಲ್ಲ.
ನಂತರ ಗ್ರಾಮಸ್ಥರು ಗಾಯಾಳುವನ್ನು ರಕ್ಷಿಸಿ ತಕ್ಷಣವೇ ಪಾಲಿತಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಸಿಂಹವು ಸುಮಾರು 30 ನಿಮಿಷಗಳ ಕಾಲ ಗಾಯಾಳುವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿತ್ತು. ಬಳಿಕ ಆತನನ್ನು ಬಿಟ್ಟ ನಂತರ ಸಮೀಪದಲ್ಲೇ ಕಟ್ಟಿ ಹಾಕಲಾಗಿದ್ದ ಹಸುವಿನತ್ತ ತೆರಳಿತು ಎಂದು ತಿಳಿದುಬಂದಿದೆ. ಬಳಿಕ ಆತನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಳಿಕ ಗಾಯಾಳುವಿನ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾಳಿ ನಡೆದ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ಮರುಕಳಿಸುತ್ತಿರುವ ಮಾನವ–ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ