ಆಗಸದಿಂದ ಮೃತ್ಯುವಾಗಿ ಬಂದು ಅಪ್ಪಳಿಸುವ ಈ ಭೀಕರ ಕ್ಷಿಪಣಿ ; ಇರಾನಿನ ಖಮೇನಿ ಹತ್ಯೆಗೆ ಇಸ್ರೇಲ್ ಬಳಸಿದ ‘ಬ್ಲೂ ಸ್ಪ್ಯಾರೋ’ ರಹಸ್ಯವೇನು ?

ಫೆಬ್ರವರಿ 28ರಂದು ತೆಹ್ರಾನ್ ಮೇಲೆ ನಡೆಸಿದ ದಾಳಿಯಲ್ಲಿ 37 ವರ್ಷಗಳ ಕಾಲ ಇರಾನ್ ಅನ್ನು ಆಳಿದ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಇಸ್ರೇಲ್ ಹತ್ಯೆ ಮಾಡಿದೆ. ಈ ಕಾರ್ಯಾಚರಣೆಗೆ ಬಳಸಲಾದ ಪ್ರಮುಖ ಅಸ್ತ್ರವೆಂದರೆ ‘ಬ್ಲೂ ಸ್ಪ್ಯಾರೋ’ (Blue Sparrow). ಇದು ‘ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್’ ಅಭಿವೃದ್ಧಿಪಡಿಸಿದ ಗಾಳಿಯಿಂದ ಉಡಾಯಿಸಲ್ಪಡುವ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ.  ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರನ್ನು ಹತ್ಯೆಗೈಯಲಾದ ಸಂಕೀರ್ಣ ಸೇರಿದಂತೆ ಇರಾನ್‌ನ ಹಲವು ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದರ ಹಿಂದೆ ಇಸ್ರೇಲ್‌ನ ‘ಬ್ಲೂ ಸ್ಪ್ಯಾರೋ’ (Blue Sparrow) ಕ್ಷಿಪಣಿ ನಿರ್ಣಾಯಕ ಪಾತ್ರ ವಹಿಸಿದೆ. ಸುಮಾರು 1,240 ಮೈಲಿಗಳ ದೂರದ ವರೆಗೆ ಕ್ರಮಿಸುವ ಈ ಕ್ಷಿಪಣಿಯು, ತನ್ನ ಗುರಿಯತ್ತ ಅತಿ ವೇಗವಾಗಿ ಧಾವಿಸುವ ಮೊದಲು ಭೂಮಿಯ ವಾತಾವರಣದಿಂದ ಹೊರಹೋಗಿ ಮತ್ತೆ ಭುಮಿಯತ್ತ ತಿರುಗಿ ಗುರಿಯತ್ತ ಸಾಗುತ್ತದೆ ಎಂದು ಹೇಳಲಾಗಿದೆ.
ಬ್ಲೂ ಸ್ಪ್ಯಾರೋ ಕ್ಷಿಪಣಿ ವಿಶೇಷತೆ ಏನು?
ಬ್ಲೂ ಸ್ಪ್ಯಾರೋ ಎಂಬುದು ಗಾಳಿಯಿಂದ ಉಡಾಯಿಸುವ ಮೂರು ಬ್ಯಾಲಿಸ್ಟಿಕ್ ಗುರಿ ಕ್ಷಿಪಣಿಗಳ ಕುಟುಂಬದ ಸದಸ್ಯ. ಇದರಲ್ಲಿ ಬ್ಲಾಕ್ ಸ್ಪ್ಯಾರೋ ಮತ್ತು ಸಿಲ್ವರ್ ಸ್ಪ್ಯಾರೋ ಕೂಡ ಸೇರಿವೆ.
ಬ್ಯಾಲಿಸ್ಟಿಕ್ ಕ್ಷಿಪಣಿಗಳು ರಾಕೆಟ್ ಶಕ್ತಿಯ ಮೂಲಕ ವೇಗವಾಗಿ ಆಕಾಶಕ್ಕೆ ಚಿಮ್ಮುತ್ತವೆ, ನಂತರ ಎಂಜಿನ್ ಸ್ಥಗಿತಗೊಂಡು ಕೇವಲ ಭೂ ಗುರುತ್ವಾಕರ್ಷಣೆಯ ಬಲದಿಂದ ಕೆಳಮುಖವಾಗಿ ಭೂಮಿಯತ್ತ ನುಗ್ಗಿ ಗುರಿಯತ್ತ ನುಗ್ಗುತ್ತವೆ (ಎತ್ತರಕ್ಕೆ ಎಸೆದ ಚೆಂಡಿನಂತೆ).
ಇವುಗಳನ್ನು ಇಸ್ರೇಲ್‌ನ ‘ಆರೋ’ (Arrow) ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಪರೀಕ್ಷಿಸಲು ‘ಅಣಕು ಗುರಿ’ಗಳಾಗಿ (Dummy targets) ತಯಾರಿಸಲಾಗಿತ್ತು. ಅಂದರೆ, ಶತ್ರು ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ತರಬೇತಿಗಾಗಿ ಇವುಗಳನ್ನು ಬಳಸಲಾಗುತ್ತಿತ್ತು.ಈ ಕ್ಷಿಪಣಿಯ 6.51 ಮೀಟರ್ ಹಾಗೂ ತೂಕ 1,900 ಕೆಜಿ ಇರುತ್ತದೆ.
ಇದು ಏಕ-ಹಂತದ ಘನ ಇಂಧನ ಮತ್ತು ಡ್ಯುಯಲ್ GPS ಹಾಗೂ INS (Inertial Navigation System) ಅನ್ನು ಹೊಂದಿದೆ. INS ಎಂಬುದು ಒಂದು ಆಂತರಿಕ ದಿಕ್ಸೂಚಿಯಾಗಿದ್ದು, ಯಾವುದೇ ಹೊರಗಿನ ಸಿಗ್ನಲ್ ಇಲ್ಲದಿದ್ದರೂ ಕ್ಷಿಪಣಿಯ ಚಲನೆಯನ್ನು ನಿಖರವಾಗಿ ಪತ್ತೆಹಚ್ಚುತ್ತದೆ.
ಬ್ಲೂ ಸ್ಪ್ಯಾರೋ’ ಇಸ್ರೇಲಿ ಕ್ಷಿಪಣಿಗಳ ಒಂದು ಮಾದರಿಯ ಭಾಗವಾಗಿದ್ದು, ಇದರಲ್ಲಿ ‘ಬ್ಲಾಕ್ ಸ್ಪ್ಯಾರೋ’ (Black Sparrow) ಮತ್ತು ‘ಸಿಲ್ವರ್ ಸ್ಪ್ಯಾರೋ’ (Silver Sparrow) ಕೂಡ ಸೇರಿವೆ.
ಬಾಹ್ಯಾಕಾಶದ ಮೂಲಕ ಇದು ಹೇಗೆ ಪ್ರಯಾಣಿಸುತ್ತದೆ?
ಇರಾನ್ ಯುದ್ಧದಲ್ಲಿ ಬಳಸುವ ‘ಶಹಾಬ್’ ಮತ್ತು ‘ಸ್ಕಡ್’ ಕ್ಷಿಪಣಿಗಳ ಹಾರಾಟದ ಶೈಲಿಯನ್ನೇ ಬ್ಲೂ ಸ್ಪ್ಯಾರೋ ಕೂಡ ಅನುಕರಿಸುತ್ತದೆ. ಯುದ್ಧ ವಿಮಾನವು ಅತಿ ಎತ್ತರದಲ್ಲಿ ಈ ಕ್ಷಿಪಣಿಯನ್ನು ಬಿಡುಗಡೆ ಮಾಡುತ್ತದೆ. ಕ್ಷಿಪಣಿಯು ಆಕಾಶದಲ್ಲಿ ವಾತಾವರಣ ಇರುವ ಅಂಚಿನವರೆಗೆ ಕಡಿದಾದ ಹಾದಿಯಲ್ಲಿ ಮೇಲಕ್ಕೆ ಚಲಿಸುತ್ತದೆ.
ನಂತರ ಅದರ ಮುಂಭಾಗದ ಒಂದು ಸಣ್ಣ ಭಾಗ ಬೇರ್ಪಟ್ಟು ನೇರವಾಗಿ ಭೂಮಿಯಲ್ಲಿರುವ ಗುರಿಯತ್ತ  ಇಳಿಯುತ್ತದೆ. ಇದನ್ನು ‘ರೀ-ಎಂಟ್ರಿ ವೆಹಿಕಲ್’ ಎಂದು ಕರೆಯಲಾಗುತ್ತದೆ. ಇದಕ್ಕೆ ಅಳವಡಿಸಲಾದ ಸಣ್ಣ ಥ್ರಸ್ಟರ್‌ಗಳು ಈ ಕ್ಷಿಪಣಿಗೆ ನಿಗದಿತ ಗುರಿಯತ್ತ ಸರಿಯಾಗಿ  ಸಾಗಲು ಸಹಾಯ ಮಾಡುತ್ತವೆ.
ಇದನ್ನು ತಡೆಯುವುದು ಏಕೆ ಕಷ್ಟ?
ಹೆಚ್ಚಿನ ರಕ್ಷಣಾ ವ್ಯವಸ್ಥೆಗಳು ಆಕಾಶದ (Horizon) ಕಡೆಯಿಂದ ಬರುವ ಕ್ಷಿಪಣಿ ಅಥವಾ ವಿಮಾನ ಇತ್ಯಾದಿ ಬರುವುದನ್ನು ಗಮನಿಸುತ್ತವೆ. ಆದರೆ ಬ್ಲೂ ಸ್ಪ್ಯಾರೋ ಶಬ್ದದ ವೇಗಕ್ಕಿಂತ ಹಲವು ಪಟ್ಟು ವೇಗವಾಗಿ, ಬಹುತೇಕ ಲಂಬವಾಗಿ (Vertical) ಮೇಲಿನಿಂದ ಕೆಳಕ್ಕೆ ಇಳಿಯುತ್ತದೆ. ವಾಯು ರಕ್ಷಣಾ ವ್ಯವಸ್ಥೆಗಳು ಇದನ್ನು ಗುರುತಿಸುವಷ್ಟರಲ್ಲಿ ಅದಕ್ಕೆ ಪ್ರತಿಕ್ರಿಯಿಸಲು ಸಮಯವೇ ಇರುವುದಿಲ್ಲ. ಸಾಮಾನ್ಯವಾಗಿ ಈ ಕ್ಷಿಪಣಿಯನ್ನು ಯುದ್ಧ ವಿಮಾನದಿಂದ ಉಡಾಯಿಸಲಾಗುತ್ತದೆ. ಉಡಾವಣೆಯ ನಂತರ ಇದರ ಬೂಸ್ಟರ್ ರಾಕೆಟ್‌ಗಳು ಇದನ್ನು ಆಕಾಶದಲ್ಲಿ ಅತಿ ಎತ್ತರದ  ಬ್ಯಾಲಿಸ್ಟಿಕ್‌ ಪಥಕ್ಕೆ ಕಳುಹಿಸುತ್ತವೆ, ನಂತರ ಭೂಮಿಯತ್ತ ತಿರುಗಿ ಬಂದ ನಿಗದಿತ ಗುರಿಯೆಡೆಗೆ ಧಾವಿಸುತ್ತದೆ.
ಬ್ಲಾಕ್ ಸ್ಪ್ಯಾರೋ ಕ್ಷಿಪಣಿಯನ್ನು ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಬೆದರಿಕೆಗಳನ್ನು, ವಿಶೇಷವಾಗಿ ಸೋವಿಯತ್ ವಿನ್ಯಾಸದ ‘ಸ್ಕಡ್-ಬಿ’ (Scud-B) ನಂತಹ ವ್ಯವಸ್ಥೆಗಳನ್ನು ಅನುಕರಿಸಲು ಅಭಿವೃದ್ಧಿಪಡಿಸಲಾಗಿದೆ. ಇದು ಇಸ್ರೇಲ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಪರೀಕ್ಷಿಸಲು ಮತ್ತು ಮೌಲ್ಯಮಾಪನ ಮಾಡಲು ಬಳಸುವ ದೇಶದ ‘ಸ್ಪ್ಯಾರೋ’ ಮಾದರಿಯ ಗಾಳಿಯಿಂದ ಉಡಾಯಿಸುವ ಗುರಿ ಕ್ಷಿಪಣಿಯಾಗಿದೆ.
ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಇದರ ಪಾತ್ರ
ಫೆಬ್ರವರಿ 28, 2026 ರ ಬೆಳಿಗ್ಗೆ ತೆಹ್ರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಭಾರಿ ಸ್ಫೋಟಗಳು ಸಂಭವಿಸಿದವು. ಇಸ್ರೇಲ್ ಇದನ್ನು ‘ಆಪರೇಷನ್ ರೋರಿಂಗ್ ಲಯನ್’ ಎಂದು ಕರೆದರೆ, ಅಮೆರಿಕದ ಪೆಂಟಗನ್ ಇದನ್ನು ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಸಿತ್ತು. ಮಾರ್ಚ್ 1, 2026 ರಂದು ಖಮೇನಿಯ ಸಾವು ದೃಢಪಟ್ಟಿತು. ಇರಾನ್ 40 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿತು.
ಬ್ಲೂ ಸ್ಪ್ಯಾರೋನಿಂದ ಜನ್ಮತಾಳಿದ ‘ROCKS’ ಕ್ಷಿಪಣಿ
ಬ್ಲೂ ಸ್ಪ್ಯಾರೋ ಕೇವಲ ಒಂದು ಅಭ್ಯಾಸದ ಕ್ಷಿಪಣಿಯಾಗಿತ್ತು, ಆದರೆ ರಾಫೆಲ್ ಸಂಸ್ಥೆ ಇದೇ ತಂತ್ರಜ್ಞಾನವನ್ನು ಬಳಸಿ ‘ROCKS’ ಎಂಬ ಅತ್ಯಂತ ಅಪಾಯಕಾರಿ ಯುದ್ಧ ಕ್ಷಿಪಣಿಯನ್ನು ತಯಾರಿಸಿತು. ROCKS ಕ್ಷಿಪಣಿಯು 500 ಕೆಜಿ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲದು. ಇದು ತನ್ನ ಗುರಿಯ ಕೇವಲ 3 ಮೀಟರ್ ವ್ಯಾಪ್ತಿಯಲ್ಲಿ (ಒಂದು ಕಾರಿನ ಅಗಲದಷ್ಟು ಅಂತರ) ಅತ್ಯಂತ ನಿಖರವಾಗಿ ದಾಳಿ ಮಾಡುತ್ತದೆ. ಇದಕ್ಕಾಗಿಯೇ ಇದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ಶತ್ರುಗಳು GPS ಸಿಗ್ನಲ್‌ಗಳನ್ನು ಜಾಮ್ ಮಾಡಿದರೂ ಇದು ತನ್ನ ಗುರಿಯನ್ನು ತಪ್ಪುವುದಿಲ್ಲ. ಇದು ಭೂಮಿಯ ಮೇಲಿನ ಅಥವಾ ನೆಲದಡಿಯಲ್ಲಿರುವ ಗುರಿಗಳನ್ನು ಯಾವುದೇ ಹವಾಮಾನದಲ್ಲಿ ಧ್ವಂಸ ಮಾಡಬಲ್ಲದು.
ಸಂಕ್ಷಿಪ್ತವಾಗಿ ಹೇಳುವುದಾದರೆ  ಬ್ಲೂ ಸ್ಪ್ಯಾರೋ ಒಂದು ರೇಖಾಚಿತ್ರವಾಗಿದ್ದರೆ, ROCKS ಎಂಬುದು ಅದರ ಪೂರ್ಣ ಪ್ರಮಾಣದ ಮಾರಕ ಆಯುಧವಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement