ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ; ಹೆಡ್‌ಮಾಸ್ಟರ್, ಮೂವರು ಶಿಕ್ಷಕರು ಅಮಾನತು

ನವದೆಹಲಿ: ದೆಹಲಿಯ ಸೇಂಟ್ ಕೊಲಂಬಸ್ ಶಾಲೆಯ 16 ವರ್ಷದ ವಿದ್ಯಾರ್ಥಿಯೊಬ್ಬ ಮೆಟ್ರೋ ನಿಲ್ದಾಣದ ಎತ್ತರದ ಪ್ಲಾಟ್‌ಫಾರ್ಮ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ನಂತರ, ಬಾಲಕನ ತಂದೆ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಹೆಸರಿಸಲಾದ ಶಾಲೆಯ ಹೆಡ್‌ಮಾಸ್ಟರ್ ಮತ್ತು ಮೂವರು ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿಯು ಅಮಾನತುಗೊಳಿಸಿದೆ.
ಶೌರ್ಯ ಪಾಟೀಲ ಎಂಬ ವಿದ್ಯಾರ್ಥಿಯು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿಕ್ಷಕರನ್ನು ದೂಷಿಸಿ ಮರಣ ಪತ್ರವನ್ನು ಬರೆದಿಟ್ಟಿದ್ದನು. ಈ ಸಂಬಂಧ, ಶೌರ್ಯನ ಪೋಷಕರು ಶುಕ್ರವಾರ ಶಾಲೆಯ ಹೊರಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಹೆಡ್‌ಮಾಸ್ಟರ್ ಮತ್ತು ಮೂವರು ಶಿಕ್ಷಕರಿಗೆ ರಾಜೀನಾಮೆ ನೀಡಲು ಸೂಚಿಸಿಲ್ಲ, ಪರಿಸ್ಥಿತಿ ತಿಳಿಯಾದ ನಂತರ ಶಾಲೆಯು ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದ್ದಾರೆ.

ಡೆತ್‌ ನೋಟ್‌ನಲ್ಲಿ ಏನಿದೆ?
ಶೌರ್ಯ ತಮ್ಮ ಆತ್ಮಹತ್ಯೆ ಪತ್ರ (ಡೆತ್‌ನೋಟ್‌)ದಲ್ಲಿ “ಸಾರಿ ಮಮ್ಮಿ, ಆಪ್ಕಾ ಇತ್ನಿ ಬಾರ್ ದಿಲ್ ತೋಡಾ, ಅಬ್ ಲಾಸ್ಟ್ ಬಾರ್ ತೋಡುಂಗಾ. ಸ್ಕೂಲ್ ಕಿ ಟೀಚರ್ಸ್ ಅಬ್ ಹೈ ಐಸೆ, ಕ್ಯಾ ಬೋಲು (ಕ್ಷಮಿಸಿ ಮಮ್ಮಿ, ನಾನು ನಿಮ್ಮ ಹೃದಯವನ್ನು ಹಲವು ಬಾರಿ ಮುರಿದಿದ್ದೇನೆ ಮತ್ತು ನಾನು ಕೊನೆಯ ಬಾರಿಗೆ ಅದನ್ನು ಮಾಡುತ್ತಿದ್ದೇನೆ. ಶಾಲೆಯಲ್ಲಿ ಶಿಕ್ಷಕರು ಹೀಗೆಯೇ ಇದ್ದಾರೆ, ನಾನು ಏನು ಹೇಳಲಿ?)” ಎಂದು ಬರೆದಿದ್ದಾನೆ.
ಬುಧವಾರ ದಾಖಲಿಸಲಾದ ಎಫ್‌ಐಆರ್‌ನಲ್ಲಿ, ಬಾಲಕನ ತಂದೆ ಪ್ರದೀಪ ಪಾಟೀಲ ಅವರು 5 ರಿಂದ 10 ನೇ ತರಗತಿಯ ಹೆಡ್‌ಮಾಸ್ಟರ್ ಮತ್ತು ಮೂವರು ಶಿಕ್ಷಕರ ಹೆಸರನ್ನು ಉಲ್ಲೇಖಿಸಿ, ತಮ್ಮ ಮಗನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಶಾಲಾ ಪ್ರಾಂಶುಪಾಲರ ಆದೇಶ
ಶಾಲೆಯ ಪ್ರಾಂಶುಪಾಲರಾದ ರಾಬರ್ಟ್ ಫರ್ನಾಂಡಿಸ್ ಅವರು, ಹೆಡ್‌ಮಾಸ್ಟರ್ ಮತ್ತು ಶಿಕ್ಷಕರಿಗೆ ನೀಡಿದ ಪತ್ರಗಳಲ್ಲಿ, ಮುಂದಿನ ಸೂಚನೆ ಬರುವವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ತನಿಖೆಗೆ ಲಭ್ಯವಿರುವಂತೆ ಅವರು ಸೂಚಿಸಿದ್ದು, ಆಡಳಿತ ಮಂಡಳಿಯ ಅನುಮತಿಯಿಲ್ಲದೆ ಶಾಲೆಯನ್ನು ಪ್ರವೇಶಿಸಬಾರದು ಅಥವಾ ವಿದ್ಯಾರ್ಥಿಗಳು, ಸಿಬ್ಬಂದಿ ಅಥವಾ ಪೋಷಕರೊಂದಿಗೆ ಮಾತನಾಡಬಾರದು ಎಂದು ತಿಳಿಸಿದ್ದಾರೆ.
ಪ್ರಾಂಶುಪಾಲರು ತಮ್ಮ ಪತ್ರದಲ್ಲಿ, “ನಿಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ (ಸಂಖ್ಯೆ 336ಎ ತೀಸ್ ಹಜಾರಿ ಕೋರ್ಟ್, ದಿನಾಂಕ ನವೆಂಬರ್ 19, 2025) ಬಗ್ಗೆ ಶಾಲೆಗೆ ತಿಳಿದಿದೆ. ಆರೋಪಗಳ ಗಂಭೀರತೆಯನ್ನು ಗಮನಿಸಿ, ಸಮರ್ಥ ಪ್ರಾಧಿಕಾರವು ತಕ್ಷಣದಿಂದ ಜಾರಿಗೆ ಬರುವಂತೆ ನಿಮ್ಮನ್ನು ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ಉಲ್ಲೇಖಿಸಿದ್ದಾರೆ.

“ತನಿಖೆ ಪೂರ್ಣಗೊಳ್ಳುವವರೆಗೆ ಮತ್ತು ಸಮರ್ಥ ಪ್ರಾಧಿಕಾರದಿಂದ ಹೆಚ್ಚಿನ ಆದೇಶ ಬರುವವರೆಗೆ ನೀವು ಅಮಾನತಿನಲ್ಲಿ ಮುಂದುವರಿಯುತ್ತೀರಿ. ಅಮಾನತು ಅವಧಿಯಲ್ಲಿ, ಯಾವುದೇ ಅಧಿಕೃತ ಸಂವಹನ ಅಥವಾ ವಿಚಾರಣೆಗೆ ನೀವು ಲಭ್ಯವಿರಬೇಕು, ಮತ್ತು ಆಡಳಿತದಿಂದ ಲಿಖಿತ ಅನುಮತಿಯಿಲ್ಲದೆ ಶಾಲಾ ಆವರಣಕ್ಕೆ ಭೇಟಿ ನೀಡುವಂತಿಲ್ಲ ಅಥವಾ ವಿದ್ಯಾರ್ಥಿಗಳು, ಸಿಬ್ಬಂದಿ ಅಥವಾ ಪೋಷಕರೊಂದಿಗೆ ಸಂವಹನ ನಡೆಸುವಂತಿಲ್ಲ” ಎಂದೂ ತಿಳಿಸಲಾಗಿದೆ.
ಪೋಷಕರ ಗಂಭೀರ ಆರೋಪಗಳು
ವಿದ್ಯಾರ್ಥಿ ಶೌರ್ಯ ಪಾಟೀಲ ಮಂಗಳವಾರ ಮಧ್ಯಾಹ್ನ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಎಫ್‌ಐಆರ್‌ನಲ್ಲಿ, ಮೃತ ವಿದ್ಯಾರ್ಥಿಯ ತಂದೆ ಹೆಡ್‌ಮಾಸ್ಟರ್ ಮತ್ತು ಮೂವರು ಶಿಕ್ಷಕರು ಸಣ್ಣ ವಿಷಯಗಳಿಗೂ ತಮ್ಮ ಮಗನನ್ನು ನಿಂದಿಸುತ್ತಿದ್ದರು ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದರು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement