ಕ್ವೆಟ್ಟಾ: ಬಲೋಚಿಸ್ತಾನ್ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿ ಗುಂಪು ‘ಬಲೋಚಿಸ್ತಾನ್ ಲಿಬರೇಶನ್ ಆರ್ಮಿ’ (BLA) ಆರಂಭಿಸಿರುವ ‘ಆಪರೇಷನ್ ಹೇರೋಫ್ – ಹಂತ 2’ (Operation Herof Phase II) ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ನಿದ್ದೆಗೆಡಿಸಿದೆ. ಕಳೆದ 40 ಗಂಟೆಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಈ ನಿರಂತರ ದಾಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಪಾಕಿಸ್ತಾನಿ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವುದಾಗಿ ಬಿಎಲ್‌ಎ ಪ್ರತಿಪಾದಿಸಿದೆ.
ಬಿಎಲ್‌ಎ ವಕ್ತಾರ ಜಿಯಾಂದ್ ಬಲೋಚ್ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಮಸ್ತುಂಗ್, ಖಾರನ್, ತುಂಬ್ ಮತ್ತು ಪಸ್ನಿ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಬಿಎಲ್‌ಎ ಗೆರಿಲ್ಲಾ ಹೋರಾಟಗಾರರು ತಮ್ಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಮತ್ತು ನೋಶ್ಕಿ ನಗರದ ಪ್ರಮುಖ ಭಾಗಗಳಲ್ಲಿ ಪಾಕಿಸ್ತಾನಿ ಸೇನೆಯನ್ನು ಹಿಮ್ಮೆಟ್ಟಿಸಿ, ಅಲ್ಲಿ ತಮ್ಮ ಹತೋಟಿ ಸ್ಥಾಪಿಸಿರುವುದಾಗಿ ಸಂಘಟನೆ ಹೇಳಿಕೊಂಡಿದೆ.
ಸಾವಿನ ಸಂಖ್ಯೆ ಮತ್ತು ವಿಭಿನ್ನ ವಾದಗಳು
ಈ ಸಂಘರ್ಷದಲ್ಲಿ ಉಭಯ ಕಡೆಯೂ ಭಾರಿ ಸಾವುನೋವು ಸಂಭವಿಸಿದೆ. ಆದರೆ ಅಂಕಿಅಂಶಗಳ ಬಗ್ಗೆ ಗೊಂದಲ ಮುಂದುವರಿದಿದೆ:
ಬಿಎಲ್‌ಎ (BLA) ವಾದ: 200ಕ್ಕೂ ಹೆಚ್ಚು ಪಾಕ್ ಸೈನಿಕರು, ಪೊಲೀಸ್ ಮತ್ತು ಫ್ರಂಟಿಯರ್ ಕಾಪ್ಸ್ ಸಿಬ್ಬಂದಿ ಕೊಂದಿರುವುದಾಗಿ ಬಿಎಲ್‌ಎ ಹೇಳಿಕೊಂಡಿದೆ. ಅಲ್ಲದೆ 17 ಮಂದಿ ಸೆರೆ ಹಿಡಿದಿರುವುದಾಗಿ ಹೇಳಿದೆ.
ಪಾಕಿಸ್ತಾನ ಸರ್ಕಾರದ ವಾದ: ಆದರೆ ಬಲೋಚಿಸ್ತಾನ್ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಅವರ ಪ್ರಕಾರ 17 ಭದ್ರತಾ ಸಿಬ್ಬಂದಿ ಮತ್ತು 31 ನಾಗರಿಕರು ಸಾವಿಗೀಡಾಗಿದ್ದಾರೆ.
ಪಾಕ್ ಸೇನೆಯ ಹಕ್ಕು: ಕಳೆದ ಎರಡು ದಿನಗಳಲ್ಲಿ 130ಕ್ಕೂ ಹೆಚ್ಚು ಬಲೋಚ್ ಹೋರಾಟಗಾರರನ್ನು ಹೊಡೆದುರುಳಿಸಿರುವುದಾಗಿ ಪಾಕ್ ಸೇನೆ ಹೇಳಿಕೊಂಡಿದೆ.
ಮೊದಲ ಬಾರಿಗೆ ಮಹಿಳಾ ‘ಫಿದಾಯೀನ್’ಗಳ ಬಳಕೆ
ಈ ಬಾರಿ ‘ಬಲೋಚಿಸ್ತಾನ್ ಲಿಬರೇಶನ್ ಆರ್ಮಿ’ (BLA) ದಾಳಿಯಲ್ಲಿನ ಆಘಾತಕಾರಿ ಅಂಶವೆಂದರೆ ಅದು ಈ ದಾಳಿಯಲ್ಲಿ ಮಹಿಳಾ ಆತ್ಮಾಹುತಿ ಬಾಂಬರ್‌ಗಳ (Suicide Bombers) ಬಳಕೆ ಮಾಡಿದೆ. ಆಸಿಫಾ ಮೆಂಗಲ್ ಎಂಬ ಯುವತಿ ನೋಶ್ಕಿಯಲ್ಲಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಪ್ರಧಾನ ಕಚೇರಿಯ ಮೇಲೆ ಸ್ಫೋಟಕ ತುಂಬಿದ ವಾಹನದೊಂದಿಗೆ (VBIED) ದಾಳಿ ನಡೆಸಿ ಮೃತಪಟ್ಟಿದ್ದಾಳೆ.
ಹವಾ ಬಲೋಚ್ ಎಂಬ ಮತ್ತೊಬ ಯುವತಿ ಗ್ವಾದರ್ ಫ್ರಂಟ್‌ನಲ್ಲಿ ನಡೆದ ದಾಳಿಯಲ್ಲಿ ಪಾಲ್ಗೊಂಡಿದ್ದು, ಸಾವಿಗೂ 12 ಗಂಟೆ ಮೊದಲು ವೀಡಿಯೊ ಸಂದೇಶ ರವಾನಿಸಿ ಹೋರಾಟಕ್ಕೆ ಕರೆ ನೀಡಿದ್ದಾಳೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಕೂಡ ಈ ದಾಳಿಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದ್ದಾರೆ.
ಮಾನವೀಯತೆಯ ನಡೆ ಮತ್ತು ಎಚ್ಚರಿಕೆ
ನೋಶ್ಕಿಯ ಡೆಪ್ಯುಟಿ ಕಮಿಷನರ್ ಮೊಹಮ್ಮದ್ ಹುಸೇನ್ ಹಜಾರಾ ಮತ್ತು ಅಸಿಸ್ಟೆಂಟ್ ಕಮಿಷನರ್ ಮರಿಯಾ ಶಾಮೂ ಅವರನ್ನು ಬಿಎಲ್‌ಎ ಅಪಹರಿಸಿ ನಂತರ ಬಿಡುಗಡೆ ಮಾಡಿದೆ. ಇದನ್ನು “ಮಾನವೀಯತೆಯ ನಡೆ” ಎಂದು ಕರೆದಿರುವ ಸಂಘಟನೆಯು, “ಸ್ಥಳೀಯ ನಾಗರಿಕ ಆಡಳಿತವು ನಮ್ಮ ಹೋರಾಟಕ್ಕೆ ಅಡ್ಡಿಪಡಿಸದಿದ್ದರೆ ನಾವು ಅವರ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಪಾಕ್ ಸೇನೆಗೆ ಸಹಾಯ ಮಾಡುವವರನ್ನು ಶತ್ರುಗಳೆಂದೇ ಪರಿಗಣಿಸುತ್ತೇವೆ” ಎಂದು ಎಚ್ಚರಿಸಿದೆ.
ಬಲೋಚಿಸ್ತಾನ್ ಏಕೆ ಹೊತ್ತಿ ಉರಿಯುತ್ತಿದೆ?
ಬಲೋಚಿಸ್ತಾನ್ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳಾದ ಇಲ್ಲಿನ ಅನಿಲ ಮತ್ತು ಖನಿಜ ಸಂಪನ್ಮೂಲಗಳನ್ನು ಪಾಕಿಸ್ತಾನ ಲೂಟಿ ಮಾಡುತ್ತಿದೆ ಎಂಬುದು ಬಲೋಚ್ ಜನರ ಆಕ್ರೋಶ.
ಅಲ್ಲದೆ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗೆ ಬಲೋಚ್ ಜನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚೀನಾ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವುದು ಬಿಎಲ್‌ಎ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನ ಸರ್ಕಾರ ಇವರನ್ನು ಭಯೋತ್ಪಾದಕರು ಎಂದು ಕರೆದರೂ, ಸ್ಥಳೀಯ ಜನರಲ್ಲಿ ಬಿಎಲ್‌ಎ ಬಗ್ಗೆ ಸಹಾನುಭೂತಿ ಹೆಚ್ಚುತ್ತಿದೆ. ಇದು ಪಾಕ್ ಸೇನೆಗೆ ದೊಡ್ಡ ತಲೆನೋವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ