ಪ್ಯಾರಿಸ್: ಜಗತ್ತಿನಾದ್ಯಂತ 15 ವರ್ಷದ ವಿದ್ಯಾರ್ಥಿಗಳು ಏನು ಕಲಿಯುತ್ತಿದ್ದಾರೆ? ಅವರು ಓದಿದ್ದನ್ನು ಎಷ್ಟು ಆಳವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ? ಗಣಿತ ಮತ್ತು ವಿಜ್ಞಾನವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಬಲ್ಲರು? ಸ್ಮಾರ್ಟ್ಫೋನ್, ಸಾಮಾಜಿಕ ಜಾಲತಾಣ, ಡಿಜಿಟಲ್ ಸಾಧನಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಅವರ ಕಲಿಕೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ನಡೆಸುವ ಅಂತಾರಾಷ್ಟ್ರೀಯ ವಿದ್ಯಾರ್ಥಿ ಮೌಲ್ಯಮಾಪನ ಕಾರ್ಯಕ್ರಮ (PISA) 2025ರ ವರದಿ ಜಾಗತಿಕ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆತಂಕಕಾರಿ ಚಿತ್ರಣವನ್ನು ತೆರೆದಿಟ್ಟಿದೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಪಿಸಾ (PISA) ವರದಿಯಲ್ಲಿ ಈ ಬಾರಿ 91 ದೇಶಗಳು ಮತ್ತು 7.6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದು ವಿಶ್ವದ ಸುಮಾರು 3.3 ಕೋಟಿ 15 ವರ್ಷದ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತದೆ. 2025ರ ಮೌಲ್ಯಮಾಪನದಲ್ಲಿ ವಿಜ್ಞಾನಕ್ಕೆ ಪ್ರಮುಖ ಸ್ಥಾನ ನೀಡಲಾಗಿದ್ದು, ಓದು ಮತ್ತು ಗಣಿತದ ಜೊತೆಗೆ ಡಿಜಿಟಲ್ ಜಗತ್ತಿನಲ್ಲಿ ಕಲಿಕೆಯ ಕುರಿತ ಹೊಸ ಮೌಲ್ಯಮಾಪನವನ್ನೂ ನಡೆಸಲಾಗಿದೆ.
ಒಂದು ದಶಕದಿಂದ ಕುಸಿಯುತ್ತಿರುವ ಕಲಿಕೆಯ ಮಟ್ಟ
ವರದಿಯ ಅತ್ಯಂತ ಗಮನಾರ್ಹ ಅಂಶವೆಂದರೆ ಒಇಸಿಡಿ (OECD) ರಾಷ್ಟ್ರಗಳಲ್ಲಿನ ವಿದ್ಯಾರ್ಥಿಗಳ ಮೂಲಭೂತ ಕಲಿಕಾ ಸಾಮರ್ಥ್ಯದಲ್ಲೇ ಕುಸಿತ ಕಂಡುಬಂದಿರುವುದು. ಇದೀಗ ಒಇಸಿಡಿ (OECD) ದೇಶಗಳ 15 ವರ್ಷದ ವಿದ್ಯಾರ್ಥಿಗಳ ಪೈಕಿ ಶೇ.20ರಷ್ಟು ಮಂದಿ ವಿಜ್ಞಾನ, ಓದು ಮತ್ತು ಗಣಿತ—ಈ ಮೂರೂ ಕ್ಷೇತ್ರಗಳಲ್ಲಿ ಕಡಿಮೆ ಸಾಧನೆ ಮಾಡುವವರಾಗಿದ್ದಾರೆ. 2022ರಲ್ಲಿ ಈ ಪ್ರಮಾಣ ಶೇ.16ರಷ್ಟಿತ್ತು.
ಇಂತಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಉದ್ಯೋಗ ಹಾಗೂ ದೈನಂದಿನ ಬದುಕಿಗೆ ಅಗತ್ಯವಾಗಿರುವ ಮೂಲಭೂತ ಕೌಶಲ್ಯಗಳೇ ಸಮರ್ಪಕವಾಗಿ ರೂಪುಗೊಂಡಿಲ್ಲ ಎಂಬುದು ವರದಿಯ ಕಳವಳಕಾರಿ ಅಂಶವಾಗಿದೆ.
ವಿಶೇಷವಾಗಿ ಓದು ಮತ್ತು ಗಣಿತದಲ್ಲಿ ಕುಸಿತ ತೀವ್ರವಾಗಿದೆ. 2015ರಿಂದ 2025ರವರೆಗೆ ಒಇಸಿಡಿ (OECD) ರಾಷ್ಟ್ರಗಳಲ್ಲಿ ಸರಾಸರಿ ಓದುವ ಸಾಮರ್ಥ್ಯ 28 ಅಂಕಗಳಷ್ಟು, ಗಣಿತದ ಸಾಧನೆ 22 ಅಂಕಗಳಷ್ಟು ಕುಸಿದಿದೆ. ಇದು ಸರಿಸುಮಾರು ಒಂದು ವರ್ಷಕ್ಕೂ ಹೆಚ್ಚಿನ ಕಲಿಕೆಗೆ ಸಮಾನವಾದ ಹಿನ್ನಡೆ ಎಂದು ವರದಿ ಸೂಚಿಸುತ್ತದೆ. ಒಇಸಿಡಿ (OECD) ಹೊರಗಿನ ದೇಶಗಳಲ್ಲಿಯೂ ಓದುವ ಸಾಮರ್ಥ್ಯ ಸರಾಸರಿ 16 ಅಂಕಗಳಷ್ಟು ಕುಸಿದಿದೆ.
ಓದುವುದು ಗೊತ್ತಿದೆ; ಆದರೆ ಆಳವಾಗಿ ಓದುವ ಸಾಮರ್ಥ್ಯ ಕುಸಿಯುತ್ತಿದೆ
ಪಿಐಎಸ್ಎ (PISA) ವರದಿಯಲ್ಲಿ ಓದುವ ಸಾಮರ್ಥ್ಯದ ಬದಲಾವಣೆಯು ವಿಶೇಷವಾಗಿ ಗಮನ ಸೆಳೆಯುತ್ತದೆ. ವಿದ್ಯಾರ್ಥಿಗಳು ಕೇವಲ ಪದಗಳನ್ನು ಓದುವುದಷ್ಟೇ ಅಲ್ಲದೆ, ಮಾಹಿತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು, ವಿವಿಧ ಮೂಲಗಳಲ್ಲಿರುವ ಮಾಹಿತಿಯನ್ನು ಪರಸ್ಪರ ಸಂಪರ್ಕಿಸುವುದು ಮತ್ತು ತಾವು ಓದಿದ್ದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವುದು ಮುಂತಾದ ಉನ್ನತ ಮಟ್ಟದ ಕೌಶಲ್ಯಗಳಲ್ಲಿ ಹಿನ್ನಡೆ ಕಂಡುಬಂದಿದೆ.
ವಿಶೇಷವಾಗಿ ದೀರ್ಘ ಪಠ್ಯಗಳನ್ನು ಓದಿ ಅರ್ಥಮಾಡಿಕೊಳ್ಳಬೇಕಾದ ಹಾಗೂ ಆಳವಾದ ಚಿಂತನೆ ಅಗತ್ಯವಿರುವ ಪ್ರಶ್ನೆಗಳಲ್ಲಿ ವಿದ್ಯಾರ್ಥಿಗಳ ಸಾಧನೆ ಹೆಚ್ಚು ಕುಸಿದಿದೆ.
ವಿದ್ಯಾರ್ಥಿಗಳು ಓದುವ ರೀತಿಯಲ್ಲೂ ಬದಲಾವಣೆಯಾಗಿದೆ. 2018ರಿಂದ 2025ರ ನಡುವೆ ನಿಖರವಾಗಿ ಮತ್ತು ಸರಾಗವಾಗಿ ಓದುವ ವಿದ್ಯಾರ್ಥಿಗಳ ಪ್ರಮಾಣ ಸುಮಾರು 7% ಅಂಕಗಳಷ್ಟು ಕಡಿಮೆಯಾಗಿದೆ. ಮತ್ತೊಂದೆಡೆ, ವೇಗವಾಗಿ ಪ್ರತಿಕ್ರಿಯಿಸಿದರೂ ತಪ್ಪು ಉತ್ತರ ನೀಡುವ ಅವಸರದ ಓದುಗರು (hasty readers) ಪ್ರಮಾಣ ಸುಮಾರು ಶೇ.7ರಿಂದ ಶೇ.11ಕ್ಕೆ ಏರಿದೆ.
ಇದು ಕೇವಲ ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಲ್ಲ ಎಂಬುದು ಒಇಸಿಡಿ (OECD)ಯ ಪ್ರಮುಖ ಅಭಿಪ್ರಾಯ. ಹಲವು ದೇಶಗಳಲ್ಲಿ ವಿದ್ಯಾರ್ಥಿಗಳ ಸಾಧನೆ ಕುಸಿಯುವ ಪ್ರವೃತ್ತಿ ಕೋವಿಡ್ಗಿಂತಲೂ ಮುಂಚೆಯೇ ಆರಂಭವಾಗಿತ್ತು. ಅಂದರೆ, ಜಾಗತಿಕ ಶಿಕ್ಷಣ ವ್ಯವಸ್ಥೆ ಕೆಲಕಾಲದಿಂದ ಎದುರಿಸುತ್ತಿರುವ ಸಮಸ್ಯೆ ಇದು.
ವಿದ್ಯಾರ್ಥಿಗಳ ಬದಲಾಗುತ್ತಿರುವ ಓದುವ ಅಭ್ಯಾಸ, ಹೆಚ್ಚುತ್ತಿರುವ ಡಿಜಿಟಲೀಕರಣ, ಸ್ಕ್ರೀನ್ ಮುಂದೆ ಕಳೆಯುವ ಹೆಚ್ಚಿನ ಸಮಯ ಹಾಗೂ ಓದುವ ಆಸಕ್ತಿ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ವರದಿ ಹೇಳುತ್ತದೆ. ಹಿಂದೆ ಪುಸ್ತಕ, ನಿಯತಕಾಲಿಕೆ ಮತ್ತು ಪತ್ರಿಕೆಗಳ ಮೂಲಕ ಹೆಚ್ಚು ಪಠ್ಯವನ್ನು ಓದುತ್ತಿದ್ದ ವಿದ್ಯಾರ್ಥಿಗಳು ಈಗ ಆನ್ಲೈನ್ ಹುಡುಕಾಟ, ಚಾಟ್ಗಳು ಮತ್ತು ಡಿಜಿಟಲ್ ಸುದ್ದಿಗಳ ಮೂಲಕ ಹೆಚ್ಚು ಪಠ್ಯವನ್ನು ಓದುತ್ತಿದ್ದಾರೆ.
ವಿಜ್ಞಾನ ಮಾತ್ರ ತುಸು ಸ್ಥಿರ
ಓದು ಮತ್ತು ಗಣಿತಕ್ಕೆ ಹೋಲಿಸಿದರೆ ಪಿಐಎಸ್ಎ (PISA) 2025ರ ಪ್ರಮುಖ ಕ್ಷೇತ್ರವಾಗಿದ್ದ ವಿಜ್ಞಾನದಲ್ಲಿ ಪರಿಸ್ಥಿತಿ ತುಸು ಸಮಾಧಾನಕರವಾಗಿದೆ. 2015ರಿಂದ 2025ರವರೆಗೆ ಒಇಸಿಡಿ (OECD) ದೇಶಗಳ ವಿಜ್ಞಾನ ಸಾಧನೆ ಸ್ವಲ್ಪಮಟ್ಟಿಗೆ ಮಾತ್ರ ಕುಸಿದಿದ್ದು, ಒಇಸಿಡಿ ಹೊರಗಿನ ದೇಶಗಳಲ್ಲಿ ಅದು ಒಟ್ಟಾರೆ ಸ್ಥಿರವಾಗಿದೆ.
ಕೆಲವು ದೇಶಗಳು ಜಾಗತಿಕ ಕುಸಿತದ ಪ್ರವೃತ್ತಿಗೆ ವಿರುದ್ಧವಾಗಿ ವಿಜ್ಞಾನದಲ್ಲಿ ಸುಧಾರಣೆ ಸಾಧಿಸಿವೆ. 2022ರಿಂದ 2025ರ ನಡುವೆ ಕೋಸ್ಟರಿಕಾ, ಸ್ಲೋವಾಕ್ ಗಣರಾಜ್ಯ, ಟರ್ಕಿ, ಬ್ರಿಟನ್, ಕಾಂಬೋಡಿಯಾ, ಎಲ್ ಸಾಲ್ವಡಾರ್, ಜಾರ್ಜಿಯಾ, ಜೋರ್ಡಾನ್, ಮಂಗೋಲಿಯಾ, ಮೊಂಟೆನೆಗ್ರೊ, ಫಿಲಿಪ್ಪೀನ್ಸ್, ಸೌದಿ ಅರೇಬಿಯಾ, ಥಾಯ್ಲೆಂಡ್, ಯುಎಇ, ಉರುಗ್ವೆ ಮತ್ತು ಉಜ್ಬೇಕಿಸ್ತಾನ ಮೊದಲಾದ ದೇಶಗಳು ವಿಜ್ಞಾನ ಕ್ಷೇತ್ರದಲ್ಲಿ ಸುಧಾರಣೆ ದಾಖಲಿಸಿವೆ.
ಜಗತ್ತಿನ ಎಲ್ಲ ಶಿಕ್ಷಣ ವ್ಯವಸ್ಥೆಗಳೂ ಕುಸಿಯುತ್ತಿವೆ ಎಂಬ ವಾದಕ್ಕೂ ವರದಿ ಸಂಪೂರ್ಣ ಬೆಂಬಲ ನೀಡುವುದಿಲ್ಲ. ಚೀನಾದ ಹೆಚ್ಚಿನ ಪ್ರದೇಶಗಳು, ಎಸ್ಟೋನಿಯಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ಚೀನೀ ತೈಪೆ ಮತ್ತು ಬ್ರಿಟನ್ ಮೂರು ಕ್ಷೇತ್ರಗಳಲ್ಲೂ ಅಂದರೆ ಓದು, ಗಣಿತ, ವಿಜ್ಞಾನ ಈ ಮೂರು ಕ್ಷೇತ್ರಗಳಲ್ಲಿಯೂ ಅಗ್ರ 10 ಶಿಕ್ಷಣ ವ್ಯವಸ್ಥೆಗಳ ಪೈಕಿ ಸ್ಥಾನ ಪಡೆದಿವೆ.
ದಿನಕ್ಕೆ 6 ಗಂಟೆ ಡಿಜಿಟಲ್ ಸಾಧನಗಳ ಮುಂದೆ ವಿದ್ಯಾರ್ಥಿಗಳು
ಇದರ ಮತ್ತೊಂದು ಪ್ರಮುಖ ಆಯಾಮ ವಿದ್ಯಾರ್ಥಿಗಳ ಡಿಜಿಟಲ್ ಬದುಕು. ಒಇಸಿಡಿ (OECD) ದೇಶಗಳ 15 ವರ್ಷದ ವಿದ್ಯಾರ್ಥಿಗಳು ವಾರದ ದಿನಗಳಲ್ಲಿ ದಿನಕ್ಕೆ ಸರಾಸರಿ 6 ಗಂಟೆ, ವಾರಾಂತ್ಯದಲ್ಲಿ ಸುಮಾರು 5 ಗಂಟೆ ಡಿಜಿಟಲ್ ಸಾಧನಗಳನ್ನು ಬಳಸುತ್ತಿದ್ದಾರೆ. ಇದರಲ್ಲಿ ಕಲಿಕೆ ಮತ್ತು ಮನರಂಜನೆ ಎರಡೂ ಸೇರಿವೆ.
ವಾರದ ದಿನಗಳಲ್ಲಿ ಸುಮಾರು 3.4 ಗಂಟೆ ಮನರಂಜನೆಗಾಗಿ, ಮೂರು ಗಂಟೆಗಿಂತ ಸ್ವಲ್ಪ ಕಡಿಮೆ ಸಮಯವನ್ನು ಕಲಿಕೆಗಾಗಿ ಡಿಜಿಟಲ್ ಸಾಧನಗಳನ್ನು ಬಳಸುತ್ತಿದ್ದಾರೆ.
ಆದರೆ ತಂತ್ರಜ್ಞಾನವೇ ಸಮಸ್ಯೆ ಎಂದು ಪಿಐಎಸ್ಎ (PISA) ವರದಿ ಹೇಳುವುದಿಲ್ಲ. ಬದಲಾಗಿ, ಕಲಿಕೆಗಾಗಿ ದಿನಕ್ಕೆ ಗರಿಷ್ಠ 5 ಗಂಟೆಯವರೆಗೆ ಡಿಜಿಟಲ್ ಸಾಧನಗಳನ್ನು ಮಿತವಾಗಿ ಬಳಸುವ ವಿದ್ಯಾರ್ಥಿಗಳು, ಡಿಜಿಟಲ್ ಸಾಧನಗಳನ್ನು ಬಳಸದೇ ಇರುವವರು ಅಥವಾ ಅತಿಯಾಗಿ ಬಳಸುವವರು ಇವರಿಬ್ಬರಿಗಿಂತ ವಿಜ್ಞಾನದಲ್ಲಿ ಉತ್ತಮ ಸಾಧನೆ ತೋರಿಸಿರುವುದು ಕಂಡುಬಂದಿದೆ.
ಆದರೆ ಮನರಂಜನೆಯ ವಿಷಯದಲ್ಲಿ ಚಿತ್ರ ಬದಲಾಗುತ್ತದೆ. ಶಾಲೆಯಲ್ಲಿ ದಿನಕ್ಕೆ ಒಂದು ಗಂಟೆಯವರೆಗೆ ಮನರಂಜನೆಗಾಗಿ ಡಿಜಿಟಲ್ ಸಾಧನ ಬಳಸುವ ವಿದ್ಯಾರ್ಥಿಗಳ ವಿಜ್ಞಾನ ಸಾಧನೆ ಅತ್ಯುತ್ತಮವಾಗಿದ್ದು, ಅದಕ್ಕಿಂತ ಹೆಚ್ಚು ಸಮಯ ಬಳಕೆ ಮಾಡಿದಂತೆ ಸಾಧನೆ ಕುಸಿಯುವ ಸಂಬಂಧ ಕಂಡುಬಂದಿದೆ.
ತರಗತಿಯಲ್ಲೇ ಸ್ಮಾರ್ಟ್ಫೋನ್ ದೊಡ್ಡ ಅಡ್ಡಿ
ಡಿಜಿಟಲ್ ವ್ಯಸನದ ಮತ್ತೊಂದು ಮುಖ ತರಗತಿಯಲ್ಲೇ ಗೋಚರಿಸುತ್ತಿದೆ. ಶೇ.28ರಷ್ಟು ವಿದ್ಯಾರ್ಥಿಗಳು, ಬಹುತೇಕ ಅಥವಾ ಪ್ರತಿಯೊಂದು ವಿಜ್ಞಾನ ತರಗತಿಯಲ್ಲೂ ತಮ್ಮ ಸಹಪಾಠಿಗಳು ಸ್ಮಾರ್ಟ್ಫೋನ್, ವೆಬ್ಸೈಟ್ಗಳು ಅಥವಾ ಇತರ ಡಿಜಿಟಲ್ ಸಾಧನಗಳಿಂದಾಗಿ ಗಮನ ಬೇರೆಡೆಗೆ ಹರಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಈ ಸವಲತ್ತು ಇರದ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಈ ಪ್ರಮಾಣ ಶೇ.31, ಸವಲತ್ತು ಇರುವ ಶಾಲೆಗಳಲ್ಲಿ ಇದು ಶೇ.26 ಆಗಿದೆ. ಆದರೆ ಬಿ-ಎಸ್-ಜೆ-ಝಡ್ (ಚೀನಾ), ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಶೇ.10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇಂತಹ ಡಿಜಿಟಲ್ ವ್ಯಾಕುಲತೆಯನ್ನು ವರದಿ ಮಾಡಿದ್ದಾರೆ.
ಶಾಲೆಗಳೂ ಡಿಜಿಟಲ್ ಯುಗಕ್ಕೆ ಸಿದ್ಧವಾಗಿಲ್ಲ
ವಿದ್ಯಾರ್ಥಿಗಳಷ್ಟೇ ಅಲ್ಲ, ಶಾಲೆಗಳ ಡಿಜಿಟಲ್ ಸಿದ್ಧತೆಯಲ್ಲೂ ಸಮಸ್ಯೆ ಇದೆ. ಹಲವು ದೇಶಗಳಲ್ಲಿ ಡಿಜಿಟಲ್ ಸಂಪನ್ಮೂಲಗಳಿಗೆ ಪ್ರವೇಶ ಸುಧಾರಿಸಿದ್ದರೂ, 2025ರಲ್ಲಿ ಶಾಲೆಗಳು ಡಿಜಿಟಲ್ ಕಲಿಕೆಗೆ ಸಿದ್ಧವಾಗಿರುವ ಮಟ್ಟ 2022ಕ್ಕಿಂತ ಕಡಿಮೆಯಾಗಿದೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.
ಕೇವಲ ಶೇ.64ರಷ್ಟು ಶಾಲೆಗಳಲ್ಲಿ ಪರಿಣಾಮಕಾರಿ ಆನ್ಲೈನ್ ಕಲಿಕಾ ಸಪೋರ್ಟಿಂಗ್ ವ್ಯವಸ್ಥೆ ಇದೆ. ಶೇ.75ರಷ್ಟು ಶಾಲೆಗಳು ಮಾತ್ರ ಡಿಜಿಟಲ್ ಸಾಧನಗಳನ್ನು ಬೋಧನೆಯಲ್ಲಿ ಬಳಸಲು ಶಿಕ್ಷಕರಿಗೆ ಅಗತ್ಯವಾದ ತಾಂತ್ರಿಕ ಮತ್ತು ಬೋಧನಾ ಕೌಶಲ್ಯಗಳಿವೆ ಎಂದು ಹೇಳಿವೆ.
ಇನ್ನು ಶಿಕ್ಷಕರು ಡಿಜಿಟಲ್ ಸಾಧನಗಳನ್ನು ಬೋಧನೆಯಲ್ಲಿ ಬಳಸುವಂತೆ ಉತ್ತೇಜಿಸಲು ಶೇ.53ರಷ್ಟು ಶಾಲೆಗಳಲ್ಲಿ ಮಾತ್ರ ಪ್ರೋತ್ಸಾಹಕ ವ್ಯವಸ್ಥೆಗಳಿವೆ. ಅನುಕೂಲಕರ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳಿರುವ ಶಾಲೆಗಳು ಅನನುಕೂಲಕರ ಹಿನ್ನೆಲೆಯ ಶಾಲೆಗಳಿಗಿಂತ ಹೆಚ್ಚು ಡಿಜಿಟಲ್ ಸಿದ್ಧತೆಯನ್ನು ಹೊಂದಿರುವ ಪ್ರವೃತ್ತಿಯೂ ಕಂಡುಬಂದಿದೆ.
ಶಾಲಾ ಕಲಿಕೆಯ ಭಾಗವಾಗುತ್ತಿರುವ ಎಐ (AI)
2025ರ ವೇಳೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ಬಾಟ್ಗಳು ವಿದ್ಯಾರ್ಥಿಗಳ ಶಾಲಾ ಚಟುವಟಿಕೆಯ ಸಾಮಾನ್ಯ ಭಾಗವಾಗಿವೆ. ಒಇಸಿಡಿ (OECD) ದೇಶಗಳ ಶೇ.46ರಷ್ಟು ವಿದ್ಯಾರ್ಥಿಗಳು ವಾರಕ್ಕೆ ಕನಿಷ್ಠ ಒಮ್ಮೆಯಾದರೂ ಎಐ(AI) ಚಾಟ್ಬಾಟ್ಗಳನ್ನು ಕಲಿಕೆಗೆ ಬಳಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಪ್ರತಿದಿನ ಅಥವಾ ಬಹುತೇಕ ಪ್ರತಿದಿನ ಬಳಸುವವರ ಪ್ರಮಾಣ ಸುಮಾರು ಶೇ.20 ಮಾತ್ರ.
ಓದಿನ ಸಾರಾಂಶ ತಯಾರಿಸುವುದು, ಪ್ರಾಥಮಿಕ ಸಂಶೋಧನೆ ನಡೆಸುವುದು ಅಥವಾ ಬರಹದ ಕರಡು ಸಿದ್ಧಪಡಿಸುವಂತಹ ನಿರ್ದಿಷ್ಟ ಕಾರ್ಯಗಳಿಗೆ ಎಐ ಬಳಸುವ ವಿದ್ಯಾರ್ಥಿಗಳು, ಅಂತಹ ಕಾರ್ಯಗಳಿಗೆ ಎಐ ಬಳಸದ ವಿದ್ಯಾರ್ಥಿಗಳಿಗಿಂತ ವಿಜ್ಞಾನದಲ್ಲಿ ಸಾಮಾನ್ಯವಾಗಿ ಕಡಿಮೆ ಸಾಧನೆ ಮಾಡಿದ್ದಾರೆ.
ಆದರೆ ಇದರಿಂದ ಎಐ ಬಳಕೆಯೇ ಕಡಿಮೆ ಸಾಧನೆಗೆ ಕಾರಣ ಎಂದು ಸಾಬೀತಾಗುವುದಿಲ್ಲ ಎಂದು ಒಇಸಿಡಿ (OECD) ಹೇಳಿದೆ. ಬದಲಾಗಿ ಎಐ ಅನ್ನು ಯಾವ ಉದ್ದೇಶಕ್ಕೆ ಮತ್ತು ಹೇಗೆ ಬಳಸಲಾಗುತ್ತದೆ ಎಂಬುದೇ ಹೆಚ್ಚು ಮುಖ್ಯವಾಗಿರಬಹುದು ಎಂದು ಹೇಳಿದೆ.
‘ಕಲಿಕೆಗೆ ಸಹಾಯವಾಗಲಿ’ ಎಂಬ ಉದ್ದೇಶದಿಂದ ವಾರಕ್ಕೊಮ್ಮೆ ಎಐ ಬಳಸುವ ವಿದ್ಯಾರ್ಥಿಗಳ ಸಾಧನೆ, ಎಐ ಬಳಸದ ವಿದ್ಯಾರ್ಥಿಗಳ ಸಾಧನೆಗೆ ಬಹುತೇಕ ಸಮಾನವಾಗಿದೆ. ಹೀಗಾಗಿ ಎಐ ಸ್ವತಃ ಸಮಸ್ಯೆಯಲ್ಲ; ಅದರ ಬಳಕೆಯ ವಿಧಾನವೇ ನಿರ್ಣಾಯಕ ಎಂಬ ಸಂದೇಶ ಪಿಐಎಸ್ಎ (PISA) ವರದಿಯಿಂದ ಗೋಚರವಾಗಿದೆ.
ಎಐಯಲ್ಲೂ ಹೊಸ ಸಾಮಾಜಿಕ ಅಸಮಾನತೆ
ಆದರೆ ಎಐ ಮತ್ತೊಂದು ಹೊಸ ರೀತಿಯ ಅಸಮಾನತೆಯನ್ನೂ ಸೃಷ್ಟಿಸುತ್ತಿದೆ. ಶಾಲಾ ಕೆಲಸಕ್ಕಾಗಿ ಎಐ ಬಳಸದ ವಿದ್ಯಾರ್ಥಿಗಳು ಅನನುಕೂಲಕರ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬರುವ ಸಾಧ್ಯತೆ ಹೆಚ್ಚು. ಇದಕ್ಕೆ ಡಿಜಿಟಲ್ ಸಾಧನಗಳ ಕೊರತೆ, ಸ್ಥಿರ ಇಂಟರ್ನೆಟ್ ಸಂಪರ್ಕದ ಅಭಾವ ಮತ್ತು ಹಣ ಪಾವತಿಸಿ ಬಳಸಬೇಕಾದ ಎಐ ಸೇವೆಗಳಿಗೆ ಸೀಮಿತ ಪ್ರವೇಶ ಕಾರಣಗಳಾಗಿವೆ.
ಇನ್ನೊಂದೆಡೆ, ಎಐಯನ್ನು ಹೆಚ್ಚು ಬಾರಿ ಬಳಸುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಅನುಕೂಲಕರ ಹಿನ್ನೆಲೆಯಿಂದ ಬರುತ್ತಿದ್ದಾರೆ. ಎಐ ಸೃಷ್ಟಿಸುವ ಮಾಹಿತಿಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು ಮತ್ತು ಅದರ ಸತ್ಯಾಸತ್ಯತೆಯನ್ನು ಅರ್ಥಮಾಡಿಕೊಳ್ಳುವ ಅವಕಾಶವೂ ಅನುಕೂಲಕರ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಹೆಚ್ಚು ದೊರೆಯುತ್ತಿದೆ.
ಇದು ಮುಂದಿನ ದಿನಗಳಲ್ಲಿ ‘ಎಐ ಸಾಕ್ಷರತೆ’ಯಲ್ಲೂ ಶ್ರೀಮಂತ–ಬಡ ವಿದ್ಯಾರ್ಥಿಗಳ ನಡುವಿನ ಹೊಸ ಅಂತರಕ್ಕೆ ಕಾರಣವಾಗುವ ಆತಂಕವಿದೆ.
ನಿಜವಾದ ಸುಧಾರಣೆ ಎಲ್ಲಿದೆ?
ವಿದ್ಯಾರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ನಡುವಿನ ಸಾಧನೆ ಅಂತರ 2022ರಿಂದ 2025ರ ಅವಧಿಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಡಿಮೆಯಾಗಿದೆ. ಆದರೆ ಇದನ್ನು ಶಿಕ್ಷಣದಲ್ಲಿ ಸಮಾನತೆ ಹೆಚ್ಚಾಗಿದೆ ಎಂದು ಅರ್ಥೈಸಲು ಸಾಧ್ಯವಿಲ್ಲ.
ಯಾಕೆಂದರೆ ಕೆಲವು ಸಂದರ್ಭಗಳಲ್ಲಿ ಈ ಅಂತರ ಕಡಿಮೆಯಾಗಿರುವುದು ಹಿಂದುಳಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದರಿಂದಲ್ಲ; ಮುಂದುವರಿದ ಹಿನ್ನೆಲೆಯ ವಿದ್ಯಾರ್ಥಿಗಳ ಸಾಧನೆ ಕುಸಿದಿರುವುದರಿಂದ.
ವಿಜ್ಞಾನದಲ್ಲಿ ಸವಲತ್ತು ಇಲ್ಲದ ಹಿನ್ನೆಲೆಯ ವಿದ್ಯಾರ್ಥಿಗಳ ಸಾಧನೆ ಬಹುತೇಕ ಸ್ಥಿರವಾಗಿದ್ದರೆ, ಸವಲತ್ತು ಇರುವ ಹಿನ್ನೆಲೆಯ ವಿದ್ಯಾರ್ಥಿಗಳ ಸಾಧನೆ 8 ಅಂಕಗಳಷ್ಟು ಕುಸಿದಿದೆ. ಓದುವ ಕ್ಷೇತ್ರದಲ್ಲಿ ಸವಲತ್ತಿರುವ ಹಿನ್ನೆಲೆಯ ವಿದ್ಯಾರ್ಥಿಗಳ ಸಾಧನೆ 20 ಅಂಕಗಳಷ್ಟು ಕುಸಿದರೆ, ಸವಲತ್ತಿರದ ಹಿನ್ನೆಲೆಯ ವಿದ್ಯಾರ್ಥಿಗಳ ಕುಸಿತ 4 ಅಂಕಗಳು ಮಾತ್ರ.
ಹೀಗಾಗಿ ಅಂಕಿ-ಅಂಶಗಳ ಮೇಲ್ನೋಟಕ್ಕೆ ಕಂಡುಬರುವ ಅಂತರ ಕಡಿಮೆಯಾಗಿರುವುದರ ಹಿಂದೆ ಎಲ್ಲರ ಸಾಧನೆ ಮೇಲೇರಿದೆ ಎಂಬುದಕ್ಕಿಂತ, ಉತ್ತಮ ಸಾಧನೆ ಮಾಡುತ್ತಿದ್ದವರ ಸಾಧನೆಯೂ ಕುಸಿದಿದೆ ಎಂಬ ಮತ್ತೊಂದು ಗಂಭೀರ ವಾಸ್ತವ ಅಡಗಿದೆ.
ಇದು ಶಿಕ್ಷಣದ ಕುಸಿತ ಮಾತ್ರವಲ್ಲ; ಗಮನದ ಮೇಲಿನ ಹೋರಾಟ
ಪಿಈಎಸ್ಎ (PISA) 2025ರ ಫಲಿತಾಂಶಗಳನ್ನು ಒಟ್ಟಾಗಿ ನೋಡಿದರೆ ಇದು ಕೇವಲ ಪರೀಕ್ಷಾ ಅಂಕಗಳು ಕಡಿಮೆಯಾಗಿರುವ ಕಥೆಯಲ್ಲ. ವಿದ್ಯಾರ್ಥಿ, ಮಾಹಿತಿ ಮತ್ತು ಗಮನ—ಈ ಮೂರರ ನಡುವಿನ ಸಂಬಂಧವೇ ವೇಗವಾಗಿ ಬದಲಾಗುತ್ತಿದೆ ಎಂಬುದನ್ನು ವರದಿ ಸೂಚಿಸುತ್ತದೆ.
ಒಂದೆಡೆ ವಿದ್ಯಾರ್ಥಿಗಳ ಕೈಯಲ್ಲಿ ಹಿಂದೆಂದಿಗಿಂತಲೂ ಅಪಾರ ಪ್ರಮಾಣದ ಮಾಹಿತಿ ಇದೆ. ಮತ್ತೊಂದೆಡೆ, ಆ ಮಾಹಿತಿಯ ನಡುವೆ ದೀರ್ಘಕಾಲ ಗಮನ ಕೇಂದ್ರೀಕರಿಸುವುದು, ಪುಸ್ತಕ ಅಥವಾ ದೀರ್ಘ ಪಠ್ಯವನ್ನು ಆಳವಾಗಿ ಓದುವುದು, ಮಾಹಿತಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸುವುದು ಮತ್ತು ಸ್ವತಂತ್ರವಾಗಿ ಯೋಚಿಸುವುದು ಕಷ್ಟವಾಗುತ್ತಿದೆ.
ಒಇಸಿಡಿ (OECD) ಪ್ರಧಾನ ಕಾರ್ಯದರ್ಶಿ ಮಥಿಯಾಸ್ ಕಾರ್ಮನ್ ಕೂಡ ಇದೇ ಹಿನ್ನೆಲೆಯಲ್ಲಿ ಪಿಐಎಸ್ಎ(PISA) 2025ರ ಫಲಿತಾಂಶಗಳು ವಿದ್ಯಾರ್ಥಿಗಳ ಸಾಧನೆಯಲ್ಲಿನ ಕುಸಿತವನ್ನು ಕಡಿಮೆ ಮಾಡುವುದು ತುರ್ತು ಅಗತ್ಯವೆಂದು ಹೇಳಿದ್ದಾರೆ. ಅತ್ಯಂತ ಯಶಸ್ವಿ ಶಿಕ್ಷಣ ವ್ಯವಸ್ಥೆಗಳು ಕಡಿಮೆ ವಿಷಯಗಳ ಮೇಲೆ ಹೆಚ್ಚು ಆಳವಾಗಿ ಗಮನಹರಿಸುತ್ತವೆ, ಶಿಕ್ಷಕರ ಮೇಲೆ ಹೂಡಿಕೆ ಮಾಡುತ್ತವೆ, ಪೋಷಕರನ್ನು ಒಳಗೊಳ್ಳುತ್ತವೆ ಹಾಗೂ ಅತ್ಯಂತ ಅಗತ್ಯವಿರುವ ವಿದ್ಯಾರ್ಥಿಗಳು ಮತ್ತು ಶಾಲೆಗಳಿಗೆ ನಿರ್ದಿಷ್ಟ ಬೆಂಬಲವನ್ನು ಒದಗಿಸುತ್ತವೆ ಎಂದು ಹೇಳಿದ್ದಾರೆ.
ತಂತ್ರಜ್ಞಾನ ಮತ್ತು ಎಐ(AI) ಭವಿಷ್ಯಕ್ಕೆ ಯುವಸಮೂಹವನ್ನು ಸಿದ್ಧಗೊಳಿಸುವಲ್ಲಿ ನೆರವಾಗಬಲ್ಲವು. ಆದರೆ ಅವುಗಳನ್ನು ಗಮನ, ಪರಿಶ್ರಮ ಮತ್ತು ನೈಜ ಅರ್ಥೈಸುವಿಕೆಗೆ ಪರ್ಯಾಯವಾಗಿ ಬಳಸದೆ, ಉದ್ದೇಶ ಇಟ್ಟು ಬಳಸಿದಾಗ ಮಾತ್ರ ಅವು ಕಲಿಕೆಯನ್ನು ಬಲಪಡಿಸಬಲ್ಲವು ಎಂದು ಅವರು ಎಚ್ಚರಿಸಿದ್ದಾರೆ.
ಭವಿಷ್ಯದ ಶಿಕ್ಷಣದ ದೊಡ್ಡ ಪ್ರಶ್ನೆ
ಪಿಐಎಸ್ಎ (PISA) 2025 ಕೊನೆಗೆ ಶಿಕ್ಷಣ ವ್ಯವಸ್ಥೆಗಳ ಮುಂದಿಡುವ ಪ್ರಶ್ನೆ ಸರಳವಾದದ್ದಲ್ಲ. ತಂತ್ರಜ್ಞಾನವನ್ನು ತರಗತಿಗೆ ತರಬೇಕೇ ಬೇಡವೇ ಎಂಬ ಪ್ರಶ್ನೆ ಈಗಾಗಲೇ ಮುಗಿದುಹೋದ ವಿಷಯವಾಗಿದೆ.
ನಿಜವಾದ ಪ್ರಶ್ನೆ ಏನೆಂದರೆ—ಅಪಾರ ಪ್ರಮಾಣದ ಮಾಹಿತಿಯನ್ನು ಹೊಂದಿರುವ ಇಂದಿನ ಮಕ್ಕಳಿಗೆ ಅದನ್ನು ವಿವೇಚನೆಯಿಂದ ಬಳಸುವುದು ಹೇಗೆ ಎಂಬುದನ್ನು ಶಾಲೆಗಳು ಕಲಿಸಬಲ್ಲವೇ ಎಂಬುದಾಗಿದೆ.
ಮಾಹಿತಿಯ ವೇಗ ಹೆಚ್ಚುತ್ತಿರುವ ಜಗತ್ತಿನಲ್ಲಿ ಗಮನ ಕೇಂದ್ರೀಕರಿಸುವ ಸಾಮರ್ಥ್ಯ, ಆಳವಾಗಿ ಓದುವ ಅಭ್ಯಾಸ, ಕಂಡದ್ದನ್ನು ಪ್ರಶ್ನಿಸುವ ಮನೋಭಾವ ಮತ್ತು ಸ್ವತಂತ್ರವಾಗಿ ಯೋಚಿಸುವ ಶಕ್ತಿ ಉಳಿಸಿಕೊಳ್ಳುವುದೇ ಮುಂದಿನ ಶಿಕ್ಷಣದ ದೊಡ್ಡ ಸವಾಲಾಗಲಿದೆ.
ಪಿಐಎಸ್ಎ (PISA) 2025ರ ಸಂದೇಶವೆಂದರೆ ಭವಿಷ್ಯದ ಶಿಕ್ಷಣ ಎಂದರೆ ಹೆಚ್ಚು ತಂತ್ರಜ್ಞಾನ ಹೊಂದಿರುವ ತರಗತಿ ಮಾತ್ರವಲ್ಲ; ತಂತ್ರಜ್ಞಾನವನ್ನು ಬಳಸಿಕೊಂಡರೂ ಆಲೋಚಿಸುವ, ಪ್ರಶ್ನಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳದ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ