ತ್ರಿಶೂರ್ : ಕೇರಳದ ತ್ರಿಶೂರ್ ಜಿಲ್ಲೆಯ ಅನ್ನಮನದ ಮಹಾದೇವ ದೇವಸ್ಥಾನದ ಉತ್ಸವದ ವೇಳೆ ಆನೆಯೊಂದು ಹಠಾತ್ತನೆ ಆಕ್ರಮಣಕಾರಿಯಾಗಿ ವರ್ತಿಸಿ, ವ್ಯಕ್ತಿಯೊಬ್ಬರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಘಟನೆ ಗುರುವಾರ ನಡೆದಿದೆ.
ದೇವಸ್ಥಾನದ ಆವರಣದಲ್ಲಿ ಮೆರವಣಿಗೆಗಾಗಿ ಆನೆಯನ್ನು ಸಿಂಗರಿಸಿ ನಿಲ್ಲಿಸಲಾಗಿತ್ತು. ದೇವರ ವಿಗ್ರಹವನ್ನು ಆನೆಯ ಮೇಲೆ ಪ್ರತಿಷ್ಠಾಪಿಸಲು ಸಿದ್ಧತೆ ನಡೆಸುತ್ತಿದ್ದಾಗ, ಮಾವುತನು ಅರ್ಚಕರೊಬ್ಬರಿಗೆ ಆನೆಯ ಮೇಲೆ ಹತ್ತಲು ಸಹಾಯ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ದಿಢೀರ್ ಕೆರಳಿದ ಆನೆಯು, ಪಕ್ಕದಲ್ಲೇ ದೇವರ ವಿಗ್ರಹ ಹಿಡಿದು ನಿಂತಿದ್ದ ವ್ಯಕ್ತಿಯೊಬ್ಬನನ್ನು ತನ್ನ ಸೊಂಡಿಲಿನಿಂದ ಎತ್ತಿ ವೇಗವಾಗಿ ಕೆಳಕ್ಕೆ ಅಪ್ಪಳಿಸಿದೆ.
ದಾಳಿಗೊಳಗಾದ ಅರ್ಚಕರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ ತಕ್ಷಣ ಮಾವುತ ಆನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಆನೆಗಳನ್ನು ಬಳಸುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಈ ಘಟನೆಯು ಮತ್ತೊಮ್ಮೆ ಆತಂಕ ಮೂಡಿಸಿದೆ.
ಅರುಣಾಚಲ ಪ್ರದೇಶ: ಕಾಡಾನೆ ದಾಳಿಗೆ ಎಎಸ್ಐ ಸಾವು
ಮತ್ತೊಂದು ಘಟನೆಯಲ್ಲಿ, ಫೆಬ್ರವರಿ 22 ರಂದು ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ಕಾಡಾನೆಯೊಂದು ಎಎಸ್ಐ (ASI) ಮಾರ್ಟಿನ್ ಲೆಗೊ (40) ಎಂಬುವವರನ್ನು ತುಳಿದು ಸಾಯಿಸಿದೆ.
ಸನ್ಪುರ ಪೊಲೀಸ್ ಠಾಣೆಯ ಎಎಸ್ಐ ಮಾರ್ಟಿನ್ ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಲೋಹಿತ್ ನದಿ ತೀರಕ್ಕೆ ವಿಹಾರಕ್ಕೆ ತೆರಳಿದ್ದರು. ಬೆಳಿಗ್ಗೆ 10:30 ರ ಸುಮಾರಿಗೆ ಆನೆ ಎದುರಾಗಿದ್ದು, ಸ್ನೇಹಿತರು ತಪ್ಪಿಸಿಕೊಂಡರೆ ಮಾರ್ಟಿನ್ ಅವರು ಆನೆ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಕಾಡಾನೆ ದಾಳಿಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಪ್ರದೇಶ ಅಥವಾ ನದಿ ತೀರಕ್ಕೆ ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆನೆಯು ಗಾಯಗೊಂಡಿರುವ ಸಾಧ್ಯತೆಯಿದ್ದು, ಅದೇ ಕಾರಣಕ್ಕೆ ಅದು ಆಕ್ರಮಣಕಾರಿಯಾಗಿ ವರ್ತಿಸುತ್ತಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ