ಕುಮಟಾ : ಶಿಕ್ಷಣ ತಜ್ಞ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೆನರಾ ಕಾಲೇಜು ಸೊಸೈಟಿಯ ಉಪಾಧ್ಯಕ್ಷ ದಿನಕರ ಕಾಮತ (83)ಶನಿವಾರ ರಾತ್ರಿ ಹೃಧಯಾಘಾತದಿಂದ ನಿಧನರಾಗಿದ್ದಾರೆ.
ಹೆಗಡೆಯ ಶಾಂತಿಕಾಂಭ ಪ್ರೌಢ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ದಿನಕರ ಕಾಮತ್ ಅವರು ನಂತರ ಕೆನರಾ ಕಾಲೇಜು ಸೊಸೈಟಿ ಕಾರ್ಯಧ್ಯಕ್ಷರಾಗಿ ಶಿಕ್ಷಣದ ಉನ್ನತಿಗಾಗಿ ಶ್ರಮಿಸಿದ್ದರು. ಪ್ರಸ್ತುತ ಸೊಸೈಟಿಯ ಉಪಾಧ್ಯಕ್ಷರಾಗಿ ತಮ್ಮ ಪ್ರೀತಿಯ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುತ್ತಿದ್ದರು.
ಶಿಕ್ಷಣ ಪ್ರೇಮಿಗಳಾಗಿದ್ದ ದಿನಕರ ಕಾಮತ ಬದಲಾದ ಶಿಕ್ಷಣ ವ್ಯವಸ್ಥೆ ಯಲ್ಲಿ ಖಾಸಗಿ ವಿದ್ಯಾ ಸಂಸ್ಥೆ ಬೆಳೆಸುವ ನಿಟ್ಟಿನಲ್ಲಿ ಅಪಾರ ಶ್ರಮಪಟ್ಟಿದ್ದಾರೆ. ಕೆನರಾ ಕಾಲೇಜು ಶಿಕ್ಷಣ ಸಂಸ್ಥೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಸಹಕಾರ ಪಡೆದು ಸೋಲಾರ್ ಪ್ರಾಜೆಕ್ಟ್, ನೂತನ ಶೌಚಾಲಯ, ವಿಜ್ಞಾನ ಪ್ರಯೋಗಾಲಯ ಇತ್ಯಾದಿಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ದಿನಕರ್ ಕಾಮತ್ ಅವರು ಅನೇಕ ಸಂಘ-ಸಂಸ್ಥೆಗಳಿಂದ, ಹಾಗೂ ಶ್ರೀ ಗೋಕರ್ಣ ಪರ್ಥಗಾಳಿ ಮಠದಿಂದ ಸನ್ಮಾನಕ್ಕೆ ಭಾಜನರಾಗಿದ್ದರು.
ಶನಿವಾರ ಸಂಜೆ ಅವರು ಮಹಾಲಸಾ ದೇವಾಲಯದಲ್ಲಿ ಗುಪ್ತಗಾಮಿನಿ ಎಂಬ ಪುಸ್ತಕ ಬಿಡುಗಡೆ ಮಾಡಿ ಶಿಕ್ಷಣ ಕುರಿತು ಮಾತನಾಡಿದ್ದರು. ಮೃತರು ಹೆಂಡತಿ, ಮಗ, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ: ಇವರ ಅಗಲಿಕೆಗೆ ಕೆನರಾ ಕಾಲೇಜು ಸೊಸೈಟಿ ಕಾರ್ಯಾಧ್ಯಕ್ಷ ಹನುಮಂತ ಶಾನಭಾಗ, ಶಾಸಕ ದಿನಕರ ಶೆಟ್ಟಿ, ರಾಜ್ಯ ಗೇರು ನಿಗಮದ ಮಾಜಿ ಅಧ್ಯಕ್ಷ ವಿನೋದ ಪ್ರಭು, ಬಿಜೆಪಿಯ ಕುಮಟಾ ಘಟಕದ ಅಧ್ಯಕ್ಷ ಗಣಪತಿ ಭಟ್, ಡಾಕ್ಟರ್ ಎ. ವಿ.ಬಾಳಿಗಾ ವಾಣಿಜ್ಯ ಪದವಿ ಪ್ರಾಚಾರ್ಯ ಡಾ. ಎನ್. ಡಿ. ನಾಯಕ, ಕಲಾ-ವಿಜ್ಞಾನ ಕಾಲೇಜ್ ಪ್ರಾಚಾರ್ಯ ಡಾ. ವಿನಾಯಕ ಭಟ್, ಶ್ರೀ ವಿದ್ಯಾಧಿ ರಾಜ ಪಾಲಿಟೆಕ್ನಿಕ್ ಪ್ರಾಚಾರ್ಯ ಜಿ. ಡಿ. ಭಟ್ಟ, ಪದವಿ ಪೂರ್ವ ವಾಣಿಜ್ಯ ಪ್ರಾಚಾರ್ಯ ನಿರ್ಮಲಾ ಪ್ರಭು, ವೀಣಾ ಕಾಮತ್ ಮತ್ತಿತರರು ಮೃತರ ಆತ್ಮಕ್ಕೆ ಶಾಂತಿ ಕೋರಿ ಕಂಬನಿ ಮಿಡಿದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ