ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಸಾವು

ದುರಂತ ಘಟನೆಯೊಂದರಲ್ಲಿ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರಿದ್ದ ಹೆಲಿಕಾಪ್ಟರ್ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ ಎಂದು ಇರಾನ್ ಅಧಿಕಾರಿಯನ್ನು ಉಲ್ಲೇಖಿಸಿ ಸೋಮವಾರ ರಾಯಿಟರ್ಸ್ ವರದಿ ಮಾಡಿದೆ.
ಇರಾನ್ ಸರ್ಕಾರಿ ಸುದ್ದಿ ವಾಹಿನಿ IRINN ಮತ್ತು ಸುದ್ದಿ ಸಂಸ್ಥೆ ಮೆಹರ್ ನ್ಯೂಸ್ ಪ್ರಕಾರ, ಅಪಘಾತದಲ್ಲಿ ಯಾರೂ ಬದುಕುಳಿಯಲಿಲ್ಲ. ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಜೊತೆ ಎರಡೂ ದೇಶಗಳ ಗಡಿಯಲ್ಲಿ ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿದ ನಂತರ ಇರಾನ್‌ ಅಧ್ಯಕ್ಷ ರೈಸಿ ಅವರು ಇರಾನಿನ ನಗರವಾದ ತಬ್ರಿಜ್‌ಗೆ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಮತ್ತು ಇತರ ಅಧಿಕಾರಿಗಳನ್ನು ಹೊತ್ತ ಹೆಲಿಕಾಪ್ಟರ್ ಹಾರಾಟದ ಸುಮಾರು 30 ನಿಮಿಷಗಳ ನಂತರ ಸಂಪರ್ಕವನ್ನು ಕಳೆದುಕೊಂಡಿತು. ಶೋಧ ಕಾರ್ಯಾಚರಣೆಯ ನಂತರ ಅಧ್ಯಕ್ಷರ ಹೆಲಿಕಾಪ್ಟರ್ ಪತ್ತೆಯಾಗಿದೆ ಮತ್ತು ರೈಸಿ ಸಾವಿಗೀಡಾಗಿದ್ದಾರೆ ಎಂಬ ವರದಿಗಳು ಹೊರಬಂದವು. “ಅಧ್ಯಕ್ಷ ರೈಸಿ ಅವರ ಹೆಲಿಕಾಪ್ಟರ್ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಅಧಿಕಾರಿಯು ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ತಿಳಿಸಿದರು.

ಪ್ರಮುಖ ಸುದ್ದಿ :-   ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಬೆಂಕಿ ಉಂಡೆಯಾದ ಟರ್ಮಿನಲ್, ವಿನಾಶದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹುಡುಕಾಟ…
ಶಂಕಿತ ಹೆಲಿಕಾಪ್ಟರ್ ಅವಶೇಷಗಳನ್ನು ಟರ್ಕಿಯ ಡ್ರೋನ್ ಸೋಮವಾರ ಮುಂಜಾನೆ ಗುರುತಿಸಿದೆ. ಇದು ಸಂಭವನೀಯ ಕ್ರ್ಯಾಶ್ ಸೈಟ್‌ನ ನಿರ್ದೇಶಾಂಕಗಳನ್ನು ಇರಾನ್ ಅಧಿಕಾರಿಗಳೊಂದಿಗೆ ಹಂಚಿಕೊಂಡಿದೆ ಎಂದು ಅನಾಡೋಲು ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಇರಾನ್ ಅಧ್ಯಕ್ಷರು ಅಮೆರಿಕ ನಿರ್ಮಿತ ಬೆಲ್ 212 ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಸರ್ಕಾರಿ ಸುದ್ದಿ ಸಂಸ್ಥೆ ಇರ್ನಾ (IRNA) ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಡಾ. ಸೆಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಅವರ ಕುಟುಂಬ ಮತ್ತು ಇರಾನ್ ಜನತೆಗೆ ನನ್ನ ಹೃತ್ಪೂರ್ವಕ ಸಂತಾಪ. ಈ ದುಃಖದ ಸಮಯದಲ್ಲಿ ಭಾರತವು ಇರಾನ್‌ನೊಂದಿಗೆ ನಿಂತಿದೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ ಅವರು ಅಂತಾರಾಷ್ಟ್ರೀಯ ಒಗ್ಗಟ್ಟು ಮತ್ತು ಸಹಾಯದ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಮುಖ ಸುದ್ದಿ :-   ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಬೆಂಕಿ ಉಂಡೆಯಾದ ಟರ್ಮಿನಲ್, ವಿನಾಶದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement