ಕೊಚ್ಚಿ: ‘‘ರಸ್ತೆಗಳು ಇರುವುದು ಯಾವುದಕ್ಕೆ? ರಸ್ತೆ ಇರುವುದು ವಾಹನ ಓಡಿಸಲಿಕ್ಕಲ್ಲವೇ?’’ — ವೇಗವಾಗಿ ಬಂದ ಮಿನಿ ಕೂಪರ್ ಕಾರನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಮೂವರ ಸಾವಿಗೆ ಕಾರಣನಾದ ಆರೋಪ ಎದುರಿಸುತ್ತಿರುವ 19 ವರ್ಷದ ಯುವಕನ ಈ ಹೇಳಿಕೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೇರಳದ ಕೊಚ್ಚಿಯ ನೆಡುಂಬಸ್ಸೇರಿ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ ಅಪಘಾತ ನಡೆದು ಮೂವರು ಸಾವಿಗೀಡಾದ ಬಳಿಕ ಯುವಕ ಈ ಮಾತು ಹೇಳಿದ್ದಾನೆ ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾನುವಾರ ನಸುಕಿನ ಜಾವ ಸುಮಾರು 1:45ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಪೊಲೀಸ್ ಎಫ್ಐಆರ್ (FIR) ಪ್ರಕಾರ, ಸುಹೈಲ್ ಸಜೀವ್ ಎಂಬಾತ ಅತಿವೇಗದಿಂದ ಚಲಾಯಿಸುತ್ತಿದ್ದ ಎನ್ನಲಾದ ಮಿನಿ ಕೂಪರ್ ಕಾರು, ಮೂವರು ಪ್ರಯಾಣಿಸುತ್ತಿದ್ದ ಸ್ಕೂಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಕಾರು ಸ್ಕೂಟರ್ ಅನ್ನು ಸುಮಾರು 100 ಮೀಟರ್ಗಳವರೆಗೆ ಎಳೆದುಕೊಂಡು ಹೋಗಿ ಬಳಿಕ ನಿಂತಿದೆ ಎಂದು ವರದಿಯಾಗಿದೆ.
ಅಪಘಾತದ ಬಳಿಕ ಆರೋಪಿ ಸುಹೈಲ್ ಯಾವುದೇ ಪಶ್ಚಾತ್ತಾಪವಿಲ್ಲದ ವರ್ತನೆ ತೋರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ರಸ್ತೆಗಳು ಇರುವುದು ಯಾವುದಕ್ಕೆ? ವಾಹನ ಓಡಿಸಲಿಕ್ಕಲ್ಲವೇ?’’ ಎಂದು ಆತ ಪ್ರಶ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಈ ಪ್ರಕರಣವನ್ನು ತನ್ನ ತಂದೆ ನೋಡಿಕೊಳ್ಳುತ್ತಾರೆ ಎಂದೂ ಪೊಲೀಸರಿಗೆ ಹೇಳಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮೂವರ ಸಾವಿಗೆ ಕಾರಣವಾದ ಗಂಭೀರ ಅಪಘಾತದ ಬಳಿಕ ಆರೋಪಿಯ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಪಘಾತದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಕಾರು ಚಲಾಯಿಸುವ ಮೊದಲು ಆರೋಪಿ ಹಲವು ಬಾರ್ಗಳಲ್ಲಿ ಮದ್ಯ ಸೇವಿಸಿದ್ದ ಎನ್ನಲಾದ ವಿಚಾರವನ್ನು ಪತ್ತೆಹಚ್ಚಿದ್ದಾರೆ. ಕೇರಳದಲ್ಲಿ ಕಾನೂನುಬದ್ಧವಾಗಿ ಮದ್ಯ ಸೇವಿಸಲು ಕನಿಷ್ಠ 23 ವರ್ಷ ವಯಸ್ಸಾಗಿರಬೇಕು. ಹೀಗಾಗಿ, 19 ವರ್ಷದ ಯುವಕನಿಗೆ ಮದ್ಯ ಪೂರೈಸುವುದು ಕಾನೂನುಬಾಹಿರವಾಗಿದೆ. ಅಪ್ರಾಪ್ತ ವಯಸ್ಸಿನ ಯುವಕನಿಗೆ ಮದ್ಯ ನೀಡಿದ ಆರೋಪವೂ ಇದೀಗ ಪ್ರಕರಣದಲ್ಲಿ ಮಹತ್ವ ಪಡೆದುಕೊಂಡಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ವಯನಾಡ್ ಜಿಲ್ಲೆಯ ಮಡಕ್ಕಿಮಲ ನಿವಾಸಿ ದೇವಿಕಾ (21), ಪಾಲಕ್ಕಾಡ್ನ ಗೋಪಿಕಾ (22) ಮತ್ತು ಕರ್ನಾಟಕದ ಮಂಗಳೂರಿನ ಇಜಾಜ್ (21) ಎಂದು ಗುರುತಿಸಲಾಗಿದೆ. ಈ ಮೂವರೂ ಕಾಕ್ಕನಾಡ್ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ನಸುಕಿನ ವೇಳೆ ಚಹಾ ಕುಡಿಯಲು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
ಅಪಘಾತದ ತೀವ್ರತೆಗೆ ದೇವಿಕಾ ಮತ್ತು ಗೋಪಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಜಾಜ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಮೂವರ ದುರಂತ ಸಾವಿನಿಂದ ಅವರ ಕುಟುಂಬಸ್ಥರು ಹಾಗೂ ಪರಿಚಿತರು ಆಘಾತಕ್ಕೊಳಗಾಗಿದ್ದಾರೆ.
ಇದೇ ವೇಳೆ, ವೈದ್ಯಕೀಯ ಪರೀಕ್ಷೆಗಾಗಿ ಆರೋಪಿಯನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಕೆಲ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ದೃಶ್ಯಗಳೂ ಹೊರಬಂದಿವೆ. ಅಪಘಾತದ ಬಳಿಕ ಆರೋಪಿಯ ವರ್ತನೆ ಹಾಗೂ ಮೂವರ ಸಾವಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಈ ದೃಶ್ಯಗಳು ಬೆಳಕಿಗೆ ಬಂದಿವೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳದ ಅಬಕಾರಿ ಸಚಿವ ಎಂ. ಲಿಜು, ಅಪಘಾತಕ್ಕೂ ಮೊದಲು 19 ವರ್ಷದ ಆರೋಪಿಗೆ ಮದ್ಯ ಪೂರೈಸಿದ ಬಾರ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆರೋಪಿಗೆ ಮದ್ಯ ನೀಡಿದ ಸಂಸ್ಥೆಗಳನ್ನು ಗುರುತಿಸಿ, ಅವುಗಳ ವಿರುದ್ಧ ತಕ್ಷಣ ಪ್ರಕರಣ ದಾಖಲಿಸುವಂತೆ ಅಬಕಾರಿ ಆಯುಕ್ತರು ಹಾಗೂ ಎರ್ನಾಕುಳಂ ಜಂಟಿ ಅಬಕಾರಿ ಆಯುಕ್ತರಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.
ಮೃತದೇಹಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಪಘಾತದ ಕಾರಣಗಳು, ಆರೋಪಿಯ ಮದ್ಯ ಸೇವನೆ ಹಾಗೂ ಅಪ್ರಾಪ್ತ ವಯಸ್ಸಿನ ಯುವಕನಿಗೆ ಮದ್ಯ ಪೂರೈಸಿದ ಬಾರ್ಗಳ ಕುರಿತು ಪೊಲೀಸರು ಮತ್ತು ಅಬಕಾರಿ ಇಲಾಖೆ ತನಿಖೆ ಮುಂದುವರಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ