ಉದ್ಯಮಿಯನ್ನು ಹೆಲ್ಮೆಟ್‌ನಿಂದ ಹೊಡೆದು ಬರ್ಬರವಾಗಿ ಕೊಂದ ಮೂವರು ಫುಡ್ ಡೆಲಿವರಿ ರೈಡರ್‌ಗಳು

ನವದೆಹಲಿ: ದೆಹಲಿಯ ಹೃದಯಭಾಗವಾದ ಕನ್ನಾಟ್ ಪ್ಲೇಸ್‌ನಲ್ಲಿ ಪಾರ್ಟಿಗೆ ತೆರಳಿದ್ದ 36 ವರ್ಷದ ಉದ್ಯಮಿಯೊಬ್ಬರನ್ನು ಮೂವರು ಫುಡ್ ಡೆಲಿವರಿ ರೈಡರ್‌ಗಳು ಬರ್ಬರವಾಗಿ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜನವರಿ 3ರ ರಾತ್ರಿ ಈ ಘಟನೆ ನಡೆದಿದೆ. ಮೃತ ಉದ್ಯಮಿಯನ್ನು ಶಿವಂ ಗುಪ್ತಾ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಮೂವರು ಡೆಲಿವರಿ ರೈಡರ್‌ಗಳು ತಮ್ಮ ಹೆಲ್ಮೆಟ್‌ಗಳಿಂದ ಶಿವಂ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಸುಮಾರು ಎರಡು ವಾರಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಶಿವಂ, ಜನವರಿ 19ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಪೊಲೀಸರು ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರನೇ ಆರೋಪಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ವಿಧಿವಿಜ್ಞಾನ ತನಿಖೆಗಾಗಿ ಶಿವಂ ಅವರ ರಕ್ತಸಿಕ್ತ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜನವರಿ 3 ರ ರಾತ್ರಿ, ಕನ್ನಾಟ್ ಪ್ಲೇಸ್‌ನಲ್ಲಿ ಪಾದಚಾರಿ ಮಾರ್ಗದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬ ಬಿದ್ದಿರುವ ಬಗ್ಗೆ ಪೊಲೀಸ್ ತಂಡಕ್ಕೆ ಕರೆ ಬಂದಿತು. ಗುಪ್ತಾ ಗಂಭೀರ ಗಾಯಗಳೊಂದಿಗೆ ಇರುವುದು ಕಂಡುಬಂದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 4 ರಂದು ಗುಪ್ತಾ ಅವರನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಮರುದಿನ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆ ನಂತರ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಅವರ ಕುಟುಂಬ ಭಾವಿಸಿತ್ತು, ಆದರೆ ಅವರು ಜನವರಿ 19 ರಂದು ನಿಧನರಾದರು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಕುಟುಂಬದ ಆಕ್ರೋಶ: ಮೃತ ಶಿವಂ ಅವರ ತಂದೆ ಅನಿಲ ಕಾಂತ ಗುಪ್ತಾ ಅವರು ತಮ್ಮ ಏಕೈಕ ಮಗನನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. “ನನ್ನ ಮಗನೇ ನಮಗೆ ಎಲ್ಲವೂ ಆಗಿದ್ದ. ಈಗ ನಮಗೆ ನ್ಯಾಯ ಬೇಕು. ಇಂತಹ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು,” ಎಂದು ಅವರು ಆಗ್ರಹಿಸಿದ್ದಾರೆ.
ಜನವರಿ 2ರ ಸಂಜೆ ಪಾರ್ಟಿಗೆಂದು ಮನೆಯಿಂದ ಹೊರಟಿದ್ದ ಶಿವಂ, ಆ ರಾತ್ರಿ ತಂದೆಯ ಕರೆಗೆ ಓಗೊಟ್ಟಿರಲಿಲ್ಲ. ಬಳಿಕ ಪೊಲೀಸರು ಕರೆ ಮಾಡಿ ಮಗ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಸಿದ್ದರು. ತಲೆಗೆ ತೀವ್ರವಾದ ಆಂತರಿಕ ಪೆಟ್ಟು ಬಿದ್ದಿದ್ದರಿಂದ ಶಿವಂ ಹೇಳಿಕೆ ನೀಡುವ ಸ್ಥಿತಿಯಲ್ಲಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement