ಖಮೇನಿ ಹತ್ಯೆಗೆ ಭಾರತದ ಸಂತಾಪ: ಇರಾನ್ ರಾಯಭಾರಿ ಕಚೇರಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಭೇಟಿ

ನವದೆಹಲಿ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ಸರ್ಕಾರ ಅಧಿಕೃತವಾಗಿ ಸಂತಾಪ ಸೂಚಿಸಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವಾಯುದಾಳಿಯ ಬೆನ್ನಲ್ಲೇ ಭಾನುವಾರ ಸಂಭವಿಸಿದ ಈ ಸಾವು, ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತಲ್ಲಣ ಮೂಡಿಸಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಂದು, ಗುರುವಾರ ದೆಹಲಿಯಲ್ಲಿರುವ ಇರಾನ್ ರಾಯಭಾರಿಯನ್ನು ಭೇಟಿ ಮಾಡಿ, ಖಮೇನಿ ನಿಧನಕ್ಕೆ ಸಂತಾಪ ಸೂಚಕ ಪುಸ್ತಕಕ್ಕೆ ಭಾರತ ಸರ್ಕಾರದ ಪರವಾಗಿ ಸಹಿ ಹಾಕಿದರು. ಮಿಶ್ರಿ ಅವರು ಇರಾನಿನ ರಾಯಭಾರಿಗೆ ಭಾರತದ ಸಹಾನುಭೂತಿಯ ಸಂದೇಶ ತಿಳಿಸಿದರು.
ಇದೇ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಘಚಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿರುವಂತೆಯೇ, ಗುರುವಾರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇದಲ್ಲದೆ, ಅವರು ಒಮಾನ್ ವಿದೇಶಾಂಗ ಸಚಿವ ಸಯ್ಯದ್ ಬದ್ರ್ ಬಿನ್ ಹಮದ್ ಬಿನ್ ಹಮೂದ್ ಅಲ್ಬುಸೈದಿ ಅವರೊಂದಿಗೆ ಮಾತನಾಡಿ, ಕೊಲ್ಲಿಯಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಿದರು.
“ಇಂದು ಮಧ್ಯಾಹ್ನ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದೆ” ಎಂದು ಜೈಶಂಕರ್ ಎಕ್ಸ್  ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಒಮಾನ್‌ನ ವಿದೇಶಾಂಗ ಸಚಿವ ಸಯ್ಯದ್ ಬದ್ರ್ ಬಿನ್ ಹಮದ್ ಬಿನ್ ಹಮೂದ್ ಅಲ್ಬುಸೈದಿ ಅವರೊಂದಿಗೆ ಮಾತನಾಡಿದ್ದೇನೆ” ಎಂದು ಅವರು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಜೈಶಂಕರ ಅವರು ಇರಾನ್ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು ಸುಮಾರು ಒಂದು ವಾರದಲ್ಲಿ ಇದು ಎರಡನೇ ಬಾರಿ. ಫೆಬ್ರವರಿ 28 ರಂದು ನಡೆದ ತಮ್ಮ ಹಿಂದಿನ ಸಂಭಾಷಣೆಯಲ್ಲಿ, ಭಾರತದ ವಿದೇಶಾಂಗ ಸಚಿವರು ಇರಾನ್ ಮತ್ತು ಮಧ್ಯಪ್ರಾಚ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಆಳವಾದ ಕಳವಳವನ್ನು ಹಂಚಿಕೊಂಡಿದ್ದರು. ಅದೇ ದಿನ, ಅವರು ತಮ್ಮ ಇಸ್ರೇಲಿ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರೊಂದಿಗೂ ಮಾತನಾಡಿ,  ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಂವಾದ ಮತ್ತು ರಾಜತಾಂತ್ರಿಕತೆ ಮುಂದಾಗುವ ಭಾರತದ ಕರೆಯನ್ನು ಪುನರುಚ್ಚರಿಸಿದರು
ಮಧ್ಯಪ್ರಾಚ್ಯ ಸಂಘರ್ಷಕ್ಕೆ ಮೋದಿ ಕಳವಳ
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಯಾವುದೇ ಸಂಘರ್ಷಗಳಿಗೆ ಭಾರತವು ಯಾವಾಗಲೂ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡುತ್ತದೆ,” ಎಂದು ಅವರು ಹೇಳಿದ್ದಾರೆ. ರಷ್ಯಾ ಮತ್ತು ಚೀನಾದ ಹೊರತಾಗಿ ಖಮೇನಿ ಸಾವಿಗೆ ಸಂತಾಪ ಸೂಚಿಸಿದ ನಂತರ ಸಂತಾಪ ಸೂಚಿಸಿದ ಭಾರತ ಮತ್ತೊಂದು ಪ್ರಮುಖ ರಾಷ್ಟ್ರವಾಗಿದೆ.
ಹಾರ್ಮುಜ್ ಜಲಸಂಧಿ ಬಂದ್: ಇರಾನ್ ಎಚ್ಚರಿಕೆ
ಮತ್ತೊಂದೆಡೆ, ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ಒಕ್ಕೂಟದ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. “ಈ ದೇಶಗಳ ಅಥವಾ ಇವರ ಬೆಂಬಲಿಗರ ಹಡಗುಗಳು ಈ ಜಲಮಾರ್ಗದಲ್ಲಿ ಕಂಡುಬಂದಲ್ಲಿ ಅವುಗಳ ಮೇಲೆ ದಾಳಿ ಮಾಡಲಾಗುವುದು,” ಎಂದು ಇರಾನ್ ಖಡಕ್ ಎಚ್ಚರಿಕೆ ನೀಡಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement