ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು, ಬುಧವಾರ (ಡಿಸೆಂಬರ್ 24) ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿಯಾಗಿರುವ LVM3-M6 (ಬಾಹುಬಲಿ) ಮೂಲಕ ಅಮೆರಿಕದ ಅತಿದೊಡ್ಡ ಸಂವಹನ ಉಪಗ್ರಹ ‘ಬ್ಲೂಬರ್ಡ್ ಬ್ಲಾಕ್-2’ (BlueBird Block-2) ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ.
ಭಾರತೀಯ ನೆಲದಿಂದ ಭಾರತೀಯ ರಾಕೆಟ್ ಒಂದು ಹೊತ್ತೊಯ್ದ ಅತ್ಯಂತ ಭಾರದ ಉಪಗ್ರಹ ಇದಾಗಿದೆ. ಬ್ಲೂಬರ್ಡ್ ಬ್ಲಾಕ್-2′ (BlueBird Block-2) ಉಪಗ್ರಹ 6,100 ಕೆ.ಜಿ.ತೂಕದ್ದಾಗಿದೆ.
ಯಾವುದೇ ವಿಶೇಷ ಉಪಕರಣಗಳಿಲ್ಲದೆ ಸಾಮಾನ್ಯ ಸ್ಮಾರ್ಟ್ಫೋನ್ಗಳಿಗೆ ನೇರವಾಗಿ ಸ್ಪೇಸ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಒದಗಿಸುವುದು ಈ ಉಪಗ್ರಹದ ಗುರಿ. ಬ್ಲೂಬರ್ಡ್ 6 ಎಂಬ ಉಪಗ್ರಹವು ಮುಂದಿನ ಪೀಳಿಗೆಯ ಬ್ಲೂಬರ್ಡ್ ಬ್ಲಾಕ್ -2 ಸಂವಹನ ಉಪಗ್ರಹಗಳ ಭಾಗವಾಗಿದ್ದು, ಇದನ್ನು ಪ್ರಮಾಣಿತ ಮೊಬೈಲ್ ಸ್ಮಾರ್ಟ್ಫೋನ್ಗಳಿಗೆ ನೇರವಾಗಿ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಬಾಹ್ಯಾಕಾಶದಲ್ಲಿ ಸಂಭವನೀಯ ಡಿಕ್ಕಿಯನ್ನು ತಪ್ಪಿಸಲು ಉಡಾವಣೆಯನ್ನು 90 ಸೆಕೆಂಡುಗಳ ಕಾಲ ಮುಂದೂಡಲಾಗಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 8:55ಕ್ಕೆ 43.5 ಮೀಟರ್ ಎತ್ತರದ ಬೃಹತ್ ರಾಕೆಟ್ ನಭಕ್ಕೆ ಚಿಮ್ಮಿತು. 24 ಗಂಟೆಗಳ ಕೌಂಟ್ಡೌನ್ ಮುಗಿದ ನಂತರ, ಎರಡು S200 ಘನ ಬೂಸ್ಟರ್ಗಳ ನೆರವಿನೊಂದಿಗೆ ರಾಕೆಟ್ ಗಗನಕ್ಕೆ ಜಿಗಿಯಿತು. ಸುಮಾರು 15 ನಿಮಿಷಗಳ ಹಾರಾಟದ ನಂತರ, ಉಪಗ್ರಹವು ರಾಕೆಟ್ನಿಂದ ಬೇರ್ಪಟ್ಟು ಸುಮಾರು 520 ಕಿ.ಮೀ ಎತ್ತರದ ನಿಗದಿತ ಕಕ್ಷೆಯನ್ನು ತಲುಪಿತು.
ಕೊನೆಯ ಕ್ಷಣದ ರೋಚಕತೆ:
ವಾಸ್ತವವಾಗಿ ಈ ಉಡಾವಣೆಯು ಬೆಳಿಗ್ಗೆ 8:54ಕ್ಕೆ ನಿಗದಿಯಾಗಿತ್ತು. ಆದರೆ ಬಾಹ್ಯಾಕಾಶದಲ್ಲಿರುವ ಇತರ ಉಪಗ್ರಹಗಳ ಅವಶೇಷಗಳು (Space Debris) ರಾಕೆಟ್ನ ಹಾದಿಗೆ ಅಡ್ಡಿಯಾಗುವ ಸಾಧ್ಯತೆ ಇದ್ದಿದ್ದರಿಂದ, ಇಸ್ರೋ ವಿಜ್ಞಾನಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಉಡಾವಣೆಯನ್ನು 90 ಸೆಕೆಂಡುಗಳ ಕಾಲ ವಿಳಂಬ ಮಾಡಿದರು. ಬಾಹ್ಯಾಕಾಶದಲ್ಲಿ ದಟ್ಟಣೆ ಹೆಚ್ಚುತ್ತಿರುವುದರಿಂದ ಇಂತಹ ನಿರ್ಧಾರಗಳು ಸಾಮಾನ್ಯ ಎನ್ನಲಾಗಿದೆ.
ಗಣ್ಯರ ಪ್ರತಿಕ್ರಿಯೆ:
ಪ್ರಧಾನಿ ನರೇಂದ್ರ ಮೋದಿ: “ಇದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ. ಅತಿ ಭಾರದ ಉಪಗ್ರಹವನ್ನು ಹೊತ್ತೊಯ್ಯುವ ನಮ್ಮ ಸಾಮರ್ಥ್ಯ ಮತ್ತು ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರಕ್ಕೆ ಇದು ಸಾಕ್ಷಿ” ಎಂದು ಶ್ಲಾಘಿಸಿದ್ದಾರೆ.
ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು, “ಇದು ಭಾರತೀಯ ನೆಲದಿಂದ ಉಡಾವಣೆಯಾದ ಅತ್ಯಂತ ಭಾರದ ಉಪಗ್ರಹ. LVM-3 ರಾಕೆಟ್ ಸತತವಾಗಿ ತನ್ನ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸುತ್ತಿದೆ” ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ