ಮಣ್ಣು ಕುಸಿತದಿಂದ ಪಾರಾಗಲು ಮನೆಯಿಂದ ಸ್ಥಳಾಂತರಗೊಂಡಿದ್ದ ವ್ಯಕ್ತಿ ಅಡುಗೆ ಮಾಡಲೆಂದು ಮನೆಗೆ ಬಂದಾಗ ಪ್ರಾಣವೇ ಹೋಯ್ತು…!

ಇಡುಕ್ಕಿ (ಕೇರಳ): ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಸಮೀಪ ಭಾರಿ ಭೂಕುಸಿತ ಸಂಭವಿಸಿ ಕನಿಷ್ಠ ಎಂಟು ಮನೆಗಳು ನೆಲಸಮಗೊಂಡಿದ್ದು, 48 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಅಡಿಮಾಲಿ ಬಳಿಯ ಮನ್ನಂಕಂಡಂನಲ್ಲಿ ನಡೆದಿದೆ ಎಂದು ಭಾನುವಾರ ವರದಿಯಾಗಿದೆ.
ಪೊಲೀಸರ ಪ್ರಕಾರ, ಈ ದುರಂತವು ಶನಿವಾರ ರಾತ್ರಿ ಸಂಭವಿಸಿದೆ. ಮೃತರನ್ನು ಲಕ್ಷಂವೀಡು ಉನ್ನತಿಯ ನಿವಾಸಿ ಬಿಜು ಎಂದು ಗುರುತಿಸಲಾಗಿದೆ.
ಗ್ರಾಪಂ ಎಚ್ಚರಿಕೆ ನಿರ್ಲಕ್ಷಿಸಿ ಮನೆಗೆ ಮರಳಿದ್ದ ದಂಪತಿ
ಮನ್ನಂಕಂಡಂನಲ್ಲಿ ಸುಮಾರು 22 ಮನೆಗಳ ವಸತಿ ಕಾಲೋನಿ ಇತ್ತು. ಭೂಕುಸಿತದ ಅಪಾಯದ ಹಿನ್ನೆಲೆಯಲ್ಲಿ ಶನಿವಾರವೇ ಸ್ಥಳೀಯ ನಿವಾಸಿಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿತ್ತು.
ಈ ಬಗ್ಗೆ ಮಾತನಾಡಿದ ಅಡಿಮಾಲಿ ಪಂಚಾಯತ ಸದಸ್ಯ ಕೃಷ್ಣಮೂರ್ತಿ, “ರಾಷ್ಟ್ರೀಯ ಹೆದ್ದಾರಿ-85 ರ ಅಗಲೀಕರಣದ ಭಾಗವಾಗಿ ಬೆಟ್ಟದ ಪ್ರದೇಶದಿಂದ ಮಣ್ಣು ತೆಗೆಯಲಾಗುತ್ತಿತ್ತು. ವಸತಿ ಕಾಲೋನಿಯು ಹೆದ್ದಾರಿಯ ಕೆಳಗಿರುವ ಬೆಟ್ಟದ ಇಳಿಜಾರಿನಲ್ಲಿತ್ತು. ಭೂಕುಸಿತದ ಸಾಧ್ಯತೆಯಿದ್ದ ಕಾರಣ, ಪಂಚಾಯತ ಅಧಿಕಾರಿಗಳು ಶನಿವಾರ ಸಂಜೆ 22 ಕುಟುಂಬಗಳನ್ನು ಅಡಿಮಾಲಿಯ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲು ಸೂಚನೆ ನೀಡಿದ್ದರು,” ಎಂದು ತಿಳಿಸಿದ್ದಾರೆ.
ಆದರೆ, ಬಿಜು ಮತ್ತು ಅವರ ಪತ್ನಿ ಸಂಧ್ಯಾ ಅವರು ರಾತ್ರಿ ಊಟ ತಯಾರಿಸಲು ಮತ್ತೆ ಮನೆಗೆ ಮರಳಿದ್ದರು. ಕೃಷ್ಣಮೂರ್ತಿಯವರ ಪ್ರಕಾರ, “ಅವರು ಮನೆಯೊಳಗಿದ್ದಾಗ, ರಾತ್ರಿ ಸುಮಾರು 10:30 ರ ಸುಮಾರಿಗೆ ಬೆಟ್ಟದಿಂದ ಮಣ್ಣು ಕುಸಿದು ಮನೆಯ ಮೇಲೆ ಬಿದ್ದಿದೆ. ಈ ವೇಳೆ ಬಿಜು ಮತ್ತು ಸಂಧ್ಯಾ ಅವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡರು. ಈ ಭೂಕುಸಿತದಲ್ಲಿ ಸುಮಾರು ಎಂಟು ಮನೆಗಳು ಸಂಪೂರ್ಣ ನೆಲಸಮಗೊಂಡಿವೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ಐದು ಗಂಟೆಗಳ ಕಾರ್ಯಾಚರಣೆ
ಸ್ಥಳೀಯರು ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ದಂಪತಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದರು. ಸುಮಾರು ಐದು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಅವರನ್ನು ಹೊರತೆಗೆಯಲಾಯಿತು. ಆದರೆ, ಬಿಜು ಅವರು ತೀವ್ರ ಗಾಯಗಳಿಂದಾಗಿ ಮೃತಪಟ್ಟರು. ಸಂಧ್ಯಾ ಅವರನ್ನು ಅಡಿಮಾಲಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಲುವಾದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ,” ಎಂದು ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.
ಈ ದುರಂತಕ್ಕೆ ಅವೈಜ್ಞಾನಿಕ ರಸ್ತೆ ಅಗಲೀಕರಣ ಕಾಮಗಾರಿಯೇ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ನಿವಾಸಿ ಸಲ್ಫಿ ಮಾತನಾಡಿ, “ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಹೆದ್ದಾರಿ ಕಾಮಗಾರಿಯ ಭಾಗವಾಗಿ ಮಣ್ಣನ್ನು ತೆಗೆಯಲಾಗುತ್ತಿದೆ. ಭೂಕುಸಿತದ ಅಪಾಯವನ್ನು ಪರಿಗಣಿಸದೆ ಬೆಟ್ಟದ ಇಳಿಜಾರುಗಳನ್ನು ತೆರವುಗೊಳಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆ ಸಂಪೂರ್ಣ ನಾಶವಾಗಿರುವ ಅನಾಸ್ ಎಂಬ ಮತ್ತೊಬ್ಬ ನಿವಾಸಿ ಮಾತನಾಡಿ, “ಬೆಟ್ಟದ ಇಳಿಜಾರಿನಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದನ್ನು ನಾವು ಗಮನಿಸಿ ಪಂಚಾಯತ ಅಧಿಕಾರಿಗಳಿಗೆ ತಿಳಿಸಿದ್ದೆವು. ಶನಿವಾರ ಬೆಳಿಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಭೂಕುಸಿತದ ಅಪಾಯದಿಂದಾಗಿ ಸ್ಥಳಾಂತರಗೊಳ್ಳಲು ನೋಟಿಸ್ ನೀಡಿದರು. ನಾವು ಅಡಿಮಾಲಿ ಸರ್ಕಾರಿ ಶಾಲೆ ಶಿಬಿರಕ್ಕೆ ಸ್ಥಳಾಂತರಗೊಂಡೆವು, ಆದರೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಿಲ್ಲಲಿಲ್ಲ,” ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ವಾಸಿಸುವುದು ಈಗ ಅಪಾಯಕಾರಿ. ಸರ್ಕಾರ ಕೂಡಲೇ ನಮ್ಮ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement