ಸಿಂಗಾಪುರ: ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ (ಎನ್ಯುಎಸ್) ವಿಜ್ಞಾನಿಗಳು ಬಟ್ಟೆಯಲ್ಲೇ ಅಳವಡಿಸಬಹುದಾದ ಟಚ್ಸ್ಕ್ರೀನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ವಿಶೇಷ ಎಲೆಕ್ಟ್ರಾನಿಕ್ ನಾರುಗಳಿಂದ ತಯಾರಿಸಿದ ಈ ಪರದೆಯನ್ನು ಬಟ್ಟೆಯೊಂದಿಗೆ ನೇಯಬಹುದು. ಇದು ಚಿತ್ರ, ವಿಡಿಯೊಗಳನ್ನು ತೋರಿಸುವುದಲ್ಲದೆ, ಬೆರಳಿನಿಂದ ಮುಟ್ಟಿದಾಗ ಪ್ರತಿಕ್ರಿಯಿಸುತ್ತದೆ ಮತ್ತು ವೈರ್ಲೆಸ್ ಮೂಲಕ ಇತರ ಸಾಧನಗಳಿಗೂ ಸಂಪರ್ಕ ಕಲ್ಪಿಸುತ್ತದೆ. ವಿಶೇಷವೆಂದರೆ, ಈ ಬಟ್ಟೆಯನ್ನು ಯಂತ್ರದಲ್ಲಿ 50 ಬಾರಿ ತೊಳೆದರೂ ಪರದೆಯ ಕಾರ್ಯಕ್ಷಮತೆ ಬಹುತೇಕ ಹಾಗೆಯೇ ಉಳಿದಿದೆ. ಈ ಸಂಶೋಧನಾ ತಂಡದಲ್ಲಿ ಭಾರತೀಯ ಸಂಶೋಧಕಿ ಸ್ವೇತಿಕಾ ಚತುರ್ವೇದಿ ಕೂಡ ಇದ್ದಾರೆ. ಅವರು ಎನ್ಯುಎಸ್ನಲ್ಲಿ ಸಂಶೋಧನಾ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ನೂಲಿನಿಂದಲೇ ತಯಾರಿಸಿದ ಡಿಜಿಟಲ್ ಸ್ಕೀನ್
ಅಕ್ಟೋಬರ್ 21, 2026ರಂದು ‘ನೇಚರ್’ (Nature) ನಿಯತಕಾಲಿಕದಲ್ಲಿ ಪ್ರಕಟವಾದ ಈ ಸಂಶೋಧನೆಯು, ಉಡುಪಿನಲ್ಲೇ ಟಚ್ಸ್ಕ್ರೀನ್ ಅಳವಡಿಸುವ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಸಂಶೋಧಕರ ಪ್ರಕಾರ, ಬಟ್ಟೆಯೊಳಗೆ ಸಂಯೋಜಿಸಲಾದ ವಿಶ್ವದ ಮೊದಲ ಟಚ್ಸ್ಕ್ರೀನ್ ಇದಾಗಿದೆ.
ಸಾಮಾನ್ಯ ಮೊಬೈಲ್ ಫೋನ್ಗಳಲ್ಲಿ ಪರದೆಯು ಗಟ್ಟಿಯಾದ ಫಲಕದಿಂದ ತಯಾರಾಗಿರುತ್ತದೆ. ಆದರೆ, ಈ ಹೊಸ ತಂತ್ರಜ್ಞಾನದಲ್ಲಿ ಎಲೆಕ್ಟ್ರಾನಿಕ್ ಭಾಗಗಳನ್ನು ವಿಶೇಷ ನಾರುಗಳೊಳಗೆ ಅಳವಡಿಸಲಾಗಿದೆ. ಈ ನಾರುಗಳನ್ನು ಬಟ್ಟೆಯೊಂದಿಗೆ ನೇಯುವುದರಿಂದ, ಬಟ್ಟೆಯೇ ಟಚ್ ಸ್ಕ್ರೀನ್ ಆಗಿ ಕೆಲಸ ಮಾಡುತ್ತದೆ.
ಎನ್ಯುಎಸ್ನ ಸಹಾಯಕ ಪ್ರಾಧ್ಯಾಪಕ ತುರೆಲ್ ಖುದಿಯೇವ್ ನೇತೃತ್ವದ ತಂಡವು, 54 ಪಿಕ್ಸೆಲ್ಗಳನ್ನು ಹೊಂದಿರುವ ನಾರುಗಳನ್ನು ಬಳಸಿ ಅಂಗಿಯ ತೋಳಿನಲ್ಲಿ ಟಚ್ ಸ್ಕ್ರೀನ್ ರೂಪಿಸಿದೆ. ಇದರ ಉದ್ದ 168 ಮಿ.ಮೀ. ಮತ್ತು ಅಗಲ 105 ಮಿ.ಮೀ. ಇದೆ. ಪರದೆಯ ರೆಸಲ್ಯೂಷನ್ 96 × 54 ಪಿಕ್ಸೆಲ್ಗಳಾಗಿದ್ದು, ಪ್ರತಿ ಸೆಕೆಂಡಿಗೆ 30 ಫ್ರೇಮ್ಗಳನ್ನು ಪ್ರದರ್ಶಿಸಬಲ್ಲದು.
ಈ ಬಟ್ಟೆಯನ್ನು ಬೆರಳಿನಿಂದ ಮುಟ್ಟಿದಾಗ ಅದರೊಳಗಿನ ಸ್ಪರ್ಶಸಂವೇದಿ ಪದರ ಕಾರ್ಯನಿರ್ವಹಿಸುತ್ತದೆ. ಬೆರಳು ಯಾವ ಜಾಗವನ್ನು ಮುಟ್ಟಿದೆ ಎಂಬುದನ್ನು ಗುರುತಿಸಿ, ಆ ಸ್ಥಳದಲ್ಲಿರುವ ಪಿಕ್ಸೆಲ್ ಬೆಳಗುತ್ತದೆ. ಹೀಗೆ ಬಟ್ಟೆಯ ಮೇಲೆಯೇ ಬೆರಳಿನಿಂದ ನಿಯಂತ್ರಿಸಬಹುದಾದ ಪರದೆಯನ್ನು ರೂಪಿಸಲಾಗಿದೆ.
ಅಂಗಿಯ ತೋಳಿನಲ್ಲೇ ಏನೆಲ್ಲ ಮಾಡಬಹುದು?
ಈ ಸ್ಕ್ರೀನ್ನಲ್ಲಿ ಚಿತ್ರಗಳನ್ನು ನೋಡುವುದಷ್ಟೇ ಅಲ್ಲದೆ, ವಿಡಿಯೊ ವೀಕ್ಷಿಸಬಹುದು, ಕ್ಯಾಲ್ಕುಲೇಟರ್ ಬಳಸಬಹುದು, ಫೋಟೊಗಳನ್ನು ವೀಕ್ಷಿಸಬಹುದು ಮತ್ತು ದಿಕ್ಸೂಚಿಯಂತೆ (ಕಂಪಾಸ್) ಬಳಸಬಹುದು. ಧ್ವನಿ ಆಜ್ಞೆಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವೂ ಇದರಲ್ಲಿದೆ. ಬ್ಲೂಟೂತ್ ಮೂಲಕ ಇತರ ಸಾಧನಗಳಿಂದ ಫೋಟೊಗಳನ್ನು ರಿಸೀವ್ ಮಾಡಬಹುದು.
ಇದರ ಜತೆಗೆ, ಬಟ್ಟೆಯಲ್ಲಿ ಮೈಕ್ರೊಫೋನ್, ಸ್ಪೀಕರ್ ಮತ್ತು ಹಲವು ಸಂವೇದಕಗಳನ್ನು ಅಳವಡಿಸಲಾಗಿದೆ. ಇವು ದೇಹದ ಉಷ್ಣತೆ, ದೇಹದ ಚಲನೆ, ಸುತ್ತಮುತ್ತಲಿನ ಬೆಳಕಿನ ಪ್ರಮಾಣ ಮತ್ತು ಕಾಂತೀಯ ದಿಕ್ಕನ್ನು ಅಳೆಯಬಲ್ಲವು.
ಉದಾಹರಣೆಗೆ, ತೋಳಿನ ಕೆಳಭಾಗದಲ್ಲಿರುವ ತಾಪಮಾನ ಸಂವೇದಕವು ದೇಹದ ಉಷ್ಣತೆಯನ್ನು ಅಳೆದು, ಅದರ ಮಾಹಿತಿಯನ್ನು ಅಂಗಿಯ ಪರದೆಯಲ್ಲೇ ತೋರಿಸುತ್ತದೆ. ಭವಿಷ್ಯದಲ್ಲಿ ಇತರ ಧರಿಸಬಹುದಾದ ಆರೋಗ್ಯ ಸಂವೇದಕಗಳೊಂದಿಗೆ ಇದನ್ನು ಸಂಯೋಜಿಸಿದರೆ, ಆರೋಗ್ಯದ ಮೇಲ್ವಿಚಾರಣೆಗೂ ಬಳಸಬಹುದು.
50 ಬಾರಿ ತೊಳೆದರೂ ಕಾರ್ಯಕ್ಷಮತೆ ಬಹುತೇಕ ಹಾಗೆಯೇ!
ಎಲೆಕ್ಟ್ರಾನಿಕ್ ಸಾಧನಗಳನ್ನು ಬಟ್ಟೆಯಲ್ಲಿ ಅಳವಡಿಸುವಾಗ ಅವು ಬಾಗುವುದು, ಹಿಗ್ಗುವುದು ಮತ್ತು ತೊಳೆಯುವಾಗ ಹಾಳಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲು. ಸಾಮಾನ್ಯ ಬಟ್ಟೆಗಳನ್ನು ಪ್ರತಿದಿನ ಬಳಸುವಾಗ ಅವು ಹಲವು ರೀತಿಯಲ್ಲಿ ಮಡಚಿಕೊಳ್ಳುತ್ತವೆ ಮತ್ತು ಬಾಗುತ್ತವೆ. ಇಂತಹ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಪರದೆಯು ಕಾರ್ಯನಿರ್ವಹಿಸುತ್ತಿರಬೇಕು.
ಈ ಸವಾಲನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಮಾದರಿಯನ್ನು ಡಿಟರ್ಜೆಂಟ್ ಬಳಸಿ ಯಂತ್ರದಲ್ಲಿ 50 ಬಾರಿ ತೊಳೆಯಲಾಗಿದೆ. ಆದರೂ ಪರದೆಯ ಬೆಳಕಿನ ತೀವ್ರತೆ ಮತ್ತು ಸ್ಪರ್ಶಕ್ಕೆ ಪ್ರತಿಕ್ರಿಯಿಸುವ ಸಾಮರ್ಥ್ಯದಲ್ಲಿ ಬಹುತೇಕ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಕೇವಲ 5 ಮಿ.ಮೀ. ತ್ರಿಜ್ಯವಿರುವಷ್ಟು ಬಿಗಿಯಾದ ವಕ್ರತೆಯಲ್ಲಿ ಪರದೆಯನ್ನು 1,000 ಬಾರಿ ಬಾಗಿಸಿದರೂ ಅದು ಕಾರ್ಯನಿರ್ವಹಿಸಿದೆ. ಪರದೆಯು ಹೊಂದಿಕೊಳ್ಳುವ ಗುಣ ಹೊಂದಿರುವುದರ ಜತೆಗೆ, ಗಾಳಿಯಾಡಲು ಅವಕಾಶ ನೀಡುತ್ತದೆ. ಹೀಗಾಗಿ, ಗಟ್ಟಿಯಾದ ಫಲಕದಂತೆ ಇರದೆ ಸಾಮಾನ್ಯ ಬಟ್ಟೆಯಂತೆಯೇ ಬಳಸಲು ಸಾಧ್ಯವಾಗುತ್ತದೆ.
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ
ಬಟ್ಟೆಯನ್ನೇ ಟಚ್ಸ್ಕ್ರೀನ್ ಆಗಿ ಪರಿವರ್ತಿಸುವ ಈ ತಂತ್ರಜ್ಞಾನವು ಮಹತ್ವದ ಸಂಶೋಧನೆಯಾದರೂ, ಸದ್ಯಕ್ಕೆ ಇದು ಪ್ರಯೋಗಾತ್ಮಕ ಮಾದರಿಯ ಹಂತದಲ್ಲಿದೆ. ಗ್ರಾಹಕರು ಖರೀದಿಸಬಹುದಾದ ಸಿದ್ಧ ಉತ್ಪನ್ನವಾಗಿ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಸ್ಮಾರ್ಟ್ಫೋನ್ಗೆ ಪರ್ಯಾಯವಾಗುವ ಹಂತಕ್ಕೂ ತಲುಪಿಲ್ಲ.
ಮುಂದಿನ ದಿನಗಳಲ್ಲಿ ಪರದೆಯ ಸ್ಪಷ್ಟತೆಯನ್ನು ಹೆಚ್ಚಿಸುವುದು, ಹೆಚ್ಚಿನ ಸಂವೇದಕಗಳನ್ನು ಅಳವಡಿಸುವುದು ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಸೇರಿಸುವುದು ಸಂಶೋಧಕರ ಗುರಿಯಾಗಿದೆ.
ಈ ಪ್ರಯತ್ನಗಳು ಯಶಸ್ವಿಯಾದರೆ, ಭವಿಷ್ಯದಲ್ಲಿ ಬಟ್ಟೆ ಕೇವಲ ಧರಿಸುವ ವಸ್ತುವಾಗಿ ಉಳಿಯುವುದಿಲ್ಲ. ಅದು ಡಿಜಿಟಲ್ ಪರದೆಯಾಗಿ, ದೇಹದ ಉಷ್ಣತೆ ಸೇರಿದಂತೆ ಹಲವು ಮಾಹಿತಿಗಳನ್ನು ಅಳೆಯುವ ಸಾಧನವಾಗಿ ಮತ್ತು ಡಿಜಿಟಲ್ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸುವ ಮಾಧ್ಯಮವಾಗಿಯೂ ಕೆಲಸ ಮಾಡಬಹುದು. ಮೊಬೈಲ್ ಫೋನ್ ಕೈಗೆತ್ತಿಕೊಳ್ಳುವ ಬದಲು ಅಂಗಿಯ ತೋಳನ್ನು ಮುಟ್ಟಿಯೇ ಹಲವು ಕೆಲಸಗಳನ್ನು ಮಾಡುವ ಸಾಧ್ಯತೆಯನ್ನು ಈ ಹೊಸ ತಂತ್ರಜ್ಞಾನ ತೆರೆದಿಟ್ಟಿದೆ.


ನಿಮ್ಮ ಕಾಮೆಂಟ್ ಬರೆಯಿರಿ