ಬೆಚ್ಚಿಬೀಳಿಸುವ ವಿಡಿಯೋ | ನೇಪಾಳದಲ್ಲಿ ಮತ್ತೊಂದು ಭೀಕರ ಭೂಕುಸಿತ: ಕೆಲವೇ ಸೆಕೆಂಡ್‌ಗಳಲ್ಲಿ ಬೆಟ್ಟವೇ ಇಲ್ಲ !

ಕಠ್ಮಂಡು: ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ನೇಪಾಳದ ಮುಸ್ತಾಂಗ್ ಜಿಲ್ಲೆಯಲ್ಲಿ ಪರ್ವತದ ಒಂದು ಭಾಗ ಕಾಳಿ ಗಂಡಕಿ ನದಿಗೆ ಕುಸಿದುಬಿದ್ದ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಬೆಟ್ಟದ ಇಳಿಜಾರು ಕುಸಿದು ನದಿಗೆ ಬೀಳುವ ದೃಶ್ಯಗಳು ಅದರಲ್ಲಿ ಸೆರೆಯಾಗಿವೆ. ಘಟನಾ ಸ್ಥಳದ ಸಮೀಪದಲ್ಲಿದ್ದ ಜನರು ಆತಂಕದಿಂದ ಕೂಗುತ್ತಾ ಸುರಕ್ಷಿತ ಸ್ಥಳಗಳಿಗೆ ಓಡಿಹೋಗಿರುವುದು ಕಂಡುಬಂದಿದೆ.
ಭಾರೀ ಮಳೆಯಿಂದ ದೇಶದ ವಿವಿಧ ಭಾಗಗಳಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, ಸೋಮವಾರದ ವರದಿಯ ಪ್ರಕಾರ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ. ಮಳೆಯಿಂದ ಮನಾಂಗ್, ಮ್ಯಾಗ್ಡಿ, ಬಾಗ್ಲುಂಗ್, ಪರ್ಬತ್ ಮತ್ತು ಪಾಲ್ಪಾ ಜಿಲ್ಲೆಗಳಲ್ಲಿ ಮನೆಗಳು, ರಸ್ತೆಗಳು, ಸೇತುವೆಗಳು ಹಾಗೂ ವಿದ್ಯುತ್ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ.

ಸಾವಿನ ಸಂಖ್ಯೆಯಲ್ಲಿ ಬಾಗ್ಲುಂಗ್ ಜಿಲ್ಲೆಯಲ್ಲಿ ಅತಿ ಹೆಚ್ಚು 10 ಮಂದಿ ಮೃತಪಟ್ಟಿದ್ದಾರೆ. ಮ್ಯಾಗ್ಡಿಯಲ್ಲಿ ಆರು ಮಂದಿ, ಮನಾಂಗ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಪಾಲ್ಪಾ ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದು, ಧನುಷಾ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮತ್ತೊಬ್ಬರು ಜೀವ ಕಳೆದುಕೊಂಡಿದ್ದಾರೆ.
ನಾಪತ್ತೆಯಾದವರಲ್ಲಿ ಮನಾಂಗ್ ಜಿಲ್ಲೆಯಲ್ಲಿ 10 ಮಂದಿ, ಮ್ಯಾಗ್ಡಿಯಲ್ಲಿ ಮೂವರು ಮತ್ತು ಬಾಗ್ಲುಂಗ್‌ನಲ್ಲಿ ಒಬ್ಬರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಲಮ್ಜುಂಗ್‌ನಲ್ಲಿ ಇಬ್ಬರು ಹಾಗೂ ಬಾಗ್ಲುಂಗ್ ಮತ್ತು ಮ್ಯಾಗ್ಡಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಗಾಯಗೊಂಡಿದ್ದಾರೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿಯಂತೆ, ಕಾಳಿ ಗಂಡಕಿ ನದಿಯ ಪ್ರವಾಹವೇ ಅತಿ ಹೆಚ್ಚು ಹಾನಿಗೆ ಕಾರಣವಾಗಿದೆ. ನಾರಾಯಣಿ ಮತ್ತು ತಿನೌ ನದಿಗಳ ತೀರಗಳಲ್ಲಿಯೂ ಪ್ರವಾಹ ಹಾಗೂ ಭೂಕುಸಿತದಿಂದ ಹಾನಿ ಸಂಭವಿಸಿದೆ.
ಪ್ರವಾಹ ಮತ್ತು ಭೂಕುಸಿತದಿಂದ ನೇರವಾಗಿ 747 ಕುಟುಂಬಗಳು ಬಾಧಿತವಾಗಿವೆ. ಗಂಡಕಿ ಪ್ರಾಂತ್ಯದಲ್ಲಿ 435 ಮನೆಗಳ ಸುಮಾರು 1,500 ಜನರನ್ನು ಸ್ಥಳಾಂತರಿಸಲಾಗಿದ್ದು, ನೂರಾರು ಮನೆಗಳು ಹಾನಿಗೊಳಗಾಗಿವೆ ಅಥವಾ ಅಪಾಯದ ಅಂಚಿನಲ್ಲಿವೆ.

ಕಾಳಿ ಗಂಡಕಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಸ್ಯಾಂಗ್ಜಾ ಮತ್ತು ಗುಲ್ಮಿ ಜಿಲ್ಲೆಗಳನ್ನು ಸಂಪರ್ಕಿಸುತ್ತಿದ್ದ ಕಾಂಕ್ರೀಟ್ ಸೇತುವೆಯೊಂದು ಕೊಚ್ಚಿಹೋಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಮಿರ್ಮಿ ಅಣೆಕಟ್ಟಿನ ಮೂರು ಗೇಟ್‌ಗಳನ್ನು ಸಂಪೂರ್ಣವಾಗಿ ತೆರೆಯುವುದರ ಜೊತೆಗೆ 144 ಮೆಗಾವಾಟ್ ಸಾಮರ್ಥ್ಯದ ಕಾಳಿ ಗಂಡಕಿ ‘ಎ’ ಜಲವಿದ್ಯುತ್ ಯೋಜನೆಯ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ.
ಈ ವಿಪತ್ತು ಸಂಭವಿಸುವ ಮೊದಲು ಹಲವು ದಿನಗಳಿಂದ ನೇಪಾಳದಾದ್ಯಂತ ಭಾರೀ ಮಳೆಯಾಗುತ್ತಿತ್ತು.
ತಿನೌ, ನಾರಾಯಣಿ ಮತ್ತು ರಿಯು ನದಿಗಳು ಕೆಲವು ಪ್ರದೇಶಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದಾಗಿ ವರದಿಯಾಗಿದೆ. ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಅಪಾಯ ಇರುವ ಪ್ರದೇಶಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.
ಇದೇ ವೇಳೆ, ಮನಾಂಗ್ ಜಿಲ್ಲೆಯ ಹಿಮ್ಲುಂಗ್ ಹಿಮಾಲ್ ಪರ್ವತ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಹಿಮಕುಸಿತದಲ್ಲಿ ಇಬ್ಬರು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ. ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement