ಏಷ್ಯಾದ ಆನೆಗಳು ಸತ್ತ ಮರಿಗಳನ್ನು ವಿಧಿವತ್ತಾಗಿ ಹೂಳುತ್ತವೆ…! ಹೊಸ ಅಧ್ಯಯನದ ವೇಳೆ ಪತ್ತೆ…!!

ತಮ್ಮ ಬುದ್ಧಿವಂತಿಕೆಗೆ ಹೆಸರುವಾಸಿಯಾದ ಆನೆಗಳು, ತಮ್ಮ ಸತ್ತ ಮರಿಗಳನ್ನು ತಮ್ಮ ಸೊಂಡಿಲಿನಿಂದ ದಿನಗಳು ಮತ್ತು ವಾರಗಳವರೆಗೆ ಸಾಗಿಸುವಂತಹ ಭಾವನಾತ್ಮಕ ನಡವಳಿಕೆಗಳನ್ನು ತೋರಿಸುವುದನ್ನು ಬಹಳ ಹಿಂದಿನಿಂದಲೂ ಗಮನಿಸಲಾಗಿದೆ. ಜರ್ನಲ್ ಆಫ್ ಥ್ರೆಟೆನ್ಡ್ ಟ್ಯಾಕ್ಸಾದಲ್ಲಿ ಪ್ರಕಟವಾದ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಮತ್ತು ಪುಣೆ ಮೂಲದ ಸಂಶೋಧಕ ಆಕಾಶದೀಪ ರಾಯ್ ಅವರ ಇತ್ತೀಚಿನ ಅದ್ಭುತ ಅಧ್ಯಯನದಲ್ಲಿನ ಮಹತ್ವದ ಸಂಗತಿಗಳನ್ನು ಐಎಫ್‌ಎಸ್ ಪರ್ವೀನ್ ಕಸ್ವಾನ್ ಬಹಿರಂಗಪಡಿಸಿದ್ದಾರೆ.
ಅಧ್ಯಯನವು ಏಷ್ಯನ್ ಆನೆಗಳು ಅನುಸರಿಸುವ ಕೆಲವು ವಿಶಿಷ್ಟ ಪದ್ಧತಿಯನ್ನು ದಾಖಲಿಸಿದೆ, ಅಲ್ಲಿ ಆನೆಗಳು ತಮ್ಮ ಸತ್ತ ಮರಿಗಳನ್ನು ಹೂಳುವ ಬಗ್ಗೆ ಆಕಾಶದೀಪ ರಾಯ್ ತಮ್ಮ ಅಧ್ಯಯನದಲ್ಲಿ ಉಲ್ಲೇಖಿಸಿದ್ದಾರೆ. ಆನೆಗಳು ಸತ್ತ ತಮ್ಮ ಮರಿಗಳನ್ನು ಮಾನವ ವಸಾಹತುಗಳಿಂದ ದೂರ ಸಾಗಿಸುತ್ತವೆ ಮತ್ತು ಬೆನ್ನು ಕೆಳಗೆ ಮಾಡಿ, ಕೈ-ಕಾಲುಗಳನ್ನು ಮೇಲೆ ಮಾಡಿ ನೆಟ್ಟಗಿನ ಸ್ಥಿತಿಯಲ್ಲಿ ಹೂಳುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಸಾವಿನ ಕಾರಣವನ್ನು ಲೆಕ್ಕಿಸದೆ, ಆನೆಯು ತಮ್ಮ ಮರಿಗಳನ್ನು ಅದೇ ಸ್ಥಿತಿಯಲ್ಲಿ ಹೂಳುತ್ತವೆಯಂತೆ…!

ಆಫ್ರಿಕನ್ ಆನೆಗಳು ಇಂತಹ ಅಭ್ಯಾಸಗಳನ್ನು ಅನುಸರಿಸುತ್ತವೆ ಎಂದು ತಿಳಿದಿದ್ದರೂ, ಏಷ್ಯಾದ ಆನೆಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ನಡವಳಿಕೆ ಕಂಡುಬಂದಿದೆ. ಏತನ್ಮಧ್ಯೆ, ಪರ್ವೀನ್ ಮತ್ತು ಆಕಾಶದೀಪ ಈ ಸತ್ಯಗಳನ್ನು ಕಂಡುಕೊಳ್ಳಲು ಛಾಯಾಗ್ರಹಣ, ಕ್ಷೇತ್ರ ವರದಿಗಳು ಮತ್ತು ಮರಣೋತ್ತರ ಪರೀಕ್ಷೆಗಳನ್ನು ಬಳಸಿಕೊಂಡರು. ಅಧ್ಯಯನವು ಉತ್ತರ ಬಂಗಾಳ ಸೇರಿದಂತೆ ಕೆಲವು ಪ್ರದೇಶಗಳು, ಅರಣ್ಯಗಳು, ಟೀ ಎಸ್ಟೇಟ್‌ಗಳು, ಕೃಷಿ ಭೂಮಿಗಳು ಮತ್ತು ದೇಬ್ಪಾರಾ, ಚುನಾಭಟ್ಟಿ, ಭರ್ನಾಬರಿ, ಮಜೆರ್ದಾಬ್ರಿ ಮತ್ತು ಗೊರುಮಾರಾ ಮತ್ತು ಬಕ್ಸಾ ಬಳಿಯ ನ್ಯೂ ಡೋರ್ಸ್ ಟೀ ಗಾರ್ಡನ್‌ಗಳಂತಹ ಪ್ರದೇಶಗಳಲ್ಲಿನ ಮಿಲಿಟರಿ ಸ್ಥಳಗಳ ಮೇಲೆ ಕೇಂದ್ರೀಕರಿಸಿದೆ. ಮೂರು ಮತ್ತು 12 ತಿಂಗಳ ನಡುವಿನ ಮರಿಗಳನ್ನು ಒಳಗೊಂಡಿರುವ ಪ್ರಕರಣಗಳಲ್ಲಿ ಆನೆಗಳ ಈ ಹೂಳುವ ನಡವಳಿಕೆ ಕಂಡುಬಂದಿದೆ.
ಪೋಸ್ಟ್ ಅನ್ನು ಹಂಚಿಕೊಂಡ ಐಎಫ್‌ಎಸ್ ಪರ್ವೀನ್ ಕಸ್ವಾನ್, “ಆನೆ ಸಮಾಧಿ ಎಂದು ಕರೆಯಲ್ಪಡುವ ವಿದ್ಯಮಾನದ ಬಗ್ಗೆ ಕೇಳಿದ್ದೇನೆ. ಆದರೆ ಭಾರತದಲ್ಲಿ ಈ ತರಹದ ವಿದ್ಯಮಾನ ದಾಖಲಿಸಿರುವುದು ಅಪರೂಪ. ‘ಜರ್ನಲ್ ಆಫ್ ಥ್ರೆಟೆನ್ಡ್ ಟ್ಯಾಕ್ಸಾ’ ನಲ್ಲಿ ಬಹು ನೈಜ ದಾಖಲಾತಿಗಳೊಂದಿಗೆ ಏಷ್ಯನ್ ಆನೆ ಸಮಾಧಿ(ಹೂಳುವುದು)ಗಳ ಕುರಿತು ಭಾರತದಿಂದ ಈ ರೀತಿಯ ಮೊದಲ ಅಧ್ಯಯನವನ್ನು ನಾವು ಇಲ್ಲಿ ಪ್ರಕಟಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ಟೈಮ್ಸ್ ಆಫ್ ಇಂಡಿಯಾದ ಜೊತೆಗಿನ ಸಂಭಾಷಣೆಯಲ್ಲಿ, “ಪರ್ವೀನ್ ಕಸ್ವಾನ್ ಅವರು, “ಆನೆಗಳು ಶವಗಳನ್ನು ಹೂಳುವ ಮೊದಲು ಸೊಂಡಿಲುಗಳು ಅಥವಾ ಕಾಲುಗಳನ್ನು ಹಿಡಿದುಕೊಂಡು ದೂರದವರೆಗೆ ಸಾಗಿಸುವುದನ್ನು ನಾವು ಕಂಡುಕೊಂಡಿದ್ದೇವೆ. ಎಲ್ಲಾ ಐದು ಸಂದರ್ಭಗಳಲ್ಲಿ, ಕಾಲುಗಳು ನೆಟ್ಟಗೆ ಇದ್ದವು, ತಲೆ, ಸೊಂಡಿಲು ಮತ್ತು ಬೆನ್ನಿನ ಭಾಗಗಳು ಸಂಪೂರ್ಣವಾಗಿ ಹೂತುಹೋದ ಸ್ಥಿತಿಯಲ್ಲಿದ್ದವು. ಗುಂಪಿನ ಸದಸ್ಯರಿಗೆ ಸತ್ತ ಮರಿಯನ್ನು ಹಿಡಿದುಕೊಳ್ಳಲು ಮತ್ತು ಕಂದಕದಲ್ಲಿ ಇಡಲು ಉತ್ತಮ ಹಿಡಿತಕ್ಕಾಗಿ ಈ ರೀತಿ ಸ್ಥಿತಿಯನ್ನು ಹೂಳಲು ಅನುಸರಿಸಿರಬಹುದು. ಇದು ಮರಿಯ ಬಗ್ಗೆ ಆನೆಯ ಹಿಂಡಿನ ಕಾಳಜಿ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಸ್ಥಳಾವಕಾಶದ ಕೊರತೆಯಿಂದಾಗಿ, ಆನೆಯ ಹಿಂಡು ಮಣ್ಣಿನಿಂದ ಮರಿಗಳ ಶವ ಮುಚ್ಚಲು ಪಾದಗಳಿಗಿಂತ ಮೊದಲು ತಲೆಗೆ ಆದ್ಯತೆ ನೀಡುತ್ತದೆ ಎಂದು ಅದು ಸೂಚಿಸುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

ಅಲ್ಲದೆ, ಏಷ್ಯನ್ ಆನೆಗಳು ಮತ್ತೊಂದು ವಿಶಿಷ್ಟ ನಡವಳಿಕೆಯನ್ನು ತೋರಿಸಿರುವುದು ಅಧ್ಯಯನದಲ್ಲಿ ಕಂಡುಬಂದಿದೆ. ಆನೆಗಳ ಗುಂಪು ಈ ಮರಿಗಳ ಸತ್ತ ಶರೀರವನ್ನು ಹೂಳಿದ ಅಥವಾ ಇಟ್ಟ ಸ್ಥಳದ ದಾರಿ ಕಡೆಗೆ ಹೋಗುವುದಿಲ್ಲ…! ಮರಿಗಳನ್ನು ಮಣ್ಣು ಮಾಡಿದ ಪ್ರದೇಶಗಳಲ್ಲಿ ಆನೆಗಳ ಚಲನೆಯ ಆವರ್ತನವು 70%ರಷ್ಟು ಕಡಿಮೆಯಾಗಿದೆ ಎಂದು ಸಂಶೋಧಕರು ಗಮನಿಸಿದ್ದಾರೆ. ಏಷ್ಯನ್ ಆನೆಗಳು ಅಂತಹ ಮಾರ್ಗಕ್ಕೆ ಹೋಗುವುದನ್ನು ತಪ್ಪಿಸುತ್ತವೆ, ಮತ್ತೊಂದೆಡೆ, ಆಫ್ರಿಕನ್ ಆನೆಗಳು ಸತ್ತ ಅವಶೇಷಗಳನ್ನು ಅನ್ವೇಷಿಸಲು ಸಾಕಷ್ಟು ಸಮಯವನ್ನು ವ್ಯಯ ಮಾಡುತ್ತವೆ. ಕುತೂಹಲಕಾರಿಯಾಗಿ, ಏಷ್ಯಾದ ಆನೆ ಜಾತಿಗಳು ಸಮಾನಾಂತರ ಮಾರ್ಗಗಳನ್ನು ಬಳಸುತ್ತವೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement