‘ಸತ್ತಿದ್ದಾನೆ’ ಎಂದು ಭಾವಿಸಲಾಗಿದ್ದ ತಮ್ಮ 35 ವರ್ಷಗಳ ಬಳಿಕ ಪತ್ತೆ : ಕುಟುಂಬ ಒಂದಾಗಿಸಿದ ಮತದಾರರ ‘ಎಸ್‌ಐಆರ್‌’ ಪರಿಶೀಲನೆ !

ಚಂಡೀಗಢ : ಪೋಲಿಯೋ ಚಿಕಿತ್ಸೆಯ ಖರ್ಚು ಬಡ ಕುಟುಂಬಕ್ಕೆ ಹೊರೆಯಾಗಬಾರದು ಎಂಬ ಒಂದೇ ಕಾರಣಕ್ಕೆ 35 ವರ್ಷಗಳ ಹಿಂದೆ ಮನೆ ತೊರೆದಿದ್ದ ವ್ಯಕ್ತಿಯನ್ನು ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಶೀಲನೆ’ (SIR) ಪ್ರಕ್ರಿಯೆಯು ಸುದೀರ್ಘ ಸಮಯದ ನಂತರ ಅವರ ಕುಟುಂಬದ ಜೊತೆ ಪುನರ್ಮಿಲನಕ್ಕೆ ಕಾರಣವಾದ ಅಪರೂಪದ ಭಾವನಾತ್ಮಕ ಘಟನೆ ಹರ್ಯಾಣದ ಜಿಂದ್‌ ಜಿಲ್ಲೆಯಲ್ಲಿ ನಡೆದಿದೆ.
ಸೀತಾರಾಮ ಅವರು ಒಟ್ಟು ಆರು ಜನ ಸಹೋದರರಲ್ಲಿ ಐದನೆಯವರಾಗಿದ್ದಾರೆ. ಬಾಲ್ಯದಲ್ಲಿ ಪೋಲಿಯೋದಿಂದಾಗಿ ಕಾಲಿನ ಸಮಸ್ಯೆಗೆ ಒಳಗಾಗಿದ್ದ ಇವರನ್ನು ಕುಟುಂಬದವರು ಪಂಜಾಬಿನ ಸಂಗ್ರೂರ್‌ನಲ್ಲಿರುವ ಪೋಲಿಯೊ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ್ದರು. ಆದರೆ, ತಮ್ಮ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಬಡ ಕುಟುಂಬಕ್ಕೆ ಹೊರೆಯಾಗಬಾರದು ಎಂದು ಬಯಸಿದ ಸೀತಾರಾಮ, ಯಾರಿಗೂ ಹೇಳದೆ ಚಿಕಿತ್ಸಾ ಕೇಂದ್ರದಿಂದ ಹೊರಟುಹೋಗಿದ್ದರು. ಒಂದು ತಿಂಗಳ ನಂತರ ಕುಟುಂಬಸ್ಥರು ನೋಡಲು ಹೋದಾಗ ಅವರು ಅಲ್ಲಿರಲಿಲ್ಲ. ವರ್ಷಗಟ್ಟಲೆ ಹುಡುಕಾಡಿದರೂ ಸಿಗದಿದ್ದಾಗ, ಕುಟುಂಬದವರು ಸೀತಾರಾಮ ಮೃತಪಟ್ಟಿರಬಹುದು ಎಂದೇ ಭಾವಿಸಿ ಹುಡುಕಾಟ ಕೈಬಿಟ್ಟಿದ್ದರು.

ಪಂಜಾಬ್‌ನಲ್ಲಿ ಹೊಸ ಜೀವನ
ಮನೆ ತೊರೆದ ಸೀತಾರಾಮ ಪಂಜಾಬ್ ತಲುಪಿ, ಆರಂಭದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಪ್ಯೂನ್ ಆಗಿ ಕೆಲಸಕ್ಕೆ ಸೇರಿದರು. ತದನಂತರ ಸರ್ಕಾರಿ ಉದ್ಯೋಗವನ್ನೂ ಪಡೆದುಕೊಂಡರು. ಪ್ರಸ್ತುತ ಪಂಜಾಬ್‌ನ ಅಮೃತಸರದಲ್ಲಿ ನೆಲೆಸಿರುವ ಅವರಿಗೆ, ಅಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಶೀಲನೆ’ (SIR) ಪ್ರಕ್ರಿಯೆಗೆ ಸಲ್ಲಿಸಲು ಸ್ಕೂಲ್‌ ಲೀವಿಂಗ್‌ ಸರ್ಟಿಫಿಕೆಟ್‌(SLC)ನ ತುರ್ತು ಅಗತ್ಯವಿತ್ತು. ಹೀಗಾಗಿ ಸೀತಾರಾಮ ಅವರು ಹರ್ಯಾಣದ ಜಿಂದ್‌ ಜಿಲ್ಲೆಯ ಮನೋಹರಪುರದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ (ಉತ್ತೀರ್ಣರಾಗಿರಲಿಲ್ಲ) ದಾಖಲೆ ಪಡೆಯಲು 35 ವರ್ಷಗಳ ನಂತರ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದರು.
ಕುಟುಂಬ ಬೆಸೆಯಲು ಕಾರಣರಾದ ಬಿಎಲ್‌ಒ
ಶಾಲೆಯಲ್ಲಿ ಮತದಾರರ ಪರಿಶೀಲನಾ ಕಾರ್ಯದಲ್ಲಿದ್ದ ಬೂತ್ ಮಟ್ಟದ ಅಧಿಕಾರಿ (BLO) ಕೃಷ್ಣಕುಮಾರ ಅವರು ಸೀತಾರಾಮ ಅವರಿಂದ ತಂದೆ ಹಾಗೂ ಸಹೋದರನ ವಿವರಗಳನ್ನು ಸಂಗ್ರಹಿಸಿದರು. ಸೀತಾರಾಮ ತಮ್ಮ ಅಣ್ಣನ ಹೆಸರು ‘ಬಲ್ಬೀರ್’ ಎಂದು ತಿಳಿಸಿದಾಗ, ತಕ್ಷಣವೇ ಬಿಎಲ್‌ಒ ಅವರು ಬಲ್ಬೀರ್ ಅವರಿಗೆ ಫೋನ್ ಕರೆ ಮಾಡಿದರು.
ಕರೆ ಸ್ವೀಕರಿಸಿದ ಬಲ್ಬೀರ್, “ಹೌದು, ಸೀತಾರಾಮ ನನ್ನದೇ ತಮ್ಮ! ಕಳೆದ 35 ವರ್ಷಗಳಿಂದ ನಾವು ಅವನಿಗಾಗಿ ಹುಡುಕಾಟ ನಡೆಸುತ್ತಿದ್ದೆವು” ಎಂದು ಉದ್ಗರಿಸಿದರು. ಅನುಮಾನ ಪರಿಹರಿಸಿಕೊಳ್ಳಲು, “ಅವರ ಕಾಲಿನಲ್ಲಿ ಶಾರೀರಿಕವಾಗಿ ತೊಂದರೆ (ವಿಕಲಚೇತನ) ಇದೆಯೇ?” ಎಂದು ಬಲ್ಬೀರ್ ಕುಟುಂಬಸ್ಥರು ವಿಚಾರಿಸಿದರು. ಬಿಎಲ್‌ಒ ಹೌದು ಎಂದು ದೃಢಪಡಿಸುತ್ತಿದ್ದಂತೆಯೇ, ಬಲ್ಬೀರ್ ತಕ್ಷಣವೇ ಶಾಲೆಗೆ ಧಾವಿಸಿ ಬಂದರು.

ಪ್ರಮುಖ ಸುದ್ದಿ :-   ಎವರೆಸ್ಟ್‌ ಏರುವವರಿಂದಲೇ ಈಗ ಹಿಮನದಿಗೆ ಕಂಟಕ ; ದಿನಕ್ಕೆ 6000 ಲೀಟರ್ ಮೂತ್ರದಿಂದ ಕರಗುತ್ತಿದೆ ಹಿಮ....!

ಶಾಲೆಯ ಆವರಣದಲ್ಲಿ ಕಣ್ಣೀರಿನ ಮಿಲನ
ಶಾಲೆಗೆ ತಲುಪಿದ ಬಲ್ಬೀರ್ ತಮ್ಮ ತಮ್ಮ ಸೀತಾರಾಮ ಅವರನ್ನು ಕಂಡ ತಕ್ಷಣ ಗಟ್ಟಿಯಾಗಿ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. 35 ವರ್ಷಗಳ ಬೇರ್ಪಡುವಿಕೆಯ ನಂತರ ನಡೆದ ಈ ಕಣ್ಣೀರಿನ ಮಿಲನವನ್ನು ಕಂಡು ಅಲ್ಲಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು ತೀವ್ರ ಭಾವುಕರಾದರು.
ಸ್ಥಳದಲ್ಲಿದ್ದ ಮತ್ತೊಬ್ಬ ಅಧಿಕಾರಿ ರಮೇಶಕುಮಾರ ಈ ಘಟನೆಯನ್ನು ‘ಮರೆಯಲಾಗದ ಕ್ಷಣ’ ಎಂದು ಬಣ್ಣಿಸಿದ್ದಾರೆ. ಸಾಮಾನ್ಯ ಆಡಳಿತಾತ್ಮಕ ಪರಿಶೀಲನಾ ಪ್ರಕ್ರಿಯೆಯೊಂದು, ಅಧಿಕಾರಿಗಳ ಜಾಗರೂಕತೆಯಿಂದಾಗಿ ದಶಕಗಳಿಂದ ಬೇರ್ಪಟ್ಟಿದ್ದ ಕುಟುಂಬವನ್ನು ಒಂದಾಗಿಸುವ ಮಾಧ್ಯಮವಾಗಿ ಬದಲಾಗಿದ್ದು ನಿಜಕ್ಕೂ ವಿಶೇಷ ಎಂದು ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement