ಹೈದರಾಬಾದ್: ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸಾಜಿದ್ ಅಕ್ರಮ್ ಮೂಲತಃ ಹೈದರಾಬಾದ್‌ನವನು ಎಂದು ತೆಲಂಗಾಣ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಮೊದಲು ಮಾಧ್ಯಮಗಳು ಈತ ಪಾಕಿಸ್ತಾನಿ ಪ್ರಜೆ ಎಂದು ವರದಿ ಮಾಡಿದ್ದವು, ಆದರೆ ಪೊಲೀಸರು ಈಗ ಆ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಕಳೆದ ಭಾನುವಾರ ಸಿಡ್ನಿಯ ಬಾಂಡಿ ಬೀಚ್‌ನಲ್ಲಿ ಹನುಕ್ಕಾ ಹಬ್ಬದ ಆಚರಣೆಯ ವೇಳೆ ಸಾಜಿದ್ ಅಕ್ರಮ್ ಮತ್ತು ಆತನ 24 ವರ್ಷದ ಪುತ್ರ ನವೀದ್ ಮನಬಂದಂತೆ ಗುಂಡು ಹಾರಿಸಿದ್ದರು. ಈ ದಾಳಿಯಲ್ಲಿ 16 ಜನರು ಸಾವಿಗೀಡಾಗಿದ್ದಾರೆ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಸಾಜಿದ್ ಅಕ್ರಮ್ ಹತನಾಗಿದ್ದು, ಆತನ ಮಗ ನವೀದ್ ಗಾಯಗೊಂಡಿದ್ದಾನೆ. ಈ ಘಟನೆಯನ್ನು ಆಸ್ಟ್ರೇಲಿಯಾ ಸರ್ಕಾರವು ‘ಭಯೋತ್ಪಾದನಾ ದಾಳಿ’ ಎಂದು ಘೋಷಿಸಿದ್ದು, ಇವರಿಬ್ಬರು ಐಸಿಸ್ (ISIS) ಸಿದ್ಧಾಂತದಿಂದ ಪ್ರೇರಿತರಾಗಿದ್ದರು ಎಂದು ವರದಿಯಾಗಿದೆ.
ಹೈದರಾಬಾದ್‌ನಿಂದ ಆಸ್ಟ್ರೇಲಿಯಾಕ್ಕೆ ವಲಸೆ:
ಸಾಜಿದ್ ಅಕ್ರಮ್ ಹೈದರಾಬಾದ್‌ನಲ್ಲಿ ಬಿ.ಕಾಂ ಪದವಿ ಮುಗಿಸಿ, ಉದ್ಯೋಗದ ಹುಡುಕಾಟದಲ್ಲಿ 1998ರಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ. ಅಲ್ಲಿ ಯುರೋಪಿಯನ್ ಮೂಲದ ವೆನೆರಾ ಗ್ರೊಸೊ ಅವರನ್ನು ವಿವಾಹವಾಗಿದ್ದಾನೆ. ಈತನಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ. ಸಾಜಿದ್ ಇನ್ನೂ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೂ, ಆತನ ಮಕ್ಕಳು ಆಸ್ಟ್ರೇಲಿಯಾದಲ್ಲಿ ಜನಿಸಿದ ಕಾರಣ ಅವರು ಆ ದೇಶದ ಪೌರತ್ವ ಹೊಂದಿದ್ದಾರೆ.
ಭಾರತದೊಂದಿಗೆ ಕಡಿಮೆ ಸಂಪರ್ಕ:
ಕಳೆದ 27 ವರ್ಷಗಳಲ್ಲಿ ಸಾಜಿದ್ ಕೇವಲ 6 ಬಾರಿ ಮಾತ್ರ ಭಾರತಕ್ಕೆ ಭೇಟಿ ನೀಡಿದ್ದ. ಕುಟುಂಬದ ಆಸ್ತಿ ವಿಚಾರ ಅಥವಾ ಪೋಷಕರನ್ನು ನೋಡಲು ಹಾಗೂ ವೈಯಕ್ತಿಕ ಕಾರಣಕ್ಕೆ ಮಾತ್ರ ಆತ ಬಂದಿದ್ದ. ಆದರೆ, ತನ್ನ ತಂದೆ ನಿಧನರಾದಾಗಲೂ ಆತ ಭಾರತಕ್ಕೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮ್ ತೆಲಂಗಾಣದಲ್ಲಿ ಯಾವುದೇ ಕ್ರಿಮಿನಲ್ ಅಥವಾ ಪ್ರತಿಕೂಲ ದಾಖಲೆಯನ್ನು ಹೊಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಬದಲಾವಣೆಗಳು ವಿದೇಶದಲ್ಲೇ ನಡೆದಿವೆ ಎಂದು ತೆಲಂಗಾಣ ಪೊಲೀಸರು ಸ್ಪಷ್ಟಪಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ