11 ದಿನದಲ್ಲಿ ಹಣ ದುಪ್ಪಟ್ಟು ಮಾಡುವ ಆಸೆಗೆ ಬಿದ್ದು ₹12.31 ಕೋಟಿ ಕಳೆದುಕೊಂಡ ವೈದ್ಯ…!

ಪುಣೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕೇವಲ 11 ದಿನಗಳಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ, 75 ವರ್ಷದ ಹಿರಿಯ ವೈದ್ಯರೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 12.31 ಕೋಟಿ ರೂಪಾಯಿ ವಂಚಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ.
ಈ ವರ್ಷದ ಜನವರಿಯಲ್ಲಿ ಈ ವೈದ್ಯರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ ಷೇರು ಮಾರುಕಟ್ಟೆ ಹೂಡಿಕೆಯ ಮೂಲಕ ಅತೀ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷ ಒಡ್ಡಲಾಗಿತ್ತು. ವೈದ್ಯರು ಆಸಕ್ತಿ ತೋರಿಸುತ್ತಿದ್ದಂತೆಯೇ, ವಂಚಕರು ಅವರನ್ನು “VIP Stock 24” ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿಕೊಂಡಿದ್ದರು.
ವಂಚನೆಯ ಜಾಲ  
ಆಕರ್ಷಕ ಹೂಡಿಕೆ ಯೋಜನೆ ಆಮಿಷ ಒಡ್ಡಿದ್ದ ವಂಚಕರು, “ನಮ್ಮ ಸೂಚನೆಯಂತೆ ಹೂಡಿಕೆ ಮಾಡಿದರೆ ನಿಮ್ಮ ಹಣ 11 ದಿನಗಳಲ್ಲಿ ದುಪ್ಪಟ್ಟಾಗುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಹೂಡಿಕೆಯು ₹54 ಕೋಟಿ ಲಾಭ ತಂದುಕೊಡಲಿದೆ” ಎಂದು ನಂಬಿಸಿದ್ದರು. ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆಯ ಹೆಸರನ್ನು ಹೋಲುವ ನಕಲಿ ಟ್ರೇಡಿಂಗ್ ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡುವಂತೆ ವೈದ್ಯರಿಗೆ ಸೂಚಿಸಲಾಗಿತ್ತು. ಅವರ ವೈಯಕ್ತಿಕ ಮತ್ತು ಆರ್ಥಿಕ ವಿವರಗಳನ್ನು ಹಂಚಿಕೊಳ್ಳಲು ಸೂಚಿಸಲಾಯತು ಮತ್ತು ನಂತರ ಹಲವಾರು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಸೂಚಿಸಲಾಯಿತು. ಅವರು ಕಳುಹಿಸಿದ ಮೊತ್ತವನ್ನು ನಕಲಿ ಅಪ್ಲಿಕೇಶನ್‌ನಲ್ಲಿ ಹೂಡಿಕೆಗಳಂತೆ ಅವರಿಗೆ ತೋರಿಸಲಾಯಿತು. ವೈದ್ಯರು ಹಣ ವರ್ಗಾಯಿಸಿದಾಗಲೆಲ್ಲಾ, ಆ ನಕಲಿ ಆ್ಯಪ್‌ನಲ್ಲಿ ಅವರ ಹೂಡಿಕೆ ಮತ್ತು ಅದಕ್ಕೆ ಬಂದಿರುವ ಭಾರಿ ಲಾಭವನ್ನು ನೈಜವಾಗಿ ಕಾಣುವಂತೆ ಬಿಂಬಿಸಲಾಗುತ್ತಿತ್ತು.
8 ವಹಿವಾಟು, ₹12.31 ಕೋಟಿ ವರ್ಗಾವಣೆ!
ಮಾರ್ಚ್ 7 ರಿಂದ ಮಾರ್ಚ್ 18 ರ ನಡುವೆ ವೈದ್ಯರು ಕೇವಲ ಎಂಟು ವಹಿವಾಟುಗಳಲ್ಲಿ ಒಟ್ಟು ₹12.31 ಕೋಟಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಒಂದು ಹಂತದಲ್ಲಿ ವೈದ್ಯರು ಹಣ ಹೂಡಲು ಹಿಂಜರಿದಾಗ, ವಂಚಕರು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಸುಮಾರು ಮೂರು ತಿಂಗಳ ಕಾಲ ಹಣ ವರ್ಗಾಯಿಸುತ್ತಲೇ ಇದ್ದ ವೈದ್ಯರಿಗೆ, ಕೊನೆಗೆ ಯಾವುದೇ ಹಣ ವಾಪಸ್ ಬರದಿದ್ದಾಗ ತಾವು ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರು ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಸದ್ಯ ಸೈಬರ್ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದು, ಹಣದ ಮೂಲ ಮತ್ತು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement