ನೀಲಿ ಡ್ರಮ್ ಕೊಲೆ ಪ್ರಕರಣ : ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ ಶಿಕ್ಷೆ

ಉತ್ತರ ಪ್ರದೇಶದ ಮೀರತ್‌ನಲ್ಲಿ ಕಳೆದ ವರ್ಷ ನಡೆದಿದ್ದ ನೌಕಾಪಡೆಯ ವಾಣಿಜ್ಯ ಅಧಿಕಾರಿ ಸೌರಭ್‌ ರಜಪೂತ್‌ ಅವರ ಕೊಲೆ ಪ್ರಕರಣದಲ್ಲಿ ಪತ್ನಿ ಮುಸ್ಕಾನ್‌ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾ ಅವರಿಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಇಬ್ಬರನ್ನೂ ಎರಡು ವಾರಗಳ ಹಿಂದೆಯೇ ದೋಷಿಗಳೆಂದು ಘೋಷಿಸಲಾಗಿತ್ತು. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ.
ಸೌರಭ್‌ ಅವರ ದೇಹವನ್ನು ತುಂಡರಿಸಿ, ಕಾಂಕ್ರೀಟ್‌ ತುಂಬಿದ ನೀಲಿ ಬಣ್ಣದ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದ ಪ್ರಕರಣದಲ್ಲಿ, ಆ ಡ್ರಮ್‌ ಕೊಲೆಯ ಪ್ರಮುಖ ಸಾಕ್ಷ್ಯವಾಗಿ ಹೊರಹೊಮ್ಮಿತ್ತು.
126 ವಿಚಾರಣೆಗಳು ಮತ್ತು 22 ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿದ ಬಳಿಕ ಜಿಲ್ಲಾ ನ್ಯಾಯಾಧೀಶ ಅರವಿಂದಕುಮಾರ ಮಿಶ್ರಾ ಅವರು ತೀರ್ಪು ಪ್ರಕಟಿಸಿದರು. ಮುಸ್ಕಾನ್‌ ಮತ್ತು ಸಾಹಿಲ್‌ ಸೇರಿಕೊಂಡು ಸೌರಭ್‌ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಬಳಿಕ ಅವರ ದೇಹವನ್ನು ತುಂಡರಿಸಿ, ಮರಳು ಮತ್ತು ಸಿಮೆಂಟ್‌ ಮಿಶ್ರಿತ ಕಾಂಕ್ರೀಟ್‌ನೊಂದಿಗೆ ನೀಲಿ ಬಣ್ಣದ ಕೈಗಾರಿಕಾ ಡ್ರಮ್‌ನಲ್ಲಿ ತುಂಬಿ ಮುಚ್ಚಿಟ್ಟಿದ್ದರು ಎಂದು ನ್ಯಾಯಾಲಯ ಹೇಳಿದೆ. ಇಂತಹ ಅಪರಾಧಗಳು ಇಡೀ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತವೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು.

ತೀರ್ಪು ಪ್ರಕಟವಾಗುವ ಮುನ್ನ ಬುಧವಾರ ಬೆಳಗ್ಗೆ ಮುಸ್ಕಾನ್‌ ರಸ್ತೋಗಿಯ ಪೋಷಕರು ನ್ಯಾಯಾಲಯಕ್ಕೆ ಹಾಜರಾಗಿ, ಸೌರಭ್‌ ರಜಪೂತ್‌ ಒಳ್ಳೆಯ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು. ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಿದರೆ ಅದನ್ನು ತಾವು ವಿರೋಧಿಸುವುದಿಲ್ಲ ಎಂದೂ ಹೇಳಿದರು. ಜೈಲಿನಲ್ಲಿದ್ದ ಮುಸ್ಕಾನ್‌ಳನ್ನು ಆಕೆಯ ಕುಟುಂಬದವರು ಒಮ್ಮೆಯೂ ಭೇಟಿಯಾಗಿಲ್ಲ ಎಂದು ವರದಿಯಾಗಿದೆ.
ಊಟದಲ್ಲಿ ನಿದ್ರೆಮಾತ್ರೆ ಬೆರೆಸಿ ಕೊಲೆ
ಪೊಲೀಸರ ಪ್ರಕರಣದ ಪ್ರಕಾರ, 2025ರ ಮಾರ್ಚ್‌ 3ರಂದು ಮೀರತ್‌ನ ಇಂದ್ರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮುಸ್ಕಾನ್‌ ತನ್ನ ಪತಿ ಸೌರಭ್‌ ರಜಪೂತ್‌ ಅವರಿಗೆ ಊಟದಲ್ಲಿ ನಿದ್ರೆಮಾತ್ರೆ ಬೆರೆಸಿ ನೀಡಿದ್ದಳು. ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಬಂದ ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾ ಜೊತೆಗೂಡಿ ಸೌರಭ್‌ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಳು. ಬಳಿಕ ಇಬ್ಬರೂ ಸೇರಿ ಸ್ನಾನಗೃಹದಲ್ಲಿ ಸೌರಭ್‌ ದೇಹವನ್ನು ತುಂಡರಿಸಿದ್ದರು ಎಂದು ಪ್ರಾಸಿಕ್ಯೂಷನ್‌ ನ್ಯಾಯಾಲಯಕ್ಕೆ ತಿಳಿಸಿತ್ತು.

ಪ್ರಮುಖ ಸುದ್ದಿ :-   ಜಂತರ್ ಮಂತರ್‌ಗೆ ಅತಿಕ್ರಮ ಪ್ರವೇಶ : ಸಿಜೆಪಿ ನಾಯಕರಾದ ಸೌರವ ದಾಸ್, ರಾಂಕಾಗೆ 5 ದಿನ ನ್ಯಾಯಾಂಗ ಬಂಧನ

ದೇಹ ಕೊಳೆಯುವುದರಿಂದ ದುರ್ವಾಸನೆ ಹರಡುವುದನ್ನು ತಡೆಯಲು ಆರೋಪಿಗಳು ದೇಹದ ತುಂಡುಗಳನ್ನು ದೊಡ್ಡ ನೀಲಿ ಬಣ್ಣದ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ತುಂಬಿದ್ದರು. ಬಳಿಕ ಮರಳು, ನೀರು ಮತ್ತು ಸಿಮೆಂಟ್‌ ಬಳಸಿ ಹೊಸದಾಗಿ ತಯಾರಿಸಿದ ಒದ್ದೆಯಾದ ಮಿಶ್ರಣವನ್ನು ಡ್ರಮ್‌ಗೆ ಸುರಿದು, ಅದನ್ನು ಸಂಪೂರ್ಣವಾಗಿ ಮುಚ್ಚಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿತ್ತು.
ಹಿಮಾಚಲ ಪ್ರದೇಶಕ್ಕೆ ಪರಾರಿ; ಮೊಬೈಲ್‌ ಸಂದೇಶಗಳ ಮೂಲಕ ನಾಟಕ
ಕೊಲೆಯಾದ ಮರುದಿನವೇ ಮುಸ್ಕಾನ್‌ ಮತ್ತು ಸಾಹಿಲ್‌ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಈ ನಡುವೆ, ಸೌರಭ್‌ ಅವರ ಮೊಬೈಲ್‌ ಫೋನ್‌ ಬಳಸಿಕೊಂಡು ಮುಸ್ಕಾನ್‌ ಅವರ ಕುಟುಂಬದವರಿಗೆ ಸಂದೇಶಗಳನ್ನು ಕಳುಹಿಸಿದ್ದಳು. ಸೌರಭ್‌ ಜೀವಂತವಾಗಿದ್ದು, ವ್ಯವಹಾರದ ನಿಮಿತ್ತ ಪ್ರಯಾಣದಲ್ಲಿದ್ದಾರೆ ಎಂಬ ಭ್ರಮೆ ಮೂಡಿಸುವ ಪ್ರಯತ್ನವನ್ನು ಆಕೆ ಮಾಡಿದ್ದಳು. 2025ರ ಮಾರ್ಚ್‌ 17ರಂದು ಸೌರಭ್‌ ಅವರ ಸಂಬಂಧಿಕರಿಗೆ ಅನುಮಾನ ಮೂಡಿದ್ದು, ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸೌರಭ್‌ ಮತ್ತು ಮುಸ್ಕಾನ್‌ ಅವರ ಆರು ವರ್ಷದ ಮಗಳು ನೆರೆಹೊರೆಯವರ ಬಳಿ, “ಪಾಪಾ ಡ್ರಮ್‌ನಲ್ಲಿದ್ದಾರೆ” ಎಂದು ಹೇಳಿದ್ದಳು ಎನ್ನಲಾಗಿದೆ.
ಬಳಿಕ ಪೊಲೀಸರು ಮನೆಯಲ್ಲಿದ್ದ ಸೀಲ್‌ ಮಾಡಲಾದ ನೀಲಿ ಬಣ್ಣದ ಡ್ರಮ್‌ ಅನ್ನು ತೆರೆದು ಪರಿಶೀಲಿಸಿದಾಗ ಅದರೊಳಗೆ ಸೌರಭ್‌ ಅವರ ದೇಹದ ಅವಶೇಷಗಳು ಪತ್ತೆಯಾಗಿದ್ದವು. ಈ ಬೆಳವಣಿಗೆಯ ನಂತರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ತೀವ್ರಗೊಳಿಸಿ, ಎರಡು ದಿನಗಳ ಬಳಿಕ ಮುಸ್ಕಾನ್‌ ಮತ್ತು ಸಾಹಿಲ್‌ನನ್ನು ಬಂಧಿಸಿದ್ದರು.

ಪ್ರಮುಖ ಸುದ್ದಿ :-   ಚಾರಣಕ್ಕೆ ಹೋದಾಗ ಹೃದಯಾಘಾತದಿಂದ ಸಾವು ; ಮಾಲೀಕನ ಮೃತದೇಹ ಬಿಟ್ಟು ಕದಲದೇ ಕೊನೆಯವರೆಗೂ ಹೆಜ್ಜೆ ಹಾಕಿದ ನಾಯಿ !

ಅಂಗಡಿಕಾರರ ಹೇಳಿಕೆ, ಮೊಬೈಲ್‌ ದಾಖಲೆಗಳೇ ಪ್ರಮುಖ ಸಾಕ್ಷ್ಯ
ಪ್ರಕರಣದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರವಾಗಿ ಸಾಂದರ್ಭಿಕ, ತಾಂತ್ರಿಕ ಹಾಗೂ ಭೌತಿಕ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗಿತ್ತು. ಕೊಲೆಗೆ ಮುನ್ನ ಮುಸ್ಕಾನ್‌ ಮತ್ತು ಸಾಹಿಲ್‌ ನೀಲಿ ಬಣ್ಣದ ನಿರ್ದಿಷ್ಟ ಪ್ಲಾಸ್ಟಿಕ್‌ ಡ್ರಮ್‌, ಸಿಮೆಂಟ್‌ ಚೀಲಗಳು, ಮರಳು, ಮಾಂಸ ಕತ್ತರಿಸುವ ಚಾಕುಗಳು ಹಾಗೂ ರೇಜರ್‌ಗಳನ್ನು ಖರೀದಿಸಿದ್ದರು ಎಂದು ಸ್ಥಳೀಯ ಅಂಗಡಿಕಾರರು ಸಾಕ್ಷ್ಯ ನುಡಿದಿದ್ದರು.
ಆರೋಪಿಗಳ ದೂರವಾಣಿ ಕರೆಗಳ ವಿವರಗಳು (ಕಾಲ್‌ ಡಿಟೇಲ್‌ ರೆಕಾರ್ಡ್ಸ್‌) ಮತ್ತು ಮೊಬೈಲ್‌ ಸಿಗ್ನಲ್‌ ಟವರ್‌ಗಳ ಸ್ಥಳದ ದಾಖಲೆಗಳು ಕೂಡ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಕೊಲೆ ನಡೆದ ಸಮಯದಲ್ಲಿ ಸೌರಭ್‌ ಅವರ ಮನೆಯಲ್ಲಿ ಸಾಹಿಲ್‌ ಶುಕ್ಲಾ ಇದ್ದುದನ್ನು ದಾಖಲೆಗಳು ಸೂಚಿಸಿದ್ದವು. ಅಲ್ಲದೆ, ಇಬ್ಬರೂ ಒಟ್ಟಿಗೆ ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಮನಾಲಿಗೆ ತೆರಳಿ ಹೋಟೆಲ್‌ಗಳಲ್ಲಿ ತಂಗಿದ್ದ ಚಲನವಲನಗಳನ್ನೂ ಮೊಬೈಲ್‌ ದಾಖಲೆಗಳ ಮೂಲಕ ಪತ್ತೆಹಚ್ಚಲಾಗಿತ್ತು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿಯೂ ಸೌರಭ್‌ ರಜಪೂತ್ ಚೂರಿ‌ ಇರಿತಕ್ಕೊಳಗಾಗಿ ಮೃತಪಟ್ಟಿರುವುದು ದೃಢಪಟ್ಟಿತ್ತು. ಈ ಎಲ್ಲ ಸಾಕ್ಷ್ಯಗಳನ್ನು ಆಧರಿಸಿ ನ್ಯಾಯಾಲಯ ಮುಸ್ಕಾನ್‌ ರಸ್ತೋಗಿ ಮತ್ತು ಸಾಹಿಲ್‌ ಶುಕ್ಲಾ ಅವರನ್ನು ದೋಷಿಗಳೆಂದು ಪರಿಗಣಿಸಿ ಮರಣದಂಡನೆ ವಿಧಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement