ಡೇರಾ ಇಸ್ಮಾಯಿಲ್ ಖಾನ್: ಪಾಕಿಸ್ತಾನದ ವಾಯವ್ಯ ಭಾಗದಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಶನಿವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಸ್ತೆ ಬದಿಯಲ್ಲಿದ್ದ ಪೊಲೀಸ್ ಚೆಕ್ಪೋಸ್ಟ್ ಬಳಿ ಸ್ಫೋಟಕ ತುಂಬಿದ್ದ ವಾಹನವನ್ನು ಆತ್ಮಾಹುತಿ ಬಾಂಬರ್ ಸ್ಫೋಟಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಹಾಗೂ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಕಸ್ಟಮ್ಸ್ ಮತ್ತು ಅಬಕಾರಿ ಇಲಾಖೆಯ ಇಬ್ಬರು ಅಧಿಕಾರಿಗಳೂ ಸೇರಿದ್ದಾರೆ. ದಾಳಿಯಲ್ಲಿ ಬಳಸಲಾದ ಸ್ಫೋಟಕದ ಸ್ವರೂಪವನ್ನು ಪತ್ತೆಹಚ್ಚಲು ಪೊಲೀಸರು ಬಾಂಬ್ ನಿಷ್ಕ್ರಿಯ ದಳಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಘಟನೆ ಕುರಿತು ಮಾಹಿತಿ ದೊರೆತ ತಕ್ಷಣ ದರಾಜಿಂದಾ ರಕ್ಷಣಾ ಠಾಣೆಯ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಗಾಯಾಳುಗಳಿಗೆ ಸ್ಥಳದಲ್ಲೇ ವೈದ್ಯಕೀಯ ನೆರವು ನೀಡಿ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ರಕ್ಷಣಾ ಸೇವೆ ತಿಳಿಸಿದೆ.
ಈ ದಾಳಿಯ ಹೊಣೆಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಅಥವಾ ಪಾಕಿಸ್ತಾನಿ ತಾಲಿಬಾನ್ ಹೊತ್ತುಕೊಂಡಿದೆ. ಈ ಸಂಘಟನೆ ಅಫ್ಘಾನಿಸ್ತಾನದಲ್ಲಿ 2021ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಅಫ್ಘಾನ್ ತಾಲಿಬಾನ್ನಿಂದ ಪ್ರತ್ಯೇಕವಾಗಿದ್ದರೂ, ಅದರೊಂದಿಗೆ ಮೈತ್ರಿ ಹೊಂದಿದೆ.
ಬಾಂಬ್ ದಾಳಿ ನಡೆದ ಸ್ಥಳಕ್ಕೆ ತೆರಳಿದ್ದ ಆಂಬ್ಯುಲೆನ್ಸ್ ಮೇಲೂ ಗುಂಡಿನ ದಾಳಿ
ಆತ್ಮಾಹುತಿ ಬಾಂಬ್ ದಾಳಿ ನಡೆದ ಸ್ಥಳಕ್ಕೆ ಗಾಯಾಳುಗಳನ್ನು ರಕ್ಷಿಸಲು ತೆರಳಿದ್ದ ಆಂಬ್ಯುಲೆನ್ಸ್ ಮೇಲೂ ಬಳಿಕ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಂತ್ಯದ ತುರ್ತು ಸೇವೆಯ ವಕ್ತಾರ ಬಿಲಾಲ್ ಫೈಝಿ ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಸ್ಥಳೀಯ ಪೊಲೀಸ್ ಮುಖ್ಯಸ್ಥ ಸಫ್ದರ್ ಬಲೋಚ್ ಅವರ ಪ್ರಕಾರ, ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಭದ್ರತಾ ಸಿಬ್ಬಂದಿ ಹಾಗೂ ದಾರಿಹೋಕರು.
ಈ ತಿಂಗಳು ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಇಂತಹ ಹಲವು ಭದ್ರತಾ ಘಟನೆಗಳು ನಡೆದಿವೆ.
ಅವುಗಳಲ್ಲಿ ಪಾಕಿಸ್ತಾನಿ ತಾಲಿಬಾನ್ ನಡೆಸಿದ ದಾಳಿಗಳೂ ಸೇರಿವೆ. ಇದಕ್ಕೂ ಒಂದು ವಾರದ ಹಿಂದೆ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಅಫ್ಘಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ಕೊಹಾಟ್ ಜಿಲ್ಲೆಯಲ್ಲಿ ಇದೇ ರೀತಿಯ ದಾಳಿ ನಡೆದಿತ್ತು. ಆಗ ಸ್ಫೋಟಕ ತುಂಬಿದ್ದ ವಾಹನವನ್ನು ದಾಳಿಕೋರ ಮಸೀದಿಗೆ ನುಗ್ಗಿಸಿ ಸ್ಫೋಟಿಸಿದ್ದ. ಪರಿಣಾಮ ಪೊಲೀಸ್ ಕಚೇರಿಗಳು ಹೊಂದಿರುವ ಕಟ್ಟಡದ ಹೊರಗೋಡೆ ಕುಸಿದು, ಮಸೀದಿಗೂ ಭಾರೀ ಹಾನಿಯಾಗಿತ್ತು.
ಆ ದಾಳಿಯಲ್ಲಿ ಮಸೀದಿಯೊಳಗೆ ಬಾಂಬ್ ಸ್ಫೋಟಗೊಂಡ ಪರಿಣಾಮ 21 ಮಂದಿ ಮೃತಪಟ್ಟಿದ್ದು, 78 ಮಂದಿ ಗಾಯಗೊಂಡಿದ್ದರು. ಮೃತರಲ್ಲಿ 15 ಮಂದಿ ಪೊಲೀಸ್ ಅಧಿಕಾರಿಗಳಿದ್ದರು. ಪೊಲೀಸ್ ಕಚೇರಿಗಳಿರುವ ಕಟ್ಟಡದ ಸಮೀಪವೇ ಮಸೀದಿ ಇದ್ದ ಕಾರಣ ದಾಳಿಯ ವೇಳೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಹಾನಿಗೊಳಗಾಗಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ