ತ್ವಿಶಾ ಶರ್ಮಾ ಸಾವಿನ ಪ್ರಕರಣ ; ಪ್ರಮುಖ ಸಾಕ್ಷಿಯ ಮೇಲೆ ಹಲ್ಲೆ, ಬೆದರಿಕೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೋಪಾಲ್ : ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ತ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆರೋಪಿ ಸಮರ್ಥ ಸಿಂಗ್‌ನ ಸ್ನೇಹಿತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರು ಆರೋಪಿಸಿದ್ದಾರೆ. ಯುವತಿಯ ಕುಟುಂಬಸ್ಥರು ನೀಡಿರುವ ವರದಕ್ಷಿಣೆ ಕಿರುಕುಳದ ದೂರಿನ ತನಿಖೆ ತೀವ್ರ ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.
ಆರೋಪಿ ಸಮರ್ಥ ಸಿಂಗ್ ಮನೆಯ ಸಮೀಪವೇ ಸಲೂನ್ ನಡೆಸುತ್ತಿರುವ ನೀರಜ ದುಬೆ ಎಂಬವರು ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿರುವ ಪ್ರಮುಖ ಸಾಕ್ಷಿಯಾಗಿದ್ದಾರೆ. ಮೇ 30 ರಂದು ಸಮರ್ಥನ ಸ್ನೇಹಿತರು ತನ್ನ ಮೇಲೆ ಹಲ್ಲೆ ನಡೆಸಿದ್ದು, ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯದಂತೆ ಒತ್ತಡ ಹೇರಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ.

ನೀರಜ ದುಬೆ ಅವರ ಮೇಲೆ ಹಲ್ಲೆ ನಡೆಸಿರುವುದು ಎನ್ನಲಾದ ವಿಡಿಯೊವೊಂದು ಸಾಮಾಜಿ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ನಾಲ್ಕೈದು ಜನ ಪುರುಷರು ದುಬೆ ಅವರನ್ನು ಸುತ್ತುವರೆದಾಗ ತನ್ನನ್ನು ತಾನು ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ನಾಲ್ಕೈದು ಜನರ ಗುಂಪು ತಮ್ಮನ್ನು ಸುತ್ತುವರೆದು ಪ್ರಕರಣದಲ್ಲಿ ನೀವು ಏಕೆ ಸಾಕ್ಷಿಯಾಗಿದ್ದೀರಿ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು ಎಂದು ದುಬೆ ಆರೋಪಿಸಿದ್ದಾರೆ, ನಾಲ್ಕೈದು ಜನರ ಮಧ್ಯೆ ಸಿಲುಕಿದ ದುಬೆ, ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. “ಈ ದಾಳಿಯಿಂದಾಗಿ ನನ್ನ ಜೀವಕ್ಕೆ ತೀವ್ರ ಆಪತ್ತಿದೆ. ನನಗೆ ಪೊಲೀಸ್ ರಕ್ಷಣೆ ಬೇಕು ಮತ್ತು ನ್ಯಾಯ ಸಿಗಬೇಕು” ಎಂದು ಸಂತ್ರಸ್ತ ನೀರಜ ದುಬೆ ಆತಂಕ ವ್ಯಕ್ತಪಡಿಸಿದ್ದಾರೆ.

ತನಿಖೆ ಚುರುಕುಗೊಳಿಸಿದ ಪೊಲೀಸರು
ಘಟನೆ ನಡೆದ ತಕ್ಷಣವೇ ನೀರಜ ದುಬೆ ಅವರು ಕಟಾರಾ ಹಿಲ್ಸ್ ಪೊಲೀಸ್ ಠಾಣೆಗೆ ಧಾವಿಸಿ ಲಿಖಿತ ದೂರು ನೀಡಿದ್ದಾರೆ. ದಾಳಿ ನಡೆಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಸದ್ಯ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಹಲ್ಲೆಕೋರರನ್ನು ಗುರುತಿಸಲು ಜಾಲ ಬೀಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಕಳೆದ ಏಪ್ರಿಲ್ 12 ರಂದು ತ್ವಿಶಾ ಶರ್ಮಾ ತಮ್ಮ ಗಂಡನ ಮನೆಯಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ತ್ವಿಶಾ ಕುಟುಂಬಸ್ಥರು, ಆಕೆಯ ಪತಿ ಸಮರ್ಥ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಸಾವಿನ ಆರೋಪ ಹೊರಿಸಿದ್ದರು.
ಪ್ರಸ್ತುತ ತಾಯಿ ಮತ್ತು ಮಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಕಟಾರಾ ಹಿಲ್ಸ್‌ನಲ್ಲಿರುವ ಅವರ ನಿವಾಸಕ್ಕೆ ಇಬ್ಬರು ಆರೋಪಿಗಳನ್ನು ಕರೆತಂದಿದ್ದ ಪೊಲೀಸರು, ತ್ವಿಶಾ ಶರ್ಮಾ ಮೃತಪಟ್ಟ ಅಂದಿನ ರಾತ್ರಿ ಏನಾಗಿತ್ತು ಎಂಬುದನ್ನು ಪತ್ತೆಹಚ್ಚಲು ಅಪರಾಧದ ದೃಶ್ಯವನ್ನು ಮರುಸೃಷ್ಟಿ (Crime Scene Recreation) ಮಾಡಿ ತನಿಖೆ ನಡೆಸಿದ್ದಾರೆ. ಈ ಬೆನ್ನಲ್ಲೇ ಸಾಕ್ಷಿಯ ಮೇಲೆ ಹಲ್ಲೆ ನಡೆದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement