ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಸೋಮವಾರ ತಿರಸ್ಕರಿಸಿದರು. ಕೇಜ್ರಿವಾಲ್ ಅವರ ಆರೋಪವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು, ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು (Recusal) ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಸುಮಾರು 90 ನಿಮಿಷಗಳ ಕಾಲ ಸುದೀರ್ಘವಾಗಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಶರ್ಮಾ, “ನ್ಯಾಯವು ಯಾವುದೇ ಒತ್ತಡಕ್ಕೆ ಬಗ್ಗುವುದಿಲ್ಲ. ಅಪನಂಬಿಕೆಯ ಬೀಜಗಳನ್ನು ಬಿತ್ತಲು ನ್ಯಾಯಾಂಗದ ಬಾಗಿಲುಗಳನ್ನು ತೆರೆಯಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು. ಕೇಜ್ರಿವಾಲ ಅವರು ನ್ಯಾಯಮೂರ್ತಿಗಳ ರಾಜಕೀಯ ಸಿದ್ಧಾಂತದ ಬಗ್ಗೆ ಮಾಡಿದ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
“ನನ್ನ ಪ್ರಮಾಣವಚನ ಸಂವಿಧಾನಕ್ಕೆ ಬದ್ಧವಾಗಿದೆ. ನ್ಯಾಯವು ಒತ್ತಡಕ್ಕೆ ಮಣಿಯುವುದಿಲ್ಲ ಎಂಬುದನ್ನು ಅದು ನನಗೆ ಕಲಿಸಿಕೊಟ್ಟಿದೆ. ಯಾವುದೇ ಪೂರ್ವಾಗ್ರಹವಿಲ್ಲದೆ, ನಿರ್ಭಯವಾಗಿ ನಾನು ತೀರ್ಪು ನೀಡುತ್ತೇನೆ. ಈ ಪ್ರಕರಣದಿಂದ ನಾನು ಹಿಂದೆ ಸರಿಯುವುದಿಲ್ಲ,” ಎಂದು ಅವರು ಪ್ರಕಟಿಸಿದರು.
ಕೇಜ್ರಿವಾಲ್ ಅರ್ಜಿಯಲ್ಲಿದ್ದ ಪ್ರಮುಖ ಆರೋಪಗಳೇನು?
ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ನಡೆಸಬಾರದು ಎಂದು ಕೇಜ್ರಿವಾಲ್ ಮನವಿ ಮಾಡಿದ್ದರು. ಅದಕ್ಕೆ ಅವರು ಕೆಲವು ಆರೋಪಗಳನ್ನು ಮಾಡಿದ್ದರು. ನ್ಯಾಯಮೂರ್ತಿಗಳು ಅಖಿಲ ಭಾರತೀಯ ಅಧಿವಕ್ತಾ ಪರಿಷತ್ (ABAP) ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ, ಇದು ಸೈದ್ಧಾಂತಿಕ ಪೂರ್ವಾಗ್ರಹಕ್ಕೆ ಸಾಕ್ಷಿ.
ನ್ಯಾಯಮೂರ್ತಿಗಳ ಮಕ್ಕಳು ಕೇಂದ್ರ ಸರ್ಕಾರದ ಪ್ಯಾನಲ್ ಕೌನ್ಸಿಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಇದು ಹಿತಾಸಕ್ತಿ ಸಂಘರ್ಷಕ್ಕೆ (Conflict of Interest) ಕಾರಣವಾಗಬಹುದು. ತಮಗೆ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆ ಸಿಗುವುದಿಲ್ಲ ಎಂಬ ಭಯವಿದೆ.
ಆರೋಪಗಳನ್ನು ತಳ್ಳಿಹಾಕಿದ ನ್ಯಾಯಾಲಯ
ಕೇಜ್ರಿವಾಲ್ ಅವರ ಪ್ರತಿಯೊಂದು ವಾದವನ್ನೂ ನ್ಯಾಯಮೂರ್ತಿಗಳು ತರ್ಕಬದ್ಧವಾಗಿ ತಳ್ಳಿಹಾಕಿದರು. ಅಖಿಲ ಭಾರತೀಯ ಅಧಿವಕ್ತಾ ಪರಿಷತ್ (ABAP) ಆಯೋಜಿಸಿದ್ದ ಕಾರ್ಯಕ್ರಮಗಳು ಹೊಸ ಕ್ರಿಮಿನಲ್ ಕಾನೂನುಗಳು ಮತ್ತು ಮಹಿಳಾ ದಿನಾಚರಣೆಗೆ ಸಂಬಂಧಿಸಿದ್ದವೇ ಹೊರತು ಅವು ರಾಜಕೀಯ ಕಾರ್ಯಕ್ರಮಗಳಲ್ಲ. ಅನೇಕ ನ್ಯಾಯಾಧೀಶರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮಕ್ಕಳ ವೃತ್ತಿಜೀವನದ ಬಗ್ಗೆ ಹೇಳಿದ ಅವರು,”ರಾಜಕಾರಣಿಗಳ ಪತ್ನಿ ಮತ್ತು ಮಕ್ಕಳು ರಾಜಕೀಯಕ್ಕೆ ಬರಬಹುದಾದರೆ, ನ್ಯಾಯಾಧೀಶರ ಮಕ್ಕಳು ಕಾನೂನು ವೃತ್ತಿಯನ್ನು ಏಕೆ ಮಾಡಬಾರದು? ಮಕ್ಕಳ ವೃತ್ತಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
ಈ ಅರ್ಜಿಯು ನ್ಯಾಯಾಂಗವನ್ನೇ ವಿಚಾರಣೆಗೆ ಒಳಪಡಿಸುವಂತಿದೆ. ನ್ಯಾಯಾಧೀಶರು ಹಿಂದೆ ಸರಿಯುವುದು ಸುಲಭದ ದಾರಿ, ಆದರೆ ಅದು ಕರ್ತವ್ಯ ಲೋಪ ಮತ್ತು ಶರಣಾಗತಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
‘ಕ್ಯಾಚ್-22’ ಪರಿಸ್ಥಿತಿ
ಈ ಪರಿಸ್ಥಿತಿಯನ್ನು ‘ಕ್ಯಾಚ್-22’ ಎಂದು ಬಣ್ಣಿಸಿದ ನ್ಯಾಯಮೂರ್ತಿಗಳು, “ನಾನು ಹಿಂದೆ ಸರಿದರೂ ಅಥವಾ ಸರಿಯದಿದ್ದರೂ ಪ್ರಶ್ನೆಗಳು ಉದ್ಭವಿಸುವಂತೆ ಅರ್ಜಿದಾರರು ಮಾಡಿದ್ದಾರೆ. ನ್ಯಾಯಾಲಯವು ಗ್ರಹಿಕೆಗಳ ರಂಗಸ್ಥಳವಾಗಬಾರದು” ಎಂದರು. ಅಲ್ಲದೆ, ಮಾಧ್ಯಮಗಳ ಮೂಲಕ ಸೃಷ್ಟಿಸುವ ನಿರೂಪಣೆಗಳಿಗೆ (Media driven narrative) ನ್ಯಾಯಾಲಯ ಮಣಿಯುವುದಿಲ್ಲ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ
ಫೆಬ್ರವರಿ 27 ರಂದು ವಿಚಾರಣಾ ನ್ಯಾಯಾಲಯವು ಮದ್ಯ ನೀತಿ ಹಗರಣದಲ್ಲಿ ಕೇಜ್ರಿವಾಲ್ ಸೇರಿದಂತೆ 23 ಜನರನ್ನು ದೋಷಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು. ಮಾರ್ಚ್ 9 ರಂದು ನ್ಯಾಯಮೂರ್ತಿ ಶರ್ಮಾ ಅವರು ಸಿಬಿಐ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದಲ್ಲದೆ, ಕೆಳಹಂತದ ನ್ಯಾಯಾಲಯದ ಆದೇಶದಲ್ಲಿನ ಕೆಲವು ಲೋಪಗಳನ್ನು ಎತ್ತಿ ತೋರಿಸಿದ್ದರು. ಕೇಜ್ರಿವಾಲ ನ್ಯಾಯಮೂರ್ತಿಗಳ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ