ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಶನಿವಾರ ಭೀಕರ ಘಟನೆಯೊಂದು ನಡೆದಿದೆ. ಮುಂಜಾನೆಯ ವಾಕಿಂಗ್‌ಗೆ (Morning Walk) ತೆರಳಿದ್ದ ಹಿರಿಯ ವಕೀಲರೊಬ್ಬರನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆದರೆ, ಕೊಲೆ ಮಾಡಿದ ನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಶೂಟರ್‌ಗಳ ಬೈಕ್ ಸ್ಟಾರ್ಟ್ ಆಗದೆ ಕೆಲ ಕಾಲ ಆತಂಕಕ್ಕೆ ಒಳಗಾದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
40 ವರ್ಷದ ಹಿರಿಯ ವಕೀಲ ರಾಜೀವ ಸಿಂಗ್ ಅವರು ಶನಿವಾರ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಒಬ್ಬ ಕೆಳಗಿಳಿದು ನಾಡ ಪಿಸ್ತೂಲಿನಿಂದ (Crude Pistol) ಸಿಂಗ್ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಸಿಂಗ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೈಕೊಟ್ಟ ಬೈಕ್, ಹಂತಕರಲ್ಲಿ ಹೆಚ್ಚಿದ ನಡುಕ
ಗುಂಡು ಹಾರಿಸಿದ ನಂತರ ಹಂತಕನು ಓಡಿ ಬಂದು ಬೈಕ್ ಹತ್ತಿದ್ದಾನೆ. ಆದರೆ, ಅವರು ಪರಾರಿಯಾಗಬೇಕಿದ್ದ ಬೈಕ್ ಸ್ಟಾರ್ಟ್ ಆಗಲೇ ಇಲ್ಲ. ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಸತತವಾಗಿ ‘ಕಿಕ್’ ಹೊಡೆದರೂ ವಾಹನ ಚಾಲನೆಯಾಗಲಿಲ್ಲ. ಈ ವೇಳೆ ಸಾರ್ವಜನಿಕರು ಹತ್ತಿರ ಬರಲು ಪ್ರಯತ್ನಿಸಿದಾಗ, ಹಂತಕನು ಅವರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದಾನೆ. ಸುಮಾರು ಎರಡು ನಿಮಿಷಗಳ ಸತತ ಪ್ರಯತ್ನದ ನಂತರ ಕೊನೆಗೂ ಬೈಕ್ ಸ್ಟಾರ್ಟ್ ಆಗಿದ್ದು, ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸ್ ತನಿಖೆ
ಘಟನೆಯ ನಂತರ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿ ಆರೋಪಿಗಳ ಬಂಧನಕ್ಕಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಗ್ರಾಮದೊಳಗಿನ ಹಳೆಯ ದ್ವೇಷ ಅಥವಾ ವಿವಾದದಿಂದ ನಡೆದ ಹತ್ಯೆ ಎಂದು ಶಂಕಿಸಲಾಗಿದೆ. “ನಮಗೆ ಬಲವಾದ ಸುಳಿವುಗಳು ಸಿಕ್ಕಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೃತ ರಾಜೀವ ಸಿಂಗ್ ಅವರು ಈ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ತಮಗೆ ಜೀವ ಬೆದರಿಕೆ ಇದೆ ಮತ್ತು ತಮ್ಮ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಈ ಹಿಂದೆಯೇ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಿಂದೆ ಕೂಡ ಅವರ ಮೇಲೆ ಎರಡು ಬಾರಿ ದಾಳಿ ಯತ್ನ ನಡೆದಿತ್ತು ಎಂದು ತಿಳಿದುಬಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ