ದೆಹಲಿ ಬ್ರಿಕ್ಸ್ ಶೃಂಗಸಭೆಗೆ ವಿಶ್ವ ನಾಯಕರ ದಂಡು : ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಿಂದ ಚೀನಾ ಅಧ್ಯಕ್ಷರವರೆಗೆ ಯಾರೆಲ್ಲಾ ಬರ್ತಾರೆ?

ನವದೆಹಲಿ: ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜಾಗಿದೆ. ಜಗತ್ತಿನ ಹಲವು ಪ್ರಮುಖ ರಾಷ್ಟ್ರಗಳ ನಾಯಕರು ಹಾಗೂ ಉನ್ನತ ಮಟ್ಟದ ಪ್ರತಿನಿಧಿ ಮಂಡಳಿಗಳು ಗುರುವಾರ ತಡರಾತ್ರಿಯಿಂದ ಶುಕ್ರವಾರದವರೆಗೆ ದೆಹಲಿಗೆ ಆಗಮಿಸುತ್ತಿದ್ದು, ನಗರದಲ್ಲಿ ಭದ್ರತಾ ವ್ಯವಸ್ಥೆಯನ್ನು ಅಭೂತಪೂರ್ವವಾಗಿ ಬಿಗಿಗೊಳಿಸಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಅಬುಧಾಬಿ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್ ಅಲಿ ಹಾಗೂ ವಿಯೆಟ್ನಾಂ ಪ್ರಧಾನಿ ಲೆ ಮಿನ್ ಹಂಗ್ ಸೇರಿದಂತೆ ಹಲವು ಗಣ್ಯರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಷ್ಯಾ, ಚೀನಾ, ಇರಾನ್ ಮತ್ತು ಯುಎಇ ಸೇರಿದಂತೆ ಹಲವು ದೇಶಗಳ ಉನ್ನತ ನಾಯಕರು ದೆಹಲಿಯ ವಿವಿಧ ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಲಿದ್ದು, ಅವರ ಆತಿಥ್ಯಕ್ಕಾಗಿ ಆಹಾರ, ವಸತಿ, ಅತಿಥಿ ಸೇವೆ ಹಾಗೂ ಸಂಚಾರ ವ್ಯವಸ್ಥೆಗಳ ಕುರಿತು ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗುರುವಾರ ತಡರಾತ್ರಿ ಮೂರು ದಿನಗಳ ಭಾರತ ಪ್ರವಾಸ ಆರಂಭಿಸಿದ್ದು, ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ವ್ಯಾಪಾರ, ಹೂಡಿಕೆ ಹಾಗೂ ಇಂಧನ ಸಹಕಾರ ವಿಸ್ತರಣೆ ಪ್ರಮುಖ ವಿಷಯಗಳಾಗುವ ನಿರೀಕ್ಷೆಯಿದೆ. ಇತರ ದೇಶಗಳ ಪ್ರತಿನಿಧಿಗಳು ಶುಕ್ರವಾರ ಮತ್ತು ಶನಿವಾರ ದೆಹಲಿಗೆ ಆಗಮಿಸಲಿದ್ದಾರೆ.
ಶೃಂಗಸಭೆಗೆ ಆಗಮಿಸುತ್ತಿರುವ ಪ್ರಮುಖ ವಿದೇಶಿ ಅತಿಥಿಗಳಲ್ಲಿ ಬ್ರೆಜಿಲ್ ವಿದೇಶಾಂಗ ಸಚಿವ ಮೌರೊ ವಿಯೆರಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕ ಡಾ. ಟೆಡ್ರೋಸ್ ಘೆಬ್ರೆಯೆಸಸ್, ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (AIIB) ಅಧ್ಯಕ್ಷ ಝು ಜಿಯಾಯಿ, ಉರುಗ್ವೆ ವಿದೇಶಾಂಗ ಸಚಿವ ಮಾರಿಯೋ ಲುಬೆಟ್ಕಿನ್, ಉಗಾಂಡಾ ಉಪಾಧ್ಯಕ್ಷೆ ಜೆಸಿಕಾ ಅಲುಪೊ, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (NDB) ಅಧ್ಯಕ್ಷೆ ದಿಲ್ಮಾ ರುಸೆಫ್, ನೈಜೀರಿಯಾ ಉಪಾಧ್ಯಕ್ಷ ಕಾಶಿಂ ಶೆಟ್ಟಿಮಾ, ಬುರುಂಡಿ ಅಧ್ಯಕ್ಷ ಎವರಿಸ್ಟೆ ನ್ದಯಿಶಿಮಿಯೆ, ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನ್ಯಾಂಡ್ ಮಾರ್ಕೋಸ್ ಜೂನಿಯರ್, ಕ್ಯೂಬಾ ವಿದೇಶಾಂಗ ಸಚಿವ ಬ್ರೂನೊ ರೋಡ್ರಿಗಸ್ ಪಾರಿಲ್ಲಾ, ವಿಶ್ವ ವಾಣಿಜ್ಯ ಸಂಸ್ಥೆ (WTO) ಮಹಾನಿರ್ದೇಶಕಿ ಡಾ. ನ್ಗೋಜಿ ಒಕೊಂಜೊ-ಇವಿಯಾಲಾ, ಬೆಲಾರಸ್ ವಿದೇಶಾಂಗ ಸಚಿವ ಮ್ಯಾಕ್ಸಿಂ ರಿಜೆನ್ಕೊವ್, ಬಹ್ರೇನ್ ವಿದೇಶಾಂಗ ಸಚಿವ ಡಾ. ಅಬ್ದುಲ್ ಲತೀಫ್ ಬಿನ್ ರಶೀದ್ ಅಲ್ ಜಯಾನಿ, ಕಜಕಸ್ತಾನ ಅಧ್ಯಕ್ಷ ಕಾಸಿಂ-ಜೊಮಾರ್ಟ್ ಟೊಕಾಯೆವ್ ಹಾಗೂ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಸೇರಿದ್ದಾರೆ.

ಪ್ರಮುಖ ಸುದ್ದಿ :-   ಬಿಎಸ್‌ಪಿಯಿಂದ ಸೋದರಳಿಯ ಆಕಾಶ ಆನಂದರನ್ನೇ ಉಚ್ಚಾಟಿಸಿದ ಮಾಯಾವತಿ

ಸೆಪ್ಟೆಂಬರ್ 12ರಂದು ಮಧ್ಯಾಹ್ನ 12:25ಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ದೆಹಲಿಗೆ ಆಗಮಿಸಲಿದ್ದು, ಏಳು ವರ್ಷಗಳ ಬಳಿಕ ಭಾರತಕ್ಕೆ ಅವರ ಮೊದಲ ಭೇಟಿ ಇದಾಗಿರುವುದು ವಿಶೇಷ ಮಹತ್ವ ಪಡೆದಿದೆ.
ಶನಿವಾರ ಆರಂಭವಾಗಲಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ಆಹಾರ ಭದ್ರತೆ, ಇಂಧನ ಸಹಕಾರ, ಆರೋಗ್ಯ ಕ್ಷೇತ್ರದ ಸಮನ್ವಯ, ವಿಪತ್ತು ನಿರ್ವಹಣೆ, ಪ್ರಮುಖ ಸರಬರಾಜು ಸರಪಳಿಗಳ ಬಲವರ್ಧನೆ ಮತ್ತು ಜಾಗತಿಕ ಸವಾಲುಗಳಿಗೆ ಸಮೂಹಿಕ ಪ್ರತಿರೋಧ ಸಾಮರ್ಥ್ಯ ಹೆಚ್ಚಿಸುವ ಕುರಿತು ವ್ಯಾಪಕ ಚರ್ಚೆಗಳು ನಡೆಯಲಿವೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಯ ನಡುವೆಯೂ ಬ್ರಿಕ್ಸ್ ಒಕ್ಕೂಟವನ್ನು ಪರಿಣಾಮಕಾರಿ ವೇದಿಕೆಯಾಗಿ ರೂಪಿಸುವತ್ತ ಭಾರತ ಒತ್ತು ನೀಡುತ್ತಿದೆ.
ರಷ್ಯಾ-ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದ ಬಿಕ್ಕಟ್ಟು, ವಿಶೇಷವಾಗಿ ಹಾರ್ಮುಜ್ ಜಲಸಂಧಿಯ ನಿರ್ಬಂಧ, ಹಾಗೂ ಅಮೆರಿಕದ ಟ್ರಂಪ್ ಆಡಳಿತದ ವ್ಯಾಪಾರ ಮತ್ತು ಸುಂಕ ನೀತಿಗಳಿಂದ ಜಾಗತಿಕ ಆರ್ಥಿಕತೆ ಒತ್ತಡ ಎದುರಿಸುತ್ತಿರುವ ಸಂದರ್ಭದಲ್ಲಿ ಈ ಶೃಂಗಸಭೆ ನಡೆಯುತ್ತಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಇದೇ ವೇಳೆ ಶುಕ್ರವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನಡುವಿನ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ರಕ್ಷಣಾ, ಇಂಧನ, ತಂತ್ರಜ್ಞಾನ, ಔಷಧೋದ್ಯಮ ಮತ್ತು ಜನರ ನಡುವಿನ ಸಂಪರ್ಕ ವಿಸ್ತರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸುವ ಕುರಿತು ಸಮಗ್ರ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಪ್ಯಾಕ್ಡ್‌ ಆಹಾರದ ಪ್ಯಾಕೆಟ್ ಮುಂಭಾಗದಲ್ಲಿ ಎಚ್ಚರಿಕೆ ಲೆಬಲ್ ಹಾಕುವುದು ರಾಷ್ಟ್ರೀಯ ಹಿತಾಸಕ್ತಿ ಎಂದು ಪರಿಗಣಿಸಿ: ಸುಪ್ರೀಂಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement