ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ : ಯುಡಿಎಫ್‌ ಗೆ ಭರ್ಜರಿ ಗೆಲುವು ; ಆಡಳಿತಾರೂಢ ಎಡರಂಗಕ್ಕೆ ಹಿನ್ನಡೆ

ತಿರುವನಂತಪುರಂ: 2025ರ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (UDF) ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳೆರಡರಲ್ಲೂ ಭರ್ಜರಿ ವಿಜಯವನ್ನು ದಾಖಲಿಸಿದೆ.
ಆರು ಪ್ರಮುಖ ಮಹಾನಗರ ಪಾಲಿಕೆಗಳಲ್ಲಿ ಯುಡಿಎಫ್ ನಾಲ್ಕರಲ್ಲಿ (ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು) ಭರ್ಜರಿ ಜಯಗಳಿಸಿದೆ.  ಎಲ್‌ಡಿಎಫ್ (LDF) ಕೋಝಿಕ್ಕೋಡ್ ಅನ್ನು ಮಾತ್ರ ಉಳಿಸಿಕೊಂಡಿದೆ. ಆದರೆ, ಎಲ್‌ಡಿಎಫ್‌ ಅಧಿಕಾರದಲ್ಲಿದ್ದ ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯನ್ನು  ಎನ್‌ಡಿಎ (NDA) ಐತಿಹಾಸಕಿ ಜಯ ದಾಖಲಿಸಿದೆ.  ಪಂಚಾಯತ್‌ಗಳ  ಜಿಲ್ಲಾ ಪಂಚಾಯತ್‌ಗಳು, ಬ್ಲಾಕ್ ಪಂಚಾಯತ್‌ಗಳು, ಗ್ರಾಮ ಪಂಚಾಯತ್‌ಗಳ ಚುನಾವಣೆಯಲ್ಲಿ ಇಡೀ ರಾಜ್ಯದಾದ್ಯಂತ ಯುಡಿಎಫ್ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿದೆ.
ರಾಜ್ಯ ಚುನಾವಣಾ ಆಯೋಗ (SEC) ಸಂಜೆ 7:30 ಕ್ಕೆ ಬಿಡುಗಡೆ ಮಾಡಿದ ನವೀಕರಣಗಳ ಪ್ರಕಾರ, ಆರು ಮಹಾನಗರ ಪಾಲಿಕೆಗಳಲ್ಲಿ, ಯುಡಿಎಫ್ ನಾಲ್ಕನ್ನು ಗೆದ್ದಿದೆ, 941 ಗ್ರಾಮ ಪಂಚಾಯತಗಳಲ್ಲಿ 505, 152 ಬ್ಲಾಕ್‌ ಪಂಚಾಯತಗಳಲ್ಲಿ 79, 14 ಜಿಲ್ಲಾ ಪಂಚಾಯತಗಳಲ್ಲಿ 7 ಮತ್ತು 86 ಪುರಸಭೆಗಳಲ್ಲಿ 54ರಲ್ಲಿ ಜಯಗಳಿಸಿದೆ.
ಯುಡಿಎಫ್ 59 ಜಿಲ್ಲಾ ಪಂಚಾಯತ ಸ್ಥಾನಗಳು, 1063 ಬ್ಲಾಕ್ ಪಂಚಾಯತ ಸ್ಥಾನಗಳು ಮತ್ತು 7451 ಗ್ರಾಮ ಪಂಚಾಯತ ಸ್ಥಾನಗಳನ್ನು ಗೆದ್ದಿದೆ; ಎಲ್‌ಡಿಎಫ್ 30 ಜಿಲ್ಲಾ ಪಂಚಾಯತ ಸ್ಥಾನಗಳು, 823 ಬ್ಲಾಕ್ ಪಂಚಾಯತ ಸ್ಥಾನಗಳು ಮತ್ತು 6137 ಗ್ರಾಮ ಪಂಚಾಯತ ಸ್ಥಾನಗಳನ್ನು ಗೆದ್ದಿದೆ;  ಎನ್‌ಡಿಎ ಕೇವಲ ಒಂದು ಜಿಲ್ಲಾ ಪಂಚಾಯತ ಸ್ಥಾನ, 50 ಬ್ಲಾಕ್ ಪಂಚಾಯತ ಸ್ಥಾನಗಳು ಮತ್ತು 1363 ಗ್ರಾಮ ಪಂಚಾಯತ ಸ್ಥಾನಗಳನ್ನು ಗೆದ್ದಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ‘ಅನಿರೀಕ್ಷಿತ’ ಎಂದು ಹೇಳಿದ್ದಾರೆ. “ಎಲ್‌ಡಿಎಫ್ ನಿರೀಕ್ಷಿತ ಫಲಿತಾಂಶ ಸಾಧಿಸಲು ಸಾಧ್ಯವಾಗಲಿಲ್ಲ. ರಾಜ್ಯದಾದ್ಯಂತ ಸುಲಭ ಗೆಲುವನ್ನು ಎಡ ರಂಗವು ನಿರೀಕ್ಷಿಸಿತ್ತು. ಸೋಲಿಗೆ ಕಾರಣಗಳನ್ನು ವಿವರವಾಗಿ ಪರಿಶೀಲಿಸಲಾಗುವುದು” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಎನ್‌ಡಿಎ ಗೆದ್ದಿರುವುದು ಕಳವಳಕಾರಿ ಎಂದ ಪಿಣರಾಯಿ, ಕೋಮುವಾದದ ಪ್ರಭಾವವು ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟಿರುವವರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದ್ದಾರೆ. “ಎಲ್ಲ ರೀತಿಯ ಕೋಮುವಾದದ ವಿರುದ್ಧದ ಹೋರಾಟವನ್ನು ಬಲಪಡಿಸುವ ಅಗತ್ಯವನ್ನು ಈ ಫಲಿತಾಂಶಗಳು ಒತ್ತಿಹೇಳುತ್ತವೆ” ಎಂದು ಅವರು ಹೇಳಿದರು.
ಯುಡಿಎಫ್ ನಾಯಕರ ಹೇಳಿಕೆಗಳು
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಮುಖಂಡ ವಿ. ಡಿ. ಸತೀಶನ್ ಅವರು ಯುಡಿಎಫ್‌ನ ಭರ್ಜರಿ ಜಯವನ್ನು “ರಾಜ್ಯ ಸರ್ಕಾರದ ವಿರುದ್ಧದ ಎಚ್ಚರಿಕೆ ಮತ್ತು ಕೇರಳದಲ್ಲಿ ದುರಾಡಳಿತ ಮಾಡಿದವರ ವಿರುದ್ಧದ ಜನರ ಪ್ರತಿಭಟನೆ” ಎಂದು ಬಣ್ಣಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಅವರು, ಜನರು ಎಲ್‌ಡಿಎಫ್ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ ಎಂಬುದನ್ನು ಈ ಫಲಿತಾಂಶಗಳು ಸೂಚಿಸುತ್ತವೆ ಎಂದು ಹೇಳಿದರು.
ಎಲ್‌ಡಿಎಫ್ ಪ್ರತಿಕ್ರಿಯೆ
ಎಲ್‌ಡಿಎಫ್ ಸಂಚಾಲಕ ಟಿ. ಪಿ. ರಾಮಕೃಷ್ಣನ್ ಅವರು ಫಲಿತಾಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದಾಗಿ ತಿಳಿಸಿದರು. “ಯಾವುದಕ್ಕಾಗಿ ಇಂತಹ ತೀರ್ಪು ಬಂದಿದೆ ಎಂಬುದನ್ನು ಸೂಕ್ಷ್ಮ ಮಟ್ಟದಲ್ಲಿ ಪರಿಶೀಲಿಸಲಾಗುವುದು. ಜನರ ಅಭಿಪ್ರಾಯವನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದರು.
ತಿರುವನಂತಪುರಂನಲ್ಲಿ ಎನ್‌ಡಿಎಗೆ ಐತಿಹಾಸಿಕ ಜಯ
101 ಸದಸ್ಯರ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಎನ್‌ಡಿಎ 50 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತಿದೊಡ್ಡ ಸಾಧನೆ ಮಾಡಿದೆ. “ಕೇರಳದ ಜನತೆ ಯುಡಿಎಫ್ ಮತ್ತು ಎಲ್‌ಡಿಎಫ್‌ಗೆ ಬೇಸತ್ತಿದ್ದಾರೆ. ಅವರು ಉತ್ತಮ ಆಡಳಿತ ನೀಡಬಲ್ಲ ಮತ್ತು ಎಲ್ಲರಿಗೂ ಅವಕಾಶಗಳಿರುವ  ವಿಕಸಿತಕೇರಳಂ ನಿರ್ಮಿಸಬಲ್ಲ ಏಕೈಕ ಆಯ್ಕೆಯಾಗಿ ಎನ್‌ಡಿಎಯನ್ನು ನೋಡುತ್ತಿದ್ದಾರೆ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದಿದ್ದಾರೆ.
ಮಾಜಿ ಡಿಜಿಪಿ ಆರ್. ಶ್ರೀಲೇಖಾ ಮತ್ತು ವಿ. ವಿ. ರಾಜೇಶ ಅವರಂತಹ ಪ್ರಮುಖ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶ ಎಲ್‌ಡಿಎಫ್‌ಗೆ ಆಘಾತ ನೀಡಿದ್ದು, ಅದು ತನ್ನ ಹಿಂದಿನ ಅವಧಿಯ ಸ್ಥಾನಗಳಲ್ಲಿ ಅರ್ಧದಷ್ಟನ್ನು ಕಳೆದುಕೊಂಡು ಕೇವಲ 29 ಸ್ಥಾನಗಳನ್ನು ಗಳಿಸಿದೆ. ಯುಡಿಎಫ್ 19 ಸ್ಥಾನಗಳನ್ನು ಗಳಿಸಿ ತನ್ನ ಸ್ಥಾನಮಾನವನ್ನು ಸುಧಾರಿಸಿದೆ.
ತ್ರಿಶೂರ್ ಮಹಾನಗರ ಪಾಲಿಕೆ: 
ತ್ರಿಶೂರ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯುಡಿಎಫ್ ಪುನರಾಗಮನ ಮಾಡಿದ್ದು, 56 ವಾರ್ಡ್‌ಗಳಲ್ಲಿ 33 ವಾರ್ಡ್‌ಗಳಲ್ಲಿ ಜಯಗಳಿಸಿದೆ. ಎರಡು ಅವಧಿಗೆ ಪಾಲಿಕೆ ಆಡಳಿತ ನಡೆಸಿದ್ದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) 11 ಸ್ಥಾನಗಳನ್ನು ಗೆದ್ದಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 8 ಸ್ಥಾನಗಳನ್ನು ಗೆದ್ದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement