ತದಡಿ ಬಂದರಿನಲ್ಲಿ ದುರಂತ: ಬೋಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಮೀನುಗಾರರು ಸಾವು

ಕಾರವಾರ : ಮೀನುಗಾರಿಕೆಯಿಂದ ಮರಳಿದ ಬೋಟ್‌ನಲ್ಲಿದ್ದ ಮೀನು ಸಂಗ್ರಹದ ಕೋಣೆಯನ್ನು ಸ್ವಚ್ಛಗೊಳಿಸಲು ಇಳಿದ ಮೂವರು ಮೀನುಗಾರರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.
 ಘಟನೆಯಲ್ಲಿ ಇಬ್ಬರನ್ನು ಬಚಾವ್‌ ಮಾಡಲಾಗಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೃತರನ್ನು ನೌಶಾದ್ (48), ಅಮೀನ್ (40) ಹಾಗೂ ಅಮನ್ (26) ಎಂದು ಗುರುತಿಸಲಾಗಿದೆ. ಇವರು ತದಡಿಯ ಕುಚೈಮಾ ಬೋಟ್‌ನಲ್ಲಿ ಮೀನುಗಾರರಾಗಿ ಕೆಲಸ ಮಾಡುತ್ತಿದ್ದರು.
 ಮೀನು ಹಿಡಿದು ಮರಳಿ ಬಂದಿದ್ದ ಮೀನುಗಾರರು, ಬೋಟ್‌ನಲ್ಲಿದ್ದ ಮೀನುಗಳನ್ನು ಖಾಲಿ ಮಾಡಿದ ಬಳಿಕ ಮೀನು ಸಂಗ್ರಹಿಸುವ ಕೋಣೆಯನ್ನು ಸ್ವಚ್ಛಗೊಳಿಸಲು ಇಳಿದಾಗ ಏಕಾಏಕಿ ಉಸಿರಾಟದ ತೊಂದರೆಯಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
ಮೀನುಗಾರರು ಅಸ್ವಸ್ಥರಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿದ್ದವರು ರಕ್ಷಣೆಗೆ ಧಾವಿಸಿದ್ದು, ಇಬ್ಬರನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ. ಆದರೆ, ಮೂವರು ಮೀನುಗಾರರು ಅಷ್ಟರಲ್ಲೇ ಮೃತಪಟ್ಟಿಟ್ಟದರು ಎನ್ನಲಾಗಿದೆ. . ರಕ್ಷಿಸಲ್ಪಟ್ಟವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮೀನು ಸಂಗ್ರಹದ ಸ್ಥಳದಲ್ಲಿ ವಿಷಕಾರಿ ಅನಿಲ ಉತ್ಪಾದನೆ ಅಥವಾ ಆಮ್ಲಜನಕದ ಕೊರತೆಯಾಗಿ ಈ ದುರ್ಘಟನೆ ಸಂಭವಿಸಿರಬಹುದು ಎಂಬ ಶಂಕಿಸಲಾಗಿದೆ. ಆದರೆ, ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಇದು ತನಿಖೆಯಿಂದ ತಿಳಿದುಬರಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement