ದುಶಾನ್ಬೆ: ದೇಶದ ಸಂಸತ್ತಿನ ಮೇಲ್ಮನೆಯಲ್ಲಿ ಜೂನ್ 19ರಂದು ಹಿಜಾಬ್ ನಿಷೇಧಿಸುವ ವಿಧೇಯಕವನ್ನು ಅಂಗೀಕರಿಸಿದ ನಂತರ ಮುಸ್ಲಿಂ ಬಾಹುಳ್ಯದ ರಾಷ್ಟ್ರವಾಗಿರುವ ತಜಿಕಿಸ್ತಾನವು ಹಿಜಾಬ್ಗೆ ನಿಷೇಧ ಜಾರಿಗೆ ತರಲು ಸಜ್ಜಾಗಿದೆ.
ತಜಿಕಿಸ್ತಾನದ ಜನಸಂಖ್ಯೆಯ ಸುಮಾರು 96%ರಷ್ಟು ಜನರು ಇಸ್ಲಾಂ ಧರ್ಮದ ಅನುಯಾಯಿಗಳಾಗಿದ್ದಾರೆ. ತಜಿಕಿಸ್ತಾನದ ಸಂಸತ್ತಿನ ಮೇಲ್ಮನೆಯ 18 ನೇ ಅಧಿವೇಶನದಲ್ಲಿ ಹಿಜಾಬ್ ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ಏಷ್ಯಾ-ಪ್ಲಸ್ ವರದಿ ಮಾಡಿದಂತೆ ಮಜ್ಲಿಸಿ ಮಿಲ್ಲಿ ಮುಖ್ಯಸ್ಥ ರುಸ್ತಮ್ ಎಮೋಮಾಲಿ ಅಧ್ಯಕ್ಷತೆ ವಹಿಸಿದ್ದರು.
ಹಿಜಾಬ್ ಅನ್ನು ‘ಅನ್ಯ ಲೋಕದ ಉಡುಪು’ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಇಸ್ಲಾಂನ ಎರಡು ಅತ್ಯಂತ ಮುಖ್ಯ ಹಬ್ಬಗಳಾದ ಈದ್ ಅಲ್ ಫಿತರ್ ಹಾಗೂ ಈದ್ ಅಲ್ ಅಧಾ ಇದನ್ನು ಮಕ್ಕಳು ಆಚರಿಸುವುದಕ್ಕೆ ನಿಷೇಧ ಹೇರುವುದಕ್ಕೂ ಮೇಲ್ಮನೆ ಅನುಮೋದನೆ ನೀಡಿದೆ. ಮೇ 8ರಂದು ತಜಿಕಿಸ್ತಾನದ ಸಂಸತ್ತಿನ ಕೆಳಮನೆಯಾದ ಮಜಿಲಿಸಿ ನಮೋಯಾಂದಗಾನ್, ಹಿಜಾಬ್ ನಿಷೇಧಿಸುವ ವಿಧೇಯಕಕ್ಕೆ ಅನುಮೋದನೆ ನೀಡಿತ್ತು. ಕೇವಲ ಶಾಲೆಗಳಲ್ಲಿ ಮಾತ್ರವಲ್ಲ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಹಿಜಾಬ್(Hijab) ಧರಿಸುವುದನ್ನು ನಿಷೇಧಿಸಲಾಗುತ್ತಿದೆ.
ಈ ಹಿಂದಿನ ಆಡಳಿತಾತ್ಮಕ ಉಲ್ಲಂಘನೆಗಳ ಸಂಹಿತೆಗೆ ಮಾಡಲಾದ ತಿದ್ದುಪಡಿಗಳನ್ನು ಮಜಿಲಿಸಿ ನಮೋಯಾಂದಗಾನ್ ಅಂಗೀಕರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಹೊಸ ತಿದ್ದುಪಡಿಗಳ ಪ್ರಕಾರ, ಈ ಕಾನೂನುಗಳ ಉಲ್ಲಂಘಿಸಿದರೆ ಭಾರಿ ದಂಡ ಹಾಕಲು ಅವಕಾಶ ನೀಡುತ್ತದೆ. ಆದರೆ ಆಡಳಿತಾತ್ಮಕ ಉಲ್ಲಂಘನೆ ಸಂಹಿತೆಯು ಈ ಹಿಂದೆ ಹಿಜಾಬ್ ಅಥವಾ ಇತರೆ ಧಾರ್ಮಿಕ ಉಡುಗೆಗಳನ್ನು ಉಲ್ಲಂಘನೆ ಎಂದು ಉಲ್ಲೇಖಿಸಿರಲಿಲ್ಲ. ತಿದ್ದುಪಡಿಯಲ್ಲಿ ಅದನ್ನು ಉಲ್ಲಂಘಟನೆ ಎಂದು ಪರಿಗಣಿಸಲಾಗಿದೆ.
ಕಾನೂನು ಉಲ್ಲಂಘಿಸಿದರೆ ಭಾರಿ ದಂಡ
ಕಾನೂನುಗಳನ್ನು ಉಲ್ಲಂಘಿಸಿದ ಅಪರಾಧಿಗಳಿಗೆ 7,920 ಸೊಮೊನಿಸ್ನಿಂದ (ತಜಿಕಿಸ್ತಾನ ಕರೆನ್ಸಿ) ವಿವಿಧ ದರದ ದಂಡಗಳನ್ನು ವಿಧಿಸಲಾಗುತ್ತದೆ. ಸಂಸ್ಥೆಗಳಿಗೆ 39,500 ಸೊಮೊನಿಸ್ನಿಂದ ದಂಡ ಆರಂಭವಾಗುತ್ತದೆ (ಒಂದು ತಜಿಕಿಸ್ತಾನ ಸೊಮೊನಿಸ್ಗೆ ಭಾರತದ ಕರೆನ್ಸಿಯಲ್ಲಿ ಸುಮಾರು 7.85 ರೂ.)
ವಿಶೇಷವಾಗಿ, ಕಾನೂನು ಉಲ್ಲಂಘಿಸುವ ಸರ್ಕಾರಿ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರು ತಮ್ಮ ಮೇಲಿನ ಶಿಕ್ಷೆಗೆ ಅನುಗುಣವಾಗಿ 54,000 ದಿಂದ 57,600 ಸೊಮೊನಿಸ್ನಷ್ಟು ಭಾರಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ.
ಕುರುಚಲು ಗಡ್ಡ ಬಿಡುವುದಕ್ಕೂ ನಿಷೇಧ
ತಜಿಕಿಸ್ತಾನದಲ್ಲಿ ಹಿಜಾಬ್ ವಿರುದ್ಧ ಅನಧಿಕೃತ ನಿಷೇಧ ಜಾರಿಯಲ್ಲಿತ್ತು. ಈಗ ಅದನ್ನು ಸರ್ಕಾರ ವಿಧೇಯಕ ತರುವ ಮೂಲಕ ಅಧಿಕೃತಗೊಳಿಸಿದೆ. ದೇಶದಲ್ಲಿ ಗಂಡಸರು ಉದ್ದನೆಯ ಕುರುಚಲು ಗಡ್ಡಗಳನ್ನು ಬಿಡುವುದನ್ನೂ ನಿಷೇಧಿಸಲಾಗಿದೆ. 2007ರಲ್ಲಿ ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳು ಇಸ್ಲಾಮಿಕ್ ಧಿರಿಸು ಹಾಗೂ ಪಾಶ್ಚಿಮಾತ್ಯ ಶೈಲಿಯ ಮಿನಿ ಸ್ಕರ್ಟ್ ಧರಿಸುದು ಎರಡನ್ನೂ ನಿಷೇಧಿಸಿತ್ತು. ನಂಥರ ಇದನ್ನು ಸಾರ್ವಜನಿಕ ಸಂಘ-ಸಂಸ್ಥೆಗಳಿಗೂ ವಿಸ್ತರಿಸಿತ್ತು.
ಇತ್ತೀಚಿನ ವರ್ಷಗಳಲ್ಲಿ ತಜಿಕಿಸ್ತಾನ ಸರ್ಕಾರವು ತಜಿಕ್ ರಾಷ್ಟ್ರೀಯ ಉಡುಗೆಯನ್ನು ಧರಿಸುವುದಕ್ಕೆ ಉತ್ತೇಜನ ನೀಡಲು ಆಂದೋಲನವನ್ನು ನಡೆಸುತ್ತಿದೆ. 2018ರಲ್ಲಿ “ತಜಿಕಿಸ್ತಾನದಲ್ಲಿ ಶಿಫಾರಸು ಮಾಡಲಾದ ಉಡುಗೆಗಳ ಮಾರ್ಗದರ್ಶಿ ಪುಸ್ತಕ’ದಲ್ಲಿ ರಾಷ್ಟ್ರೀಯ ಉಡುಗೆ ಬಗ್ಗೆ ಉಲ್ಲೇಖವಿದೆ. 2017ರಲ್ಲಿ, ಮಹಿಳೆಯರು ತಜಿಕಿ ರಾಷ್ಟ್ರೀಯ ಉಡುಪು ಧರಿಸುವಂತೆ ಒತ್ತಾಯಿಸುವ ಸಂದೇಶಗಳು ಮೊಬೈಲ್ ಫೋನ್ ಬಳಕೆದಾರರಿಗೆ ರವಾನೆಯಾಗಿದ್ದವು.ತಾಲಿಬಾನ್ ಆಡಳಿತವಿರುವ ಅಫಘಾನಿಸ್ತಾನದಲ್ಲಿ ಹಿಜಾಬ್ ಸೇರಿದಂತೆ ಅನೇಕ ಇಸ್ಲಾಮಿಕ್ ಕಟ್ಟುಪಾಡುಗಳನ್ನು ವಿಧಿಸಲಾಗಿದೆ. ಆದರೆ ಅದರ ಪಕ್ಕದ ಮುಸ್ಲಿಂ ಬಾಹುಳ್ಯದ ತಜಕಿಸ್ತಾನದಲ್ಲಿ ದೇಶದಲ್ಲಿಯೇ ಇದಕ್ಕೆ ತದ್ವಿರುದ್ಧವಾದ ಕಾನೂನು ಜಾರಿಗೆ ತರಲಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ