ಎನ್‌ಸಿಇಆರ್‌ಟಿ ವಿವಾದ: ಪಠ್ಯ ಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ನ್ಯಾಯಾಂಗ ಭ್ರಷ್ಟಾಚಾರ ಕುರಿತು ಉಲ್ಲೇಖಿಸಿದ್ದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಸುಪ್ರೀಂ ಕೋರ್ಟ್‌ ಗುರುವಾರ ನಿಷೇಧಿಸಿದೆ.
ಇದು ಆಳವಾಗಿ ಬೇರೂರಿದ ಸಂಚಿನ ಫಲವಾಗಿದ್ದು, ಇದಕ್ಕೆ ಹೊಣೆಗಾರರಾದವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ ಪಂಚೋಲಿ ಅವರಿದ್ದ ಪೀಠ ಹೇಳಿದೆ.
“ಈ ಬಗ್ಗೆ ಆಳವಾದ ತನಿಖೆ ಬೇಕು. ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಪತ್ತೆಹಚ್ಚಬೇಕು. ನಾವು ಪ್ರಕರಣ ಮುಕ್ತಾಯಗೊಳಿಸುವುದಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಎಚ್ಚರಿಕೆ ನೀಡಿದರು.

ಇದು ಸಾಂಸ್ಥಿಕ ಅಧಿಕಾರವನ್ನು ದುರ್ಬಲಗೊಳಿಸಲು ಮತ್ತು ನ್ಯಾಯಾಂಗದ ಘನತೆಯನ್ನು ಕುಗ್ಗಿಸಲು ನಡೆಸಿದ ಉದ್ದೇಶಪೂರ್ವಕ ಯತ್ನದಂತೆ ಇದು ತೋರುತ್ತಿದೆ ಎಂದು ಪೀಠ ಕಿಡಿಕಾರಿದೆ.
ಎನ್‌ಸಿಇಆರ್‌ಟಿ ನಿರ್ದೇಶಕ ಡಾ. ದಿನೇಶಪ್ರಸಾದ ಸಕ್ಲಾನಿ ಅವರಿಗೆ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಅದು ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ. ಮುದ್ರಿತ ಹಾಗೂ ಡಿಜಿಟಲ್ ಪ್ರತಿಗಳನ್ನು ಸಾರ್ವಜನಿಕವಾಗಿ ದೊರೆಯದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿರುವ ಸುಪ್ರೀಂ ಕೋರ್ಟ್‌ ವಿವಾದಿತ ಅಧ್ಯಾಯ ರಚಿಸಿದ ರಾಷ್ಟ್ರೀಯ ಪಠ್ಯಕ್ರಮ ಮಂಡಳಿಯ ಸದಸ್ಯರ ವಿವರಗಳು ಹಾಗೂ ಅಂದು ನಡೆದಿದ್ದ ಸಭೆಯ ಟಿಪ್ಪಣಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ತಾಕೀತು ಮಾಡಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ಈ ಅಧ್ಯಾಯವು ನ್ಯಾಯಾಂಗದ ವೈಭವಶಾಲಿ ಇತಿಹಾಸ, ಮೂಲ ಸಂರಚನಾ ಸಿದ್ಧಾಂತವನ್ನು ಕಾಪಾಡಿದ ಪಾತ್ರ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉಳಿಸುವಲ್ಲಿ ವಹಿಸಿದ ಮಹತ್ವವನ್ನು ಕಡೆಗಣಿಸಿದೆ. ಪದಪ್ರಯೋಗವು ಸಾಮಾನ್ಯ ತಪ್ಪಿನಂತೆ ಕಾಣುವುದಿಲ್ಲ, ಇದು ನ್ಯಾಯಾಂಗದ ಗೌರವ ಮತ್ತು ಸಂಸ್ಥೆಯ ಅಧಿಕಾರವನ್ನು ಕುಗ್ಗಿಸುವ ಯೋಜಿತ ಕ್ರಮವಾಗಿರಬಹುದು ಎಂದು ಹೇಳಿದೆ.
ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಬೇಷರತ್‌ ಕ್ಷಮೆಯಾಚಿಸಿದರು. ಆದರೆ ಸಿಜೆಐ ಅವರು, ಸಮಂಜಸ ಟೀಕೆಯನ್ನು ಬೇಡ ಎನ್ನುವುದಿಲ್ಲ ಆದರೆ ವಿದ್ಯಾರ್ಥಿಗಳಿಗೆ ಪಕ್ಷಪಾತದ ಮತ್ತು ಪೂರ್ವಾಗ್ರಹದ ಚಿತ್ರಣ ನೀಡುವುದು ಶಿಕ್ಷಣದ ಅಖಂಡತೆಗೆ ಮಾರಕ ಎಂದು ನ್ಯಾಯಾಲಯ ಬುದ್ಧಿವಾದ ಹೇಳಿತು.
ತಾನು ನೀಡಿರುವ ಆದೇಶದ ಅನುಪಾಲನಾ ವರದಿಗಳು ಬಂದ ಬಳಿಕ ತಪ್ಪಿತಸ್ಥರನ್ನು ಗುರುತಿಸಲು ಸಮಿತಿ ರಚಿಸಲಾಗುವುದು ಎಂದು ನ್ಯಾಯಾಲಯ ನುಡಿಯಿತು. ವಿಚಾರಣೆ ನಾಲ್ಕು ವಾರಗಳ ಬಳಿಕ ಪ್ರಕರಣವನ್ನು ನ್ಯಾಯಾಲಯ ಮತ್ತೆ ಕೈಗೆತ್ತಿಕೊಳ್ಳಲಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement