ವಿಡಿಯೋ | ಮುಂಬೈ ಮಳೆ : ಮೇಯರ್ ಕಣ್ಣೆದುರೇ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ ; ಅಧಿಕಾರಿಗಳಿಗೆ ಸಸ್ಪೆಂಡ್‌ ವಾರ್ನಿಂಗ್‌ ನೀಡಿದ ತಾವ್ಡೆ

ಮುಂಬೈ: ಮುಂಬೈನ ದಾದರ್ ಮತ್ತು ಇತರ ತಗ್ಗು ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಬುಧವಾರ ಬೆಳಿಗ್ಗೆ ಮಳೆಯ ಪರಿಸ್ಥಿತಿಯ ಪರಿಶೀಲನೆಗೆ ನಗರ ಸಂಚಾರ ನಡೆಸಿದ ಮುಂಬೈ ಮೇಯರ್ ರಿತು ತಾವ್ಡೆ ಅವರ ಕಣ್ಣೆದುರೇ ಪೌರಕಾರ್ಮಿಕನೊಬ್ಬ ತೆರೆದ ಮ್ಯಾನ್‌ಹೋಲ್‌ಗೆ (ಒಳಚರಂಡಿ) ಬಿದ್ದ ಆಘಾತಕಾರಿ ಘಟನೆ ನಡೆದಿದೆ.
ಇದರಿಂದ ತೀವ್ರ ಆಕ್ರೋಶಗೊಂಡ ಮೇಯರ್, ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ನಗರದ ಯಾವುದೇ ಭಾಗದಲ್ಲಿ ಮ್ಯಾನ್‌ಹೋಲ್ ತೆರೆದ ಸ್ಥಿತಿಯಲ್ಲಿ ಕಂಡುಬಂದರೆ ಸಂಬಂಧಪಟ್ಟ ವಾರ್ಡ್ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸುವುದಾಗಿ ಕಡಕ್ ಎಚ್ಚರಿಕೆ ನೀಡಿದ್ದಾರೆ.
ವಾಡಿಕೆಗಿಂತ ಸುಮಾರು ಎರಡು ವಾರ ತಡವಾಗಿ ಮಂಗಳವಾರ ಮುಂಬೈಗೆ ನೈಋತ್ಯ ಮುಂಗಾರು ಪ್ರವೇಶಿಸಿದೆ. ರಾತ್ರಿಯಿಡೀ ಸುರಿದ ಜಡಿಮಳೆಯಿಂದಾಗಿ ದಾದರ್, ಹಿಂದ್‌ಮಾತಾ ಮತ್ತು ಗಾಂಧಿ ಮಾರ್ಕೆಟ್ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ಮಂಡಿಯ ಮಟ್ಟ ನೀರು ನಿಂತಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ನಗರದ ಕೆಲವು ಕಡೆ ಗೋಡೆ ಕುಸಿತದಂತಹ ಹಾನಿಗಳೂ ಸಂಭವಿಸಿವೆ.
ಮೇಯರ್ ಕಣ್ಣೆದುರೇ ದುರಂತ: ಅಧಿಕಾರಿಗಳಿಗೆ ಕ್ಲಾಸ್
ಪರಿಸ್ಥಿತಿ ಅವಲೋಕಿಸಲು ಮೇಯರ್ ರಿತು ತಾವ್ಡೆ ಅವರು ಇಂದು ಬೆಳಿಗ್ಗೆಯೇ ದಾದರ್ ಮುಂತಾದ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ತಪಾಸಣೆ ವೇಳೆಯಲ್ಲೇ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ವ್ಯಾಪ್ತಿಯ ಪೌರಕಾರ್ಮಿಕನೊಬ್ಬ ರಸ್ತೆಯಲ್ಲಿದ್ದ ತೆರೆದ ಚರಂಡಿಗೆ ಬಿದ್ದಿದ್ದಾನೆ. ತಕ್ಷಣವೇ ಅವನನ್ನು ಮೇಲಕ್ಕೆತ್ತಲಾಗಿದೆ. ಈ ಘಟನೆಯಿಂದ ಕೆರಳಿದ ಮೇಯರ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ತ್ಯಾಜ್ಯವನ್ನು ತೆಗೆಯಲು ಮ್ಯಾನ್‌ಹೋಲ್ ಮುಚ್ಚಳವನ್ನು ಸರಿಸಲಾಗಿತ್ತು. ಆದರೆ, ಅಲ್ಲಿ ಬಿಎಂಸಿ ವತಿಯಿಂದ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳು ಮತ್ತು ‘ಅಲರ್ಟ್’ ಬೋರ್ಡ್‌ಗಳನ್ನು ಆ ವ್ಯಕ್ತಿ ಗಮನಿಸಬೇಕಿತ್ತು. ಸಾರ್ವಜನಿಕರು ಇಂತಹ ಎಚ್ಚರಿಕೆ ಫಲಕಗಳನ್ನು ಗಮನಿಸಿ ಎಚ್ಚರಿಕೆಯಿಂದ ಓಡಾಡಬೇಕು” ಎಂದು ಮನವಿ ಮಾಡಿದರು. ರಸ್ತೆಗಳಿಂದ ನೀರನ್ನು ಹೊರಹಾಕಲು ಹಲವಾರು ಪಂಪ್‌ಗಳನ್ನು ಅಳವಡಿಸಲಾಗಿದ್ದು, ಬಿಎಂಸಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement