ಢಾಕಾ : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, 23 ವರ್ಷದ ಹಿಂದೂ ಯುವಕ ಚಂಚಲ್ ಭೌಮಿಕ್ ಎಂಬುವವರನ್ನು ಅತ್ಯಂತ ಕ್ರೂರವಾಗಿ ಜೀವಂತವಾಗಿ ಸುಟ್ಟು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಜನವರಿ 23ರ ಶುಕ್ರವಾರ ತಡರಾತ್ರಿ ಈ ಭಯಾನಕ ಘಟನೆ ನಡೆದಿದೆ.
ನರಸಿಂಗಡಿಯ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚಂಚಲ್, ರಾತ್ರಿ ಅಲ್ಲಿಯೇ ಮಲಗಿದ್ದರು. ಈ ವೇಳೆ ಬಂದ ದುಷ್ಕರ್ಮಿ ಹೊರಗಿನಿಂದ ಶಟರ್ ಬಂದ್ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಚಂಚಲ್ ಸಂಪೂರ್ಣವಾಗಿ ಸುಟ್ಟು ಮೃತಪಡುವ ವರೆಗೂ ದುಷ್ಕರ್ಮಿ ಅಲ್ಲಿಯೇ ಕಾಯುತ್ತ ನಿಂತು, ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕುಟುಂಬದ ಏಕೈಕ ಆಧಾರ ಸ್ತಂಭ:
ತಂದೆಯನ್ನು ಕಳೆದುಕೊಂಡಿದ್ದ ಚಂಚಲ್ ಭೌಮಿಕ್, ಇಡೀ ಕುಟುಂಬಕ್ಕೆ ಆಧಾರವಾಗಿದ್ದರು. ಅನಾರೋಗ್ಯ ಪೀಡಿತ ತಾಯಿ, ವಿಕಲಚೇತನ ಅಣ್ಣ ಮತ್ತು ತಮ್ಮನ ಜವಾಬ್ದಾರಿ ಇವರ ಮೇಲಿತ್ತು. ಕಳೆದ ಆರು ವರ್ಷಗಳಿಂದ ಗ್ಯಾರೇಜ್ನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಚಂಚಲ್ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ.
ಇದು ಕೇವಲ ವೈಯಕ್ತಿಕ ದ್ವೇಷವಲ್ಲ, ಬದಲಿಗೆ ಕೋಮು ದ್ವೇಷದಿಂದ ಪ್ರೇರಿತವಾದ ವ್ಯವಸ್ಥಿತ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ:
ಡಿಸೆಂಬರ್ 31ರಂದು ಶರಿಯತ್ಪುರದಲ್ಲಿ ಔಷಧ ವ್ಯಾಪಾರಿ ಖೋಕನ್ ದಾಸ್ (50) ಎಂಬುವವರನ್ನು ಗುಂಪೊಂದು ಅಡ್ಡಗಟ್ಟಿ, ಇರಿದು, ಪೆಟ್ರೋಲ್ ಸುರಿದು ದಹಿಸಿತ್ತು.
ಗಾರ್ಮೆಂಟ್ ಕಾರ್ಮಿಕ ದೀಪು ಚಂದ್ರ ದಾಸ್ ಎಂಬುವವರನ್ನು ಹೊಡೆದು ಕೊಂದು ನಂತರ ಶವವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಲಾಗಿತ್ತು.
ಈ ಸರಣಿ ಹತ್ಯೆಗಳು ಬಾಂಗ್ಲಾದೇಶದಾದ್ಯಂತ ಇರುವ ಹಿಂದೂ ಸಮುದಾಯದಲ್ಲಿ ತೀವ್ರ ಭೀತಿಯನ್ನು ಸೃಷ್ಟಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ