ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ ; ವರದಿ

ನವದೆಹಲಿ: ಭಾರತದ ಆರ್ಥಿಕ ಶಕ್ತಿಯು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. 2025ರ ಆರ್ಥಿಕ ಸುಧಾರಣೆಗಳ ಕುರಿತಾದ ಸರ್ಕಾರದ ಅಧಿಕೃತ ವರದಿಯ ಪ್ರಕಾರ, ಭಾರತವು 4.18 ಟ್ರಿಲಿಯನ್ ಅಮೆರಿಕನ್‌ ಡಾಲರ್ ಒಟ್ಟು ದೇಶೀಯ ಉತ್ಪನ್ನದ (GDP) ಗಾತ್ರದೊಂದಿಗೆ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಭಾರತದ ಆರ್ಥಿಕತೆಯು ಇದೇ ವೇಗದಲ್ಲಿ ಮುಂದುವರಿದರೆ, ಮುಂದಿನ 2.5 ರಿಂದ 3 ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಲಿದೆ. 2030ರ ವೇಳೆಗೆ ಭಾರತದ ಜಿಡಿಪಿ 7.3 ಟ್ರಿಲಿಯನ್ ಅಮೆರಿಕನ್‌ ಡಾಲರ್ ತಲುಪುವ ಮೂಲಕ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಗುರಿ ಹೊಂದಿದೆ.
 ಭಾರತದ ಆರ್ಥಿಕತೆಯು ಬಲಿಷ್ಠವಾಗಿ ಬೆಳೆಯುತ್ತಿದ್ದು, ರಫ್ತು ವಲಯದಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ. ಪ್ರಮುಖವಾಗಿ ಇಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಫಾರ್ಮಾಸ್ಯುಟಿಕಲ್ಸ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಂಬಲದಿಂದಾಗಿ ನವೆಂಬರ್ ತಿಂಗಳ ಸರಕು ರಫ್ತು 38.13 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದು ಜನವರಿ ತಿಂಗಳಲ್ಲಿದ್ದ 36.43 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನದಾಗಿದೆ.
2025-26ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ನೈಜ ಜಿಡಿಪಿ ಶೇಕಡಾ 8.2 ರಷ್ಟು ಬೆಳವಣಿಗೆ ಕಂಡಿದೆ. ಇದು ಮೊದಲ ತ್ರೈಮಾಸಿಕದ (7.8%) ಬೆಳವಣಿಗೆಗಿಂತಲೂ ಅಧಿಕವಾಗಿದ್ದು, ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೇ ಅತಿ ವೇಗದ ಬೆಳವಣಿಗೆ ದಾಖಲಿಸುತ್ತಿದೆ.
ಸದ್ಯ ವಿಶ್ವದ ಆರ್ಥಿಕತೆಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ. ಜಾಗತಿಕ ವ್ಯಾಪಾರದಲ್ಲಿ ಅನಿಶ್ಚಿತತೆ ಇದ್ದಾಗ್ಯೂ, ಭಾರತದ ಆಂತರಿಕ ಬೇಡಿಕೆ ಮತ್ತು ಖಾಸಗಿ ಬಳಕೆ ಆರ್ಥಿಕತೆಗೆ ಭದ್ರ ಬುನಾದಿ ಒದಗಿಸಿದೆ.
ಅಂತಾರಾಷ್ಟ್ರೀಯ ಸಂಸ್ಥೆಗಳ ಮೆಚ್ಚುಗೆ:
ವಿಶ್ವದ ಪ್ರಮುಖ ಹಣಕಾಸು ಸಂಸ್ಥೆಗಳು ಭಾರತದ ಈ ಬೆಳವಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) 2025-26ರ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆಯ ದರವನ್ನು ಶೇ. 7.3ಕ್ಕೆ ಏರಿಸಿ ಪರಿಷ್ಕರಿಸಿದೆ.
ವಿಶ್ವ ಬ್ಯಾಂಕ್ 2026ರಲ್ಲಿ ಭಾರತದಲ್ಲಿ  ಶೇ. 6.5 ರಷ್ಟು ಬೆಳವಣಿಗೆಯ ನಿರೀಕ್ಷೆ ಇದೆ ಎಂದು ಹೇಳಿದೆ. ಮೂಡೀಸ್ (Moody’s): ಜಿ-20 ರಾಷ್ಟ್ರಗಳಲ್ಲಿ ಭಾರತವೇ ಅತ್ಯಂತ ವೇಗವಾಗಿ ಬೆಳೆಯಲಿರುವ ದೇಶವಾಗಿದ್ದು, 2026ರಲ್ಲಿ ಶೇ. 6.4 ಬೆಳವಣಿಗೆ ದಾಖಲಿಸಲಿದೆ ಎಂದು ಹೇಳಿದೆ.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB)  2026ರ ಮುನ್ಸೂಚನೆಯನ್ನು ಶೇ. 7.2 ಕ್ಕೆ ಏರಿಸಿದೆ. ಐಎಂಎಫ್ (IMF) ಮತ್ತು ಓಇಸಿಡಿ (OECD) ಕೂಡ ಭಾರತದ ಬೆಳವಣಿಗೆಯ ದರವು ಶೇ. 6 ಕ್ಕಿಂತ ಮೇಲಿರಲಿದೆ ಎಂದು ಭವಿಷ್ಯ ನುಡಿದಿವೆ.
ರ್ಥಿಕ ಸದೃಢತೆಗೆ ಕಾರಣಗಳೇನು?
ಸರ್ಕಾರದ ಪ್ರಕಟಣೆಯ ಪ್ರಕಾರ, ಈ ಅಭಿವೃದ್ಧಿಗೆ ಹಲವು ಪೂರಕ ಅಂಶಗಳಿವೆ. ದೇಶದಲ್ಲಿ ಹಣದುಬ್ಬರವು ನಿಗದಿತ ಮಿತಿಗಿಂತ ಕೆಳಗಿದೆ. ಉದ್ಯೋಗವಕಾಶಗಳು ಹೆಚ್ಚುತ್ತಿದ್ದು, ನಿರುದ್ಯೋಗ ದರ ಸತತವಾಗಿ ಇಳಿಕೆಯಾಗುತ್ತಿದೆ. ರಫ್ತು ಚಟುವಟಿಕೆಗಳಲ್ಲಿ ಕ್ರಮೇಣ ಸುಧಾರಣೆ ಕಂಡುಬರುತ್ತಿದೆ. ನಗರ ಪ್ರದೇಶಗಳಲ್ಲಿ ಜನರ ಖರೀದಿ ಸಾಮರ್ಥ್ಯ ಮತ್ತು ಬಳಕೆ ಹೆಚ್ಚಿರುವುದು ಆರ್ಥಿಕತೆಗೆ ವೇಗ ನೀಡಿದೆ. ವಾಣಿಜ್ಯ ವಲಯಕ್ಕೆ ಸುಲಭವಾಗಿ ಸಾಲದ ಹರಿವು ದೊರೆಯುತ್ತಿರುವುದು ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
ಸರ್ಕಾರದ ಹೇಳಿಕೆ:
“2047ರ ವೇಳೆಗೆ ಭಾರತವು ‘ಉನ್ನತ ಮಧ್ಯಮ ಆದಾಯದ ರಾಷ್ಟ್ರ’ (High middle-income status) ಎಂಬ ಗೌರವ ಪಡೆಯುವ ಗುರಿ ಹೊಂದಿದೆ. ಸದೃಢ ಆರ್ಥಿಕ ಬೆಳವಣಿಗೆ, ರಚನಾತ್ಮಕ ಸುಧಾರಣೆಗಳು ಮತ್ತು ಸಾಮಾಜಿಕ ಪ್ರಗತಿಯ ಮೇಲೆ ನಾವು ಈ ಭವ್ಯ ಭಾರತವನ್ನು ನಿರ್ಮಿಸುತ್ತಿದ್ದೇವೆ ಎಂದು ಸರ್ಕಾರ ಹೇಳಿದೆ.
ಭಾರತ ಯಾವ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ?
ಆರ್ಥಿಕತೆ ಪುಟಿದೇಳುತ್ತಿದ್ದರೂ, ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ತಲಾ ಆದಾಯದಲ್ಲಿ ಇಂದಿಗೂ ಭಾರಿ ಅಂತರವಿದೆ. ತ್ತೀಚಿನ ವಿಶ್ವಬ್ಯಾಂಕ್ ಡೇಟಾದ ಪ್ರಕಾರ, ಭಾರತದ ತಲಾ ಜಿಡಿಪಿ (GDP) 2024 ರಲ್ಲಿ $2,694 ರಷ್ಟಿತ್ತು – ಜಪಾನ್‌ನ $32,487 ರಷ್ಟಿದೆ. ಅದು ಸುಮಾರು 12 ಪಟ್ಟು ಹೆಚ್ಚು ಮತ್ತು ಜರ್ಮನಿಯ $56,103 ರಷ್ಟಿದ್ದು ಅದು  ಮಾರು 20 ಪಟ್ಟು ಹೆಚ್ಚು.
ಭಾರತದಲ್ಲಿ, ಒಟ್ಟು 1.4 ಬಿಲಿಯನ್ ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ಜನರು 10 ರಿಂದ 26 ವರ್ಷದ ಒಳಗಿನವರಾಗಿದ್ದಾರೆ. ಈ ಲಕ್ಷಾಂತರ ಪದವೀಧರ ಯುವಕರಿಗೆ ಉತ್ತಮ ವೇತನದ ಉದ್ಯೋಗಗಳನ್ನು ಸೃಷ್ಟಿಸುವುದು ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಆದರೂ, ಆರ್ಥಿಕ ವರದಿಯು ಭವಿಷ್ಯದ ಬಗ್ಗೆ ಆಶಾದಾಯಕ ನೋಟವನ್ನು ಹೊಂದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement