ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ ವರದಿಗಾರರ ವಾರ್ಷಿಕ ಔತಣಕೂಟ ಕಾರ್ಯಕ್ರಮದಲ್ಲಿ ಹಠಾತ್ ಶೂಟೌಟ್ ಸದ್ದು ಕೇಳಿಬಂದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷಿತವಾಗಿ ಅಧಿಕಾರಿಗಳು ಸ್ಥಳಾಂತರಿಸಿದ ಘಟನೆ ನಡೆಯಿತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಭಾಗವಹಿಸಿದ್ದ ಹೈ-ಪ್ರೊಫೈಲ್ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್’ ಭೋಜನಕೂಟದ ಹೊರಗೆ ಗುಂಡಿನ ದಾಳಿ ನಡೆದಿದ್ದು, ಭದ್ರತಾ ಪಡೆಗಳು ಓರ್ವ ಶಂಕಿತ ವ್ಯಕ್ತಿಯನ್ನು ಬಂಧಿಸಿವೆ. ಬಂಧಿತನನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ ಕೋಲ್ ಥಾಮಸ್ ಅಲೆನ್ (31) ಎಂದು ಗುರುತಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಮತ್ತು ಇತರ ಅತಿಥಿಗಳು ಕುಳಿತಿದ್ದ ಬಾಲ್‌ರೂಮ್‌ನ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಸುಮಾರು 2,500 ಅತಿಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶಂಕಿತ ಅಲೆನ್ ಶಸ್ತ್ರಾಸ್ತ್ರಗಳೊಂದಿಗೆ ಹೋಟೆಲ್‌ನ ಭದ್ರತಾ ತಪಾಸಣಾ ಕೇಂದ್ರದ ಮೂಲಕ ಒಳನುಗ್ಗಲು ಯತ್ನಿಸಿದಾಗ ರಹಸ್ಯ ಸೇವೆ (Secret Service) ಮತ್ತು ಸ್ಥಳೀಯ ಪೊಲೀಸರು ಅವನನ್ನು ತಡೆದಿದ್ದಾರೆ.
ಭದ್ರತಾ ಸಿಬ್ಬಂದಿ ಮತ್ತು ಆರೋಪಿಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಯೊಬ್ಬರ ಬುಲೆಟ್ ಪ್ರೂಫ್ ಜಾಕೆಟ್‌ಗೆ ಗುಂಡು ತಗುಲಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರೋಪಿಯ ಬಳಿ ಶಾರ್ಟ್‌ಗನ್, ಹ್ಯಾಂಡ್‌ಗನ್ ಮತ್ತು ಹಲವಾರು ಚಾಕುಗಳಿರುವುದು ಪತ್ತೆಯಾಗಿದೆ. ಆತ ಒಬ್ಬನೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಉನ್ನತ ಮಟ್ಟದ ಭದ್ರತೆಯನ್ನು ಆತ ಉಲ್ಲಂಘಿಸಿದ್ದು ಹೇಗೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ.
ವಾಷಿಂಗ್ಟನ್ ಹಿಲ್ಟನ್‌ನಲ್ಲಿ ಶನಿವಾರ ರಾತ್ರಿ ಮ್ಯಾಗ್ನೆಟೋಮೀಟರ್ ಸ್ಕ್ರೀನಿಂಗ್ ಪ್ರದೇಶದ ಬಳಿ ಗುಂಡಿನ ದಾಳಿ ನಡೆದಿದೆ. ಇದರಿಂದ ಭಯಭೀತರಾದ ನೂರಾರು ಪತ್ರಕರ್ತರು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಓಡತೊಡಗಿದರು. ತಕ್ಷಣವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಸ್ಥಳಾಂತರಿಸಿದರು ಎಂದು ವರದಿಗಳು ತಿಳಿಸಿವೆ.
ಸ್ಥಳದಲ್ಲಿ ಸುಮಾರು ಐದರಿಂದ ಎಂಟು ಗುಂಡೇಟಿನ ಶಬ್ದಗಳು ಕೇಳಿದೆ. ಭದ್ರತಾ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಜನರ ರಕ್ಷಣೆಗೆ ಮುಂದಾದರು. ಸ್ಥಳವನ್ನು ತ್ವರಿತವಾಗಿ ಖಾಲಿ ಮಾಡಲಾಯಿತು. ಆವರಣವನ್ನು ಸುರಕ್ಷಿತವಾಗಿಡಲು ರಾಷ್ಟ್ರೀಯ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಯಾರು ಈ ಕೋಲ್ ಥಾಮಸ್ ಅಲೆನ್?
ಸಾಮಾಜಿಕ ಜಾಲತಾಣಗಳ ಮಾಹಿತಿಯ ಪ್ರಕಾರ, ಅಲೆನ್ ಒಬ್ಬ ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ ಎನ್ನಲಾಗಿದೆ. ಆತ ಮೆಕ್ಯಾನಿಕಲ್ ಇಂಜಿನಿಯರ್, ಕಂಪ್ಯೂಟರ್ ವಿಜ್ಞಾನಿ ಮತ್ತು ಗೇಮ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಸಂಶೋಧನಾ ಫೆಲೋ ಆಗಿ ಭಾಗವಹಿಸಿದ್ದ. ಕ್ಯಾಲ್ಟೆಕ್ ಮತ್ತು ಸಿ2 ಎಜುಕೇಶನ್ ಸಂಸ್ಥೆಗಳಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ್ದ ಈತನಿಗೆ 2024ರಲ್ಲಿ ‘ಅತ್ಯುತ್ತಮ ಶಿಕ್ಷಕ’ ಗೌರವವೂ ಸಂದಿತ್ತು. ರಾಜಕೀಯವಾಗಿ, 2024ರಲ್ಲಿ ಕಮಲಾ ಹ್ಯಾರಿಸ್ ಅವರ ಪರವಾಗಿ ರಾಜಕೀಯ ಸಮಿತಿಗೆ 25 ಡಾಲರ್ ದೇಣಿಗೆ ನೀಡಿದ್ದ ದಾಖಲೆಗಳಿವೆ.
ಟ್ರಂಪ್ ಪ್ರತಿಕ್ರಿಯೆ:
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಬಂಧಿತ ವ್ಯಕ್ತಿ ಒಬ್ಬ ಮಾನಸಿಕ ಅಸ್ವಸ್ಥ. ನಮ್ಮ ಭದ್ರತಾ ಸಿಬ್ಬಂದಿ ಅತ್ಯಂತ ಧೈರ್ಯದಿಂದ ಆತನನ್ನು ಹಿಡಿದಿದ್ದಾರೆ. ಅಧಿಕಾರಿಯೊಬ್ಬರಿಗೆ ಗುಂಡು ತಗುಲಿದೆಯಾದರೂ ಜಾಕೆಟ್‌ನಿಂದಾಗಿ ಅವರು ಸುರಕ್ಷಿತವಾಗಿದ್ದಾರೆ,” ಎಂದು ತಿಳಿಸಿದ್ದಾರೆ. ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಆರೋಪಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಮೆರಿಕ ಅಟಾರ್ನಿ ಜೀನ್ ಪಿರೋ ಅವರ ಪ್ರಕಾರ, ಅಲೆನ್ ಮೇಲೆ ಹಿಂಸಾತ್ಮಕ ಅಪರಾಧಕ್ಕೆ ಶಸ್ತ್ರ ಬಳಕೆ, ಅಪಾಯಕಾರಿ ಆಯುಧದಿಂದ ಫೆಡರಲ್ ಅಧಿಕಾರಿಯ ಮೇಲೆ ಹಲ್ಲೆ ಇವೇ ಮೊದಲಾದ ಆರೋಪ ಹೊರಿಸಲಾಗಿದೆ. ಆರೋಪಿಯನ್ನು ಪ್ರಸ್ತುತ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಎಫ್‌ಬಿಐ (FBI) ನಿರ್ದೇಶಕ ಕಾಶ್ ಪಟೇಲ್ ನೇತೃತ್ವದಲ್ಲಿ ಆರೋಪಿಯ ಹಿನ್ನೆಲೆಯ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ