ಮುಂಬೈ: ಮುಂಬೈನ ಪೊವಾಯಿ ಪ್ರದೇಶದಲ್ಲಿ ಗುರುವಾರ 17 ಮಕ್ಕಳನ್ನು ಒತ್ತೆ ಇರಿಸಿದ್ದ ಆರೋಪಿ ರೋಹಿತ್ ಆರ್ಯ ಎಂಬಾತ, ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ಕಾರ್ಯಾಚರಣೆಯ ಮೂಲಕ ಒತ್ತೆಯಲ್ಲಿದ್ದ ಎಲ್ಲಾ ಮಕ್ಕಳನ್ನು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸ್ಟುಡಿಯೋದಲ್ಲಿ ನಾಟಕೀಯ ಘಟನೆ
ಈ ನಾಟಕೀಯ ಘಟನೆಯು ‘ಆರ್.ಎ. ಸ್ಟುಡಿಯೋಸ್’ (RA Studios) ಎಂಬ ಸಣ್ಣ ಚಲನಚಿತ್ರ ಸ್ಟುಡಿಯೋ ಒಳಗೆ ನಡೆದಿದೆ. ಆರೋಪಿ ಆರ್ಯ ಮಕ್ಕಳನ್ನು ‘ಆಡಿಷನ್’ (ಆಯ್ಕೆ ಪ್ರಕ್ರಿಯೆ) ನೆಪದಲ್ಲಿ ಸ್ಟುಡಿಯೋಗೆ ಕರೆಸಿಕೊಂಡಿದ್ದ. ಒತ್ತೆಯಾಳುಗಳಾಗಿದ್ದ ಮಕ್ಕಳು 8 ರಿಂದ 14 ವರ್ಷದೊಳಗಿನವರು. ಪೊಲೀಸರು ಸ್ಥಳಕ್ಕೆ ತಲುಪಿದ ನಂತರ ಸುಮಾರು ಎರಡು ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಬಳಿಕ ಮಕ್ಕಳನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ.
ಗುರುವಾರ ಮಧ್ಯಾಹ್ನ 1:45 ಕ್ಕೆ ಪೊವಾಯಿ ಪೊಲೀಸ್ ಠಾಣೆಯ ತಂಡಕ್ಕೆ ಕರೆ ಬಂದ ತಕ್ಷಣ, ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆರಂಭದಲ್ಲಿ ಮಾತುಕತೆ ನಡೆಸಿದರೂ, ಆರ್ಯ ಮಕ್ಕಳನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದಾನೆ.
ಮಕ್ಕಳಿಗೆ ಹಾನಿ ಮಾಡುವುದಾಗಿ ಆರ್ಯ ಬೆದರಿಕೆ ಹಾಕಿದಾಗ, ಪೊಲೀಸ್ ತಂಡವು ಬಾತ್ರೂಮ್ ಮೂಲಕ ಒಳನುಗ್ಗಲು ಪ್ರಯತ್ನಿಸಿ ಯಶಸ್ವಿಯಾಯಿತು. ಎಲ್ಲಾ 17 ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿತು.
ಪೊಲೀಸರ ಪ್ರಕಾರ, ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಆರೋಪಿ ಆರ್ಯ ಏರ್ ಗನ್ ಬಳಸಿ ಪೊಲೀಸರ ಕಡೆಗೆ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ ಪೊಲೀಸರು ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಆರ್ಯನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವಿಗೀಡಾಗಿದ್ದಾನೆ.
ಒತ್ತೆಯಾಳು ನಾಟಕದ ಹಿಂದಿನ ಕಾರಣ
ಘಟನೆಗೆ ಮುನ್ನ ರೋಹಿತ್ ಆರ್ಯ ಒಂದು ವೀಡಿಯೊ ಬಿಡುಗಡೆ ಮಾಡಿದ್ದ. ಆ ವೀಡಿಯೊದಲ್ಲಿ ಆತ, “ಆತ್ಮಹತ್ಯೆ ಮಾಡಿಕೊಳ್ಳುವ ಬದಲು” ಈ ಒತ್ತೆಯಾಳು ಕೃತ್ಯವನ್ನು ಆಯ್ಕೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. “ನಾನು ರೋಹಿತ್ ಆರ್ಯ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ನಾನು ಒಂದು ಯೋಜನೆಯನ್ನು ರೂಪಿಸಿದ್ದು, ಇಲ್ಲಿ ಕೆಲವು ಮಕ್ಕಳನ್ನು ಒತ್ತೆ ಇರಿಸಿಕೊಂಡಿದ್ದೇನೆ ಎಂದು ಆರ್ಯ ಹೇಳಿಕೊಂಡಿದ್ದ.
“ನಾನು ಹಣ ಕೇಳುತ್ತಿಲ್ಲ, ನಾನು ಉಗ್ರಗಾಮಿಯಲ್ಲ,” ಎಂದಿದ್ದ ಆತ, “ಸರಳ, ನೈತಿಕ ಮತ್ತು ಕೆಲವು ಪ್ರಶ್ನೆಗಳನ್ನೊಳಗೊಂಡ ಬೇಡಿಕೆಗಳಿವೆ ಎಂದು ಹೇಳಿದ್ದ.
“ನಿಮ್ಮಿಂದ ಸಣ್ಣ ತಪ್ಪು ನಡೆಯಿತಾದರೂ, ಅದು ನನ್ನನ್ನು ಪ್ರಚೋದಿಸುತ್ತದೆ. ಆಗ ಇಡೀ ಸ್ಥಳಕ್ಕೆ ಬೆಂಕಿ ಹಚ್ಚಿ ಸಾಯುತ್ತೇನೆ,” ಎಂದು ಆರ್ಯ ಬೆದರಿಕೆ ಹಾಕಿದ್ದ. ಪೊಲೀಸರು ಸ್ಥಳದಿಂದ ಏರ್ ಗನ್ ಮತ್ತು ರಾಸಾಯನಿಕಗಳನ್ನು ಇರಿಸಿದ್ದ ಕೆಲವು ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪಾತ್ರೆಗಳನ್ನು ಆರ್ಯ ಬೆದರಿಕೆ ಹಾಕಲು ಬಳಸಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಬಾಕಿ ಹಣದ ವಿವಾದವೇ ಮೂಲ ಕಾರಣ
ಆರೋಪಿ ರೋಹಿತ್ ಆರ್ಯ ಹಿಂದೆ, ಮುಖ್ಯಮಂತ್ರಿಗಳ ‘ಮೈ ಸ್ಕೂಲ್, ಬ್ಯೂಟಿಫುಲ್ ಸ್ಕೂಲ್’ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ ‘ಪಿಎಲ್ಸಿ ಸ್ಯಾನಿಟೇಶನ್ ಮಾನಿಟರ್ ಪ್ರಾಜೆಕ್ಟ್’ (PLC Sanitation Monitor Project) ಗಾಗಿ ಸರ್ಕಾರಿ ಇಲಾಖೆಯು ತನಗೆ ಬಾಕಿ ಹಣವನ್ನು ನೀಡಬೇಕಾಗಿದೆ ಎಂದು ಆರೋಪಿಸಿದ್ದ. 2013 ರಲ್ಲಿ ಪ್ರಾರಂಭಿಸಲಾದ ತನ್ನ ‘ಲೆಟ್ಸ್ ಚೇಂಜ್’ ಅಭಿಯಾನದ ಭಾಗವಾಗಿದ್ದ ಈ ಯೋಜನೆಯು ಶಾಲಾ ಮಕ್ಕಳನ್ನು “ಸ್ವಚ್ಛತೆಯ ರಾಯಭಾರಿ”ಗಳನ್ನಾಗಿ ಮಾಡುವ ಗುರಿ ಹೊಂದಿತ್ತು. ಇಲಾಖೆಯು ತನ್ನ ಕೆಲಸಕ್ಕಾಗಿ ₹2 ಕೋಟಿ ಮಂಜೂರು ಮಾಡಿದ್ದರೂ, 2024ರ ಜನವರಿಯಿಂದ ಯಾವುದೇ ಹಣ ಪಾವತಿ ಮಾಡಿಲ್ಲ ಎಂದು ಆರ್ಯ ಹೇಳಿಕೊಂಡಿದ್ದ.
ಹಣ ಪಾವತಿ ಮಾಡುವಂತೆ ಆರ್ಯ ಅದೇ ವರ್ಷ ಎರಡು ಬಾರಿ ಉಪವಾಸ ಸತ್ಯಾಗ್ರಹ ಸಹ ಮಾಡಿದ್ದ. ಅಂದಿನ ಶಿಕ್ಷಣ ಸಚಿವ ದೀಪಕ್ ಕೇಸರಕರ್ ಅವರು ವೈಯಕ್ತಿಕ ನೆರವು ರೂಪದಲ್ಲಿ ₹7 ಲಕ್ಷ ಮತ್ತು ₹8 ಲಕ್ಷದ ಎರಡು ಚೆಕ್ಗಳನ್ನು ನೀಡಿದ್ದರು, ಆದರೆ ಹೆಚ್ಚಿನ ಸಹಾಯದ ಭರವಸೆ ಈಡೇರಿಲ್ಲ ಎಂದು ಆರ್ಯ ಆರೋಪಿಸಿದ್ದ.


ನಿಮ್ಮ ಕಾಮೆಂಟ್ ಬರೆಯಿರಿ