ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಆಪ್ತನ ಹತ್ಯೆ

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಹಿರಿಯ ನಾಯಕ ಶೇಖ್ ಅಫ್ರಿದಿ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇದು ವ್ಯವಸ್ಥಿತವಾಗಿ ನಡೆದ ಟಾರ್ಗೆಟ್ಟೆಡ್‌ ಹತ್ಯೆ (Targeted Killing) ಎನ್ನಲಾಗಿದೆ.
ಶೇಖ್ ಅಫ್ರಿದಿ ಲಷ್ಕರ್ ಸಂಘಟನೆಯ ಸ್ಥಾಪಕ ಹಫೀಜ್ ಸಯೀದ್‌ನ ಅತ್ಯಂತ ಆಪ್ತ ಸಹಚರನಾಗಿದ್ದ. ಖೈಬರ್ ಪಖ್ತುನ್ಖ್ವಾ ಭಾಗದಲ್ಲಿ ಸಂಘಟನೆಯ ಚಟುವಟಿಕೆಗಳ ಉಸ್ತುವಾರಿಯನ್ನು ಅಫ್ರಿದಿ ನೋಡಿಕೊಳ್ಳುತ್ತಿದ್ದ. ಹಾಗೂ ಹೊಸಬರನ್ನು ಭಯೋತ್ಪಾದನೆಗೆ ನೇಮಕ ಮಾಡಿಕೊಳ್ಳುವುದು ಮತ್ತು ಅವರಿಗೆ ತರಬೇತಿ ನೀಡುವುದರಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಿದ್ದ ಎನ್ನಲಾಗಿದೆ.

ಅಫ್ರಿದಿ ಬುಡಕಟ್ಟು ಜನಾಂಗಕ್ಕೆ ಸೇರಿದವನಾಗಿದ್ದರಿಂದ, ಆ ಭಾಗದಲ್ಲಿ ಈತನಿಗೆ ಬಲವಾದ ಸ್ಥಳೀಯ ಬೆಂಬಲ ಮತ್ತು ಪ್ರಭಾವವಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಈತ ಸಂಚು ರೂಪಿಸುತ್ತಿದ್ದ ಎಂದು ಭದ್ರತಾ ಅಧಿಕಾರಿಗಳು ಶಂಕಿಸಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ನೆಲೆಯೂರಿರುವ ಭಯೋತ್ಪಾದಕ ನಾಯಕರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಏಪ್ರಿಲ್ 16 ರಂದು ಲಾಹೋರ್‌ನಲ್ಲಿ ಲಷ್ಕರ್-ಎ-ತೈಬಾ ಸಹ-ಸ್ಥಾಪಕ ಅಮೀರ್ ಹಮ್ಜಾ ಮೇಲೆ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತ ನಂತರ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಕಳೆದ ಮಾರ್ಚ್‌ನಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರ ತಾಹಿರ್ ಅನ್ವರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ.
ಈ ಹತ್ಯೆಗಳು ಪಾಕಿಸ್ತಾನದಲ್ಲಿ ಅಡಗಿರುವ ಭಯೋತ್ಪಾದಕ ಗುಂಪುಗಳ ನಾಯಕರಲ್ಲಿ ತಲ್ಲಣ ಮೂಡಿಸಿವೆ. ಅಫ್ರಿದಿ ಹತ್ಯೆಯ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನು ನಿಗೂಢವಾಗಿಯೇ ಉಳಿದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement