
ನವದೆಹಲಿ: ಸಂಸತ್ತಿನಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಚೇಂಬರ್‌ಗೆ ನುಗ್ಗಿ ಅವರನ್ನು ನಿಂದಿಸಿದ್ದಾರೆ ಮತ್ತು ಪ್ರಧಾನಿಗೆ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ಘಟನೆಯ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ರಿಜಿಜು, ಇ20ರಿಂದ 25 ಕಾಂಗ್ರೆಸ್ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಗೆ ಬಲವಂತವಾಗಿ ಪ್ರವೇಶಿಸಿ, ನಿಂದನೀಯ ಭಾಷೆ ಬಳಸಿ, ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

“ಕಾಂಗ್ರೆಸ್ ಸಂಸದರೇ ಅಕ್ರಮವಾಗಿ ಚಿತ್ರೀಕರಿಸಿದ ವಿಡಿಯೋ ಇದಾಗಿದೆ. ಸುಮಾರು 20-25 ಸಂಸದರು ಗೌರವಾನ್ವಿತ ಸ್ಪೀಕರ್ ಚೇಂಬರ್‌ಗೆ ನುಗ್ಗಿ ಅವರನ್ನು ನಿಂದಿಸಿದ್ದಾರೆ ಮತ್ತು ಪ್ರಧಾನಮಂತ್ರಿಯವರಿಗೆ ಬೆದರಿಕೆ ಹಾಕಿದ್ದಾರೆ. ನಮ್ಮ ಪಕ್ಷವು ಚರ್ಚೆಯಲ್ಲಿ ನಂಬಿಕೆ ಹೊಂದಿದೆಯೇ ಹೊರತು ದೈಹಿಕವಾಗಿ ಬೆದರಿಕೆ ಹಾಕುವ ಸಂಸ್ಕೃತಿಯನ್ನಲ್ಲ,” ಎಂದು ಕಿಡಿಕಾರಿದ್ದಾರೆ.
ಬಹಿರಂಗಗೊಂಡಿರುವ ವೀಡಿಯೊದಲ್ಲಿ ಮಹಿಳಾ ಸಂಸದರು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸ್ಪೀಕರ್ ಕೊಠಡಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಸಚಿವ ರಿಜಿಜು ಕೂಡ ಸ್ಪೀಕರ್ ಪಕ್ಕದಲ್ಲಿ ನಿಂತಿರುವುದು ವೀಡಿಯೊದಲ್ಲಿದೆ.
ಕಳೆದ ವಾರ ಲೋಕಸಭೆಯಲ್ಲಿ ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರಾವಣೆ ಅವರ ಪ್ರಕಟವಾಗದ ಆತ್ಮಕಥೆಯ ಅಂಶಗಳನ್ನು ಉಲ್ಲೇಖಿಸಲು ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಅನುಮತಿ ನಿರಾಕರಿಸಿದ್ದರು. ಸ್ವೀಕರ್ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟಿಸಿದ ನಂತರ ಸಂಘರ್ಷ ತಾರಕಕ್ಕೆ ಏರಿದೆ.
ಹಲವು ಬಾರಿ ಸದನ ಮುಂದೂಡಲ್ಪಟ್ಟ ನಂತರ, ಕಾಂಗ್ರೆಸ್ ಸಂಸದರ ಗುಂಪು ಸ್ಪೀಕರ್ ಅವರ ಕೊಠಡಿಗೆ ಹೋಗಿ “ಪಕ್ಷಪಾತದ ನಡವಳಿಕೆ” ಮತ್ತು ರಾಹುಲ್ ಗಾಂಧಿಗೆ ಮಾತನಾಡಲು ಸಮಯ ನಿರಾಕರಿಸಿದ್ದನ್ನು ಪ್ರತಿಭಟಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು, “ಈ ಘಟನೆಯಿಂದ ಸ್ಪೀಕರ್ ಅವರು ತೀವ್ರವಾಗಿ ನೊಂದಿದ್ದಾರೆ. ನಿಯಮಗಳ ಪ್ರಕಾರ ಸಭಾಧ್ಯಕ್ಷರ ಅನುಮತಿ ಇಲ್ಲದೆ ಯಾರೂ ಮಾತನಾಡುವಂತಿಲ್ಲ. ಆದರೆ ರಾಹುಲ್ ಗಾಂಧಿ ಅವರು ತಮಗೆ ಯಾರ ಅನುಮತಿಯೂ ಬೇಕಿಲ್ಲ ಎಂದು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ