ಪಾಕಿಸ್ತಾನದ ವೈಮಾನಿಕ ದಾಳಿಯ ನಂತರ ತಾಲಿಬಾನ್ ಪ್ರತಿದಾಳಿ: 15 ಪಾಕ್ ಸೈನಿಕರು ಸಾವು

ಪಾಕಿಸ್ತಾನದ ವಾಯು ದಾಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ತಾಲಿಬಾನ್ ಪಡೆಗಳು ಪ್ರತಿದಾಳಿ ನಡೆಸಿದ್ದು, ಒಟ್ಟು 15 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದ ಸರ್ಕಾರದ ವಕ್ತಾರ ಮೌಲ್ವಿ ಮೊಹಮ್ಮದ್ ಖಾಸಿಂ ರಿಯಾಜ್ ಅವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, “ಬಹ್ರಾಂಪುರ ಜಿಲ್ಲೆಯಲ್ಲಿನ ಡ್ಯುರಾಂಡ್ ರೇಖೆಯ ಬಳಿ ಕಳೆದ ರಾತ್ರಿ ನಡೆದ ಅಫ್ಘಾನ್ ಪಡೆಗಳ ಪ್ರತಿದಾಳಿಯಲ್ಲಿ 15 ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ. ಅಲ್ಲದೆ, ಈ ಕಾರ್ಯಾಚರಣೆಯಲ್ಲಿ ಅಫ್ಘಾನ್ ಪಡೆಗಳು ಮೂರು ಪಾಕಿಸ್ತಾನಿ ಸೇನಾ ನೆಲೆಗಳನ್ನು ವಶಪಡಿಸಿಕೊಂಡು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ” ಎಂದು ಹೇಳಿದ್ದಾರೆ.
ಕಾಬೂಲ್ ಮತ್ತು ಪಾಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಅಫ್ಘಾನ್ ಪಡೆಗಳು ಈಗ ಹೆಲ್ಮಂಡ್, ಕಂದಹಾರ್, ಝಬುಲ್, ಪಾಕ್ತಿಕಾ, ಪಾಕ್ಟಿಯಾ, ಖೋಸ್ಟ್, ನಂಗರ್‌ಹಾರ್ ಮತ್ತು ಕುನಾರ್ ಸೇರಿದಂತೆ ಪಾಕಿಸ್ತಾನದ ಜೊತೆಗಿನ ಗಡಿಭಾಗದಾದ್ಯಂತ ಇರುವ ಪಾಕಿಸ್ತಾನಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ.

ವಾಯು ದಾಳಿ ಮತ್ತು ಪ್ರತೀಕಾರ
ಗುರುವಾರ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಎರಡು ಮತ್ತು ಆಗ್ನೇಯ ಪಾಕ್ತಿಕಾದಲ್ಲಿ ಒಂದು ಸೇರಿದಂತೆ – ಮೂರು ಸ್ಫೋಟಗಳು ವರದಿಯಾಗಿವೆ. ಇದನ್ನು ತಾಲಿಬಾನ್ ಆಡಳಿತದ ರಕ್ಷಣಾ ಸಚಿವಾಲಯವು ಖಂಡಿಸಿದ್ದು, ಪಾಕಿಸ್ತಾನವು ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
“ಪಾಕಿಸ್ತಾನಿ ಸೇನೆಯು ಕಾಬೂಲ್ ಮೇಲೆ ನಡೆಸಿದ ವಾಯು ದಾಳಿಗೆ ಪ್ರತೀಕಾರವಾಗಿ, ತಾಲಿಬಾನ್ ಪಡೆಗಳು ಗಡಿಯುದ್ದಕ್ಕೂ ವಿವಿಧ ಪ್ರದೇಶಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ಭೀಕರ ಸಂಘರ್ಷದಲ್ಲಿ ತೊಡಗಿವೆ” ಎಂದು ಅಫ್ಘಾನ್ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ರಕ್ಷಣಾ ಸಚಿವಾಲಯದ ವಕ್ತಾರ ಇನಾಯತ್ ಖೋವರಾಜ್ಮ್ ಅವರು ಎಎಫ್‌ಪಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿ, “ಯಶಸ್ವಿ” ಕಾರ್ಯಾಚರಣೆಗಳು ಮಧ್ಯರಾತ್ರಿಯ ವೇಳೆಗೆ ಕೊನೆಗೊಂಡಿವೆ. “ವಿರೋಧಿ ಬಣವು ಅಫ್ಘಾನಿಸ್ತಾನದ ಭೂಪ್ರದೇಶವನ್ನು ಮತ್ತೊಮ್ಮೆ ಉಲ್ಲಂಘಿಸಿದರೆ, ನಮ್ಮ ಸಶಸ್ತ್ರ ಪಡೆಗಳು ತಮ್ಮ ಪ್ರದೇಶವನ್ನು ರಕ್ಷಿಸಲು ಸಿದ್ಧವಾಗಿವೆ ಮತ್ತು ಬಲವಾಗಿ ಪ್ರತಿಕ್ರಿಯಿಸುತ್ತವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಅಫ್ಘಾನಿಸ್ತಾನದ ಮೇಲೆ ನಡೆದ ದಾಳಿಯ ಹಿಂದೆ ತಾನು ಇರುವುದನ್ನು ಪಾಕಿಸ್ತಾನವು ದೃಢಪಡಿಸಿಲ್ಲವಾದರೂ, “ತನ್ನ ನೆಲದಲ್ಲಿ ಪಾಕಿಸ್ತಾನಿ ತಾಲಿಬಾನ್‌ಗೆ ಆಶ್ರಯ ನೀಡುವುದನ್ನು ನಿಲ್ಲಿಸಬೇಕು ಎಂದು ಅದು ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತಕ್ಕೆ ಕರೆ ನೀಡಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP)
ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP), ಅಫ್ಘಾನ್ ತಾಲಿಬಾನ್‌ನ ಸೈದ್ಧಾಂತಿಕ ಮಿತ್ರನಾಗಿದ್ದು,, 2001-2021ರ ಸಂಘರ್ಷದ ಸಮಯದಲ್ಲಿ ಸಹಕರಿಸಿತ್ತು.
2021ರಿಂದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ತನ್ನ ನೂರಾರು ಸೈನಿಕರನ್ನು ಕೊಂದಿದೆ ಎಂದು ಪಾಕಿಸ್ತಾನ ಆರೋಪಿಸಿದೆ. “ಈ ಸಂಜೆ, ತಾಲಿಬಾನ್ ಪಡೆಗಳು ಶಸ್ತ್ರಾಸ್ತ್ರಗಳನ್ನು ಬಳಸಲು ಪ್ರಾರಂಭಿಸಿದವು. ನಾವು ಗಡಿಯುದ್ದಕ್ಕೂ ನಾಲ್ಕು ಕಡೆಗೆ ಲಘು ಮತ್ತು ನಂತರ ಭಾರೀ ಫಿರಂಗಿ ಗುಂಡು ಹಾರಿಸಿದೆವು,” ಎಂದು ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಖೈಬರ್-ಪಾಖ್ತುನ್‌ಖ್ವಾ ಪ್ರಾಂತ್ಯದ ಹಿರಿಯ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಪಾಕಿಸ್ತಾನಿ ಪಡೆಗಳು ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದೆ ಎಂದು ಶಂಕಿಸಲಾದ ಮೂರು ಅಫ್ಘಾನ್ ಕ್ವಾಡ್ಕಾಪ್ಟರ್‌ಗಳನ್ನು ಹೊಡೆದುರುಳಿಸಿವೆ. ತೀವ್ರ ಯುದ್ಧ ಮುಂದುವರೆದಿದೆ, ಆದರೆ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ,” ಎಂದು ಅವರು ಹೇಳಿದ್ದಾರೆ.

ಎಎಫ್‌ಪಿ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪರ್ವತ ಪ್ರದೇಶಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ಟಿಟಿಪಿ ಉಗ್ರರು ಹಿಂಸಾಚಾರವನ್ನು ತೀವ್ರಗೊಳಿಸಿದ್ದಾರೆ. ತನ್ನ ಪ್ರದೇಶವನ್ನು ಬಳಸಿ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಉಗ್ರರನ್ನು ಹೊರಹಾಕಲು ಅಫ್ಘಾನಿಸ್ತಾನ ವಿಫಲವಾಗಿದೆ ಎಂದು ಪಾಕಿಸ್ತಾನ ಆರೋಪಿಸಿದ್ದು, ಇದನ್ನು ಅಫ್ಘಾನಿಸ್ತಾನ ನಿರಾಕರಿಸಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರು ಕಳೆದ ವಾರ ತನ್ನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿ, ಟಿಟಿಪಿ ಬೆಂಬಲಿಸುವುದನ್ನು ನಿಲ್ಲಿಸುವಂತೆ ಅಫ್ಘಾನ್ ತಾಲಿಬಾನ್‌ಗೆ ಮನವರಿಕೆ ಮಾಡುವ ಪ್ರಯತ್ನಗಳು ವಿಫಲವಾಗಿವೆ ಎಂದಿದ್ದರು. “ನಾವು ಇನ್ನು ಇದನ್ನು ಸಹಿಸುವುದಿಲ್ಲ. ಆಶ್ರಯ ತಾಣಗಳು ನಮ್ಮ ನೆಲದಲ್ಲಿರಲಿ ಅಥವಾ ಅಫ್ಘಾನ್ ನೆಲದಲ್ಲಿರಲಿ, ಅವರಿಗೆ ಅನುಕೂಲ ಮಾಡಿಕೊಡುವವರಿಗೆ ನಾವು ಒಗ್ಗಟ್ಟಿನಿಂದ ಪ್ರತಿಕ್ರಿಯಿಸಬೇಕು,” ಎಂದು ಅವರು ಹೇಳಿದ್ದರು. ಶನಿವಾರ, ವಾಯುವ್ಯ ಪಾಕಿಸ್ತಾನದಲ್ಲಿ 20 ಭದ್ರತಾ ಅಧಿಕಾರಿಗಳು ಮತ್ತು ಮೂವರು ನಾಗರಿಕರ ಸಾವಿಗೆ ಕಾರಣವಾದ ಮಾರಣಾಂತಿಕ ದಾಳಿಯ ಹೊಣೆಯನ್ನು ಟಿಟಿಪಿ ಹೊತ್ತುಕೊಂಡಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement