ದೇವರಿಯಾ (ಉತ್ತರ ಪ್ರದೇಶ): ಅಚ್ಚುಮೆಚ್ಚಿನ ತಿನಿಸು ತಿನ್ನಬೇಕೆಂಬ ಹಂಬಲ ಯಾರಿಗೆ ಇರುವುದಿಲ್ಲ ಹೇಳಿ? ಆದರೆ ಅದೇ ಹಂಬಲ ವ್ಯಸನವಾಗಿ ಬದಲಾದಾಗ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಒಂದು ನಿದರ್ಶನವಾಗಿದೆ. ಅತ್ಯಂತ ಪ್ರಸಿದ್ಧ ಬೀದಿ ಬದಿಯ ಆಹಾರವಾದ ಕೇವಲ ಒಂದು ಪ್ಲೇಟ್ ‘ಮೊಮೊಸ್’ ತಿನ್ನುವ ಚಪಲಕ್ಕೆ ಬಿದ್ದ 14 ವರ್ಷದ ಬಾಲಕನೊಬ್ಬ, ಮನೆಯಲ್ಲಿದ್ದ ಸುಮಾರು ₹85 ಲಕ್ಷ ಮೌಲ್ಯದಷ್ಟು ಚಿನ್ನದ ಒಡವೆಗಳನ್ನೇ ಕದ್ದು ಮೊಮೊಸ್ ಮಾರಾಟಗಾರನಿಗೆ ನೀಡಿ, ಅದನ್ನು ತಿನ್ನುತ್ತಿದ್ದ ವಿಚಿತ್ರ ಘಟನೆ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಅತ್ತೆ ಬಂದಾಗ ಬಯಲಾಯ್ತು ಬಾಲಕನ ಕೈಚಳಕ!
ಈ ಕಳ್ಳತನದ ಕತೆ ಬೆಳಕಿಗೆ ಬಂದಿದ್ದು ತೀರಾ ಆಕಸ್ಮಿಕವಾಗಿ. ಬಾಲಕನ ಅತ್ತೆ ತನ್ನ ಒಡವೆಗಳನ್ನು ಬಾಲಕನ ಮನೆಯಲ್ಲಿ ಇಟ್ಟಿದ್ದ ಕಪಾಟಿನ ಲಾಕರ್‌ನಲ್ಲಿದ್ದಿದ್ದನ್ನು ತೆಗೆದುಕೊಳ್ಳಲು ಬಂದಾಗ ಅಲ್ಲಿ ಆಭರಣಗಳು ಇಲ್ಲದ್ದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಲಾಕರ್‌ನಲ್ಲಿ ಇಟ್ಟಿದ್ದ ಅಮೂಲ್ಯ ಆಭರಣಗಳು ಮಾಯವಾಗಿದ್ದವು. ಮನೆಯವರನ್ನೆಲ್ಲ ವಿಚಾರಿಸಿದಾಗ ಯಾರಿಗೂ ಇದರ ಬಗ್ಗೆ ಸಣ್ಣ ಸುಳಿವೂ ಇರಲಿಲ್ಲ. ಆದರೆ ಮನೆಯ ಒಳಗಿನವರೇ ಯಾರೋ ಕೈಚಳಕ ತೋರಿಸಿರಬಹುದೆಂಬ ಸಂಶಯದಿಂದ ಬಾಲಕನನ್ನು ಗದರಿಸಿ ಕೇಳಿದಾಗ, ಆತ ಬಾಯಿಬಿಟ್ಟ ಸತ್ಯ ಕೇಳಿ ಮನೆಯವರು ಹೌಹಾರಿದ್ದಾರೆ.
ಚಿನ್ನ ಕೊಟ್ಟು ‘ಮೊಮೊಸ್’ ತಿಂದ ಕಿಲಾಡಿ!
ತನ್ನ ಮೊಮೊಸ್ ತಿಂಡಿಯ ಪ್ರೀತಿಯ ಬಗ್ಗೆ ಬಾಲಕ ಹೇಳಿದ್ದು, ತಿಂಡಿಗಾಗಿ ಚಿನ್ನವನ್ನು ಕದ್ದುಕೊಂಡು ಹೋಗಿ ನೀಡುತ್ತಿದ್ದೆ ಎಂದು ಬಾಯ್ಬಿಟ್ಟಿದ್ದಾನೆ. ಬಾಲಕನಿಗೆ ಸ್ಥಳೀಯ ರಾಂಪುರ ಪಟ್ಟಣದ ರಸ್ತೆಬದಿಯ ಮೊಮೊಸ್ ಎಂದರೆ ಪಂಚಪ್ರಾಣ. ಅದನ್ನು ತಿನ್ನಲು ಹಣವಿಲ್ಲದಿದ್ದಾಗ, ಆತ ಮನೆಯಲ್ಲಿದ್ದ ಚಿನ್ನದ ಒಡವೆಗಳ ಮೇಲೆ ಕಣ್ಣು ಹಾಕಿದ್ದಾನೆ.
ಒಂದೊಂದೇ ಒಡವೆಗಳನ್ನು ಕದ್ದು ನೇರವಾಗಿ ಮೊಮೊಸ್ ಅಂಗಡಿಯವನಿಗೆ ನೀಡಿ, ಬದಲಾಗಿ ಪ್ಲೇಟ್‌ಗಟ್ಟಲೆ ಮೊಮೊಸ್ ಸವಿಯುತ್ತಿದ್ದ..! ಪ್ರತಿದಿನವೂ ಒಡವೆಗಳನ್ನು ತೆಗೆದುಕೊಂಡು ಹೋಗಿ ಅಂಗಡಿಯವನಿಗೆ ಕೊಟ್ಟು ತಿಂಡಿ ಸವಿಯುತ್ತಿದ್ದ. ಒಟ್ಟಾರೆಯಾಗಿ ಬಾಲಕ ಸುಮಾರು ₹85 ಲಕ್ಷ ಮೌಲ್ಯದಷ್ಟು ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿ ಅಂಗಡಿವನಿಗೆ ಕೊಟ್ಟು ಮೊಮೊಸ್ ಅನ್ನು ತಿಂದಿದ್ದಾನೆ…! ಹೊಟ್ಟೆಬಾಕತನ ಮನುಷ್ಯನನ್ನ ಎಲ್ಲಿಗೆ ತಲುಪಿಸುತ್ತದೆ ಎಂಬುದಕ್ಕೆ ಇದೊಂದು ಆಘಾತಕಾರಿ ಉದಾಹರಣೆ. ಮಕ್ಕಳು ಏನನ್ನು ತಿನ್ನುತ್ತಿದ್ದಾರೆ ಮತ್ತು ಅದಕ್ಕೆ ಹಣ ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಪ್ರಕರಣ ಉತ್ತಮ ನಿದರ್ಶನವಾಗಿದೆ.
ಪೋಲಿಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ತಮ್ಮದೇ ಮನೆಯ ಹುಡುಗ ಇಂತಹ ಕೆಲಸ ಮಾಡಿದ್ದಾನೆ ಎಂದು ತಿಳಿದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಬಾಲಕನ ಮಾತು ನಂಬಿ ಚಿನ್ನದ ಒಡವೆಗಳನ್ನು ಪಡೆದುಕೊಂಡ ಆ ಮೊಮೊಸ್ ವ್ಯಾಪಾರಿಯ ವಿರುದ್ಧವೂ ತನಿಖೆ ನಡೆಯುತ್ತಿದೆ. ಅಲ್ಲದೆ, ಅಧಿಕಾರಿಗಳು ಬಾಲಕನ ಸಂಭಾವ್ಯ ಸಹಚರರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ರುಚಿಗೆ ದಾಸನಾದ ಬಾಲಕ ಈಗ ಪೊಲೀಸ್ ವಿಚಾರಣೆಯ ಬಿಸಿ ಅನುಭವಿಸುವಂತಾಗಿದೆ. ಸಣ್ಣ ಚಪಲವೊಂದು ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ತಳ್ಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ